ಕಾಂಗ್ರೆಸ್ಸಿಗೆ ಹೋಗ್ತಾರಾ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ : ಮುಂದಿನ ನಡೆ ಬಗ್ಗೆ ಸ್ಪಷ್ಟನೆ

KannadaprabhaNewsNetwork |  
Published : Apr 01, 2025, 12:50 AM ISTUpdated : Apr 01, 2025, 09:47 AM IST
31ಕೆಪಿಎಲ್21 ಕೊಪ್ಪಳ ಗವಿಮಠಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಭೇಟಿಯಾಗಿ, ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳೊಂದಿಗೆ ಮಾತುಕತೆಯಾಡುತ್ತಿರುವುದು. | Kannada Prabha

ಸಾರಾಂಶ

ನಾನೆಂದು ಕಾಂಗ್ರೆಸ್ಸಿಗೆ ಹೋಗುವುದಿಲ್ಲ. ಆದರೆ, ಇದನ್ನು ಸೋಷಿಯಲ್ ಮೀಡಿಯಾ ಮೂಲಕ ಯಡಿಯೂರಪ್ಪ, ಅವರ ಮಗ ವಿಜಯೇಂದ್ರ ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ. ಇದನ್ನು ಯಾರೂ ನಂಬಬೇಡಿ

ಕೊಪ್ಪಳ: ನಾನು ಈ ಜನ್ಮದಲ್ಲಿ ಅಲ್ಲ, ಮುಂದಿನ ಜನ್ಮದಲ್ಲಿಯೂ ಕಾಂಗ್ರೆಸ್ಸಿಗೆ ಹೋಗುವುದಿಲ್ಲ. ಕಾಂಗ್ರೆಸ್ ಮುಸ್ಲಿಮರ ಹಿತ ಕಾಯುವ ಪಕ್ಷ ಎಂದು ಬಿಜೆಪಿ ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ ಸ್ಪಷ್ಟಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೆಂದು ಕಾಂಗ್ರೆಸ್ಸಿಗೆ ಹೋಗುವುದಿಲ್ಲ. ಆದರೆ, ಇದನ್ನು ಸೋಷಿಯಲ್ ಮೀಡಿಯಾ ಮೂಲಕ ಯಡಿಯೂರಪ್ಪ, ಅವರ ಮಗ ವಿಜಯೇಂದ್ರ ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ. ಇದನ್ನು ಯಾರೂ ನಂಬಬೇಡಿ ಎಂದು ಮನವಿ ಮಾಡಿದರು.

ಕಾಂಗ್ರೆಸ್‌ ಮಹಾನಾಯಕ ಮತ್ತು ಯಡಿಯೂರಪ್ಪ ಮಗ ವಿಜಯೇಂದ್ರ ಮಹಾಕಳ್ಳರು. ಕೋವಿಡ್ ಸಮಯದಲ್ಲಿ ಹತ್ತಾರು ಸಾವಿರ ಕೋಟಿ ರುಪಾಯಿಯಷ್ಟು ವಿಜಯೇಂದ್ರ ದುಡ್ಡು ಮಾಡಿದ್ದಾರೆ. ಇಂಥವರು ಬಿಜೆಪಿಗೆ ಬೇಕು ಎನ್ನುವಂತಾಗಿದೆ. ರಾಜ್ಯವನ್ನು ಮಾಜಿ ಸಿಎಂ ಯಡಿಯೂರಪ್ಪ ಕುಟುಂಬಕ್ಕೆ ಗುತ್ತಿಗೆ ಕೊಟ್ಟಂತಾಗಿದೆ. ಅಲ್ಲದೇ ಬಿಜೆಪಿಯೂ ಹಿಂದೂಗಳ ಪರ ಇಲ್ಲ ಎಂದರು.

ಅಡ್ಜೆಸ್ಟ್‌ಮೆಂಟ್ ಇದೆ. ಸರಿಯಾಗಿ ತನಿಖೆ ಮಾಡಿದರೆ ಪೋಕ್ಸೊ ಪ್ರಕರಣದಲ್ಲಿ ಯಡಿಯೂರಪ್ಪ ಜೈಲಿಗೆ ಹೋಗುತ್ತಾರೆ ಎಂದರು.

ನಾವು ಚೆನ್ನಮ್ಮ, ರಾಯಣ್ಣ ಬ್ರಿಗೇಡ್ ಪರವಾಗಿ ಕೆಲಸ ಮಾಡಲ್ಲ. ಎಲ್ಲ ಹಿಂದುಗಳ ಪರವಾಗಿ ಕೆಲಸ ಮಾಡುತ್ತೇವೆ. ಆ ಮೇಲೆ ಚೆನ್ನಮ್ಮ, ರಾಯಣ್ಣ ಹಾಗೂ ಅಂಬೇಡ್ಕರ್ ನಮ್ಮ ಪರವಾಗಿಯೇ ಬರುತ್ತಾರೆ ಎಂದರು.

ಹೊಸ ಪಕ್ಷ ಕಟ್ಟುವ ಕುರಿತು ನಾನು ಜನರ ಅಭಿಪ್ರಾಯ ಸಂಗ್ರಹ ಮಾಡುತ್ತೇನೆ. ಅದಾದ ಮೇಲೆ ಪಕ್ಷ ಕಟ್ಟುವ ತೀರ್ಮಾನ ಮಾಡುತ್ತೇನೆ. ರಾಜ್ಯದಲ್ಲಿ ಕೇವಲ ಗ್ಯಾರಂಟಿ ಕೊಟ್ಟರೆ ಆಗದು. ಜನರು ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಬೇಕಾಗಿದೆ. ಇದನ್ನು ಯಾರೂ ಮಾಡುತ್ತಿಲ್ಲ ಎಂದರು.

ವೀರಶೈವ ಲಿಂಗಾಯತರಿಗೆ ಮೀಸಲಾತಿ ತಪ್ಪಿಸಿದ್ದೇ ಯಡಿಯೂರಪ್ಪ, ವಿಜಯೇಂದ್ರ. ನಮ್ಮನ್ನೆಲ್ಲ ಹೊಡೆಸಿದ್ದು, ಜೈಲಿಗೆ ಕಳುಸಿದ್ದು ಇವರೇ ಎಂದರು.

ಜೈಲ್‌ನಲ್ಲಿ ಒಬ್ಬ ಜೈಲು ಅಧಿಕಾರಿ ಇದ್ದಾನೆ. ಅವನು ಲಿಂಗಾಯತರವ. ಅವ ಬರೀ ಚಮಚಾಗಿರಿ ಮಾಡುತ್ತಿದ್ದಾನೆ. ಅವನನ್ನು ಕಳುಹಿಸಿದ್ದ ಈ ವಿಜಯೇಂದ್ರ. ಆತ ಯಾರು ಎನ್ನುವುದು ಮಾಧ್ಯಮದವರಿಗೆ ಗೊತ್ತಿದೆ. ನಾನು ಹೇಳಬೇಕಾಗಿಲ್ಲ ಎಂದರು.

ಈತ ಡ್ರಗ್ ನೆಪದಲ್ಲಿ ಹಿರೋಯಿನ್ ಮನೆಗಳ ಮೇಲೆ ದಾಳಿ ಮಾಡಿ, ಮೊಬೈಲ್ ಕಿತ್ತುಕೊಳ್ಳುತ್ತಿದ್ದ. ಆಗ ವಿಜಯೇಂದ್ರನ ಎಲ್ಲ ವೀಡಿಯೋ ಡಿಲಿಟ್ ಮಾಡುತ್ತಿದ್ದ. ಪಾಪ ವಾಲ್ಮಿಕಿ ಜನಾಂಗದ ನಾಯಕ ಜಾರಕಿಹೊಳಿ ಅವರನ್ನು ಬಲಿ ಕೊಟ್ಟರು ಎಂದರು.

ರಮೇಶ ಜಾರಕಿಹೊಳಿ ನೀರಾವರಿ ಮಂತ್ರಿಯಾಗಿದ್ದ. ಆಗ ದುಡ್ಡು ಹೊಡೆಯಲು ವಿಜಯೇಂದ್ರನಿಗೆ ಸಮಸ್ಯೆಯಾಯಿತು. ಅದಕ್ಕೆ ಅವನನ್ನು ಸಿಕ್ಕಿ ಹಾಕಿಸಿದರು ಎಂದರು.

ಮಾಧ್ಯಮವರ ಮೇಲೆ ಹರಿಹಾಯ್ದ ಯತ್ನಾಳ: ಮಾಧ್ಯಮದವರು ಕೇಳಿದ ಪ್ರಶ್ನೆಗೆಲ್ಲ, ವಿಜಯೇಂದ್ರ ಅವರು ವಾಟ್ಸ್‌ಆ್ಯಪ್ ಮಾಡಿದ ಪ್ರಶ್ನೆ ಕೇಳಬೇಡಿ. ನೀವೆಲ್ಲ ಏನು ಅಂತಾ ಗೊತ್ತು ಎಂದು ಬಿಜೆಪಿ ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ ಮಾಧ್ಯಮದವರ ಮೇಲೆ ಹರಿಹಾಯ್ದರು.

ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಮಾಧ್ಯಮದವರ ವಿರುದ್ಧವೇ ಕೆಂಡಕಾರಿದರು. ಯಾವ ಚಾನಲ್ ಯಾರ ಪರವಾಗಿದೆ ಎಂದು ಗೊತ್ತಿದೆ. ಯಾವ ಪತ್ರಿಕೆಯವರು ಏನು ಅಂತಾನೂ ಗೊತ್ತಿದೆ ಎಂದರು. ಮಾಧ್ಯಮವರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ತರಾಟೆಗೆ ತೆಗೆದುಕೊಂಡ ಮೇಲೆ ಪ್ರಶ್ನೆಗಳಿಗೆ ಉತ್ತರಿಸಿದರು.

ಗವಿಮಠಕ್ಕೆ ಭೇಟಿ: ವಿಜಯಪುರದಲ್ಲಿ ನಡೆಯಲಿರುವ ಸಿದ್ಧೇಶ್ವರ ಸ್ವಾಮೀಜಿಯವರ ಪುಣ್ಯಾರಾಧನೆ ಕಾರ್ಯಕ್ರಮಕ್ಕೆ ಗವಿಸಿದ್ಧೇಶ್ವರ ಸ್ವಾಮೀಜಿಗಳನ್ನು ಆಹ್ವಾನ ಮಾಡಿದರು. ಗವಿಮಠಕ್ಕೆ ಭೇಟಿ ನೀಡಿ, ಗವಿಸಿದ್ಧೇಶ್ವರ ಸ್ವಾಮೀಜಿಯವರ ಆಶೀರ್ವಾದ ಪಡೆದು, ಕೆಲಹೊತ್ತು ಕುಶಲೋಪರಿ ಮಾತನಾಡಿದರು.

ಮುಂದಿನ ಸಿಎಂ ಯತ್ನಾಳ ಘೋಷಣೆ: ಗವಿಮಠಕ್ಕೆ ಆಗಮಿಸಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ಬೆಂಬಲಿಗರು ಮುಂದಿನ ಸಿಎಂ ಯತ್ನಾಳ ಎಂದು ಘೋಷಣೆ ಕೂಗಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ