6 ಸ್ಥಾನಗಳಲ್ಲೂ ಕೈ ಅಭ್ಯರ್ಥಿಗಳ ಗೆಲುವು

KannadaprabhaNewsNetwork | Published : May 29, 2024 12:47 AM

ಸಾರಾಂಶ

ರಾಮನಗರ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಉತ್ತಮ ಆಡಳಿತ ಹಾಗೂ ಗ್ಯಾರಂಟಿ ಯೋಜನೆಗಳನ್ನು ಪರಿಗಣಿಸಿ ಮತದಾರರು ರಾಜ್ಯದಲ್ಲಿ ನಡೆಯುತ್ತಿರುವ ವಿಧಾನ ಪರಿಷತ್‌ನ 3 ಪದವೀಧರ ಹಾಗೂ 3 ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದಾರೆ ಎಂದು ಕೆಪಿಸಿಸಿ ಶಿಕ್ಷಕರ ಘಟಕ ಅಧ್ಯಕ್ಷ ಬಸವರಾಜ ಗುರಿಕಾರ ವಿಶ್ವಾಸ ವ್ಯಕ್ತಪಡಿಸಿದರು.

ರಾಮನಗರ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಉತ್ತಮ ಆಡಳಿತ ಹಾಗೂ ಗ್ಯಾರಂಟಿ ಯೋಜನೆಗಳನ್ನು ಪರಿಗಣಿಸಿ ಮತದಾರರು ರಾಜ್ಯದಲ್ಲಿ ನಡೆಯುತ್ತಿರುವ ವಿಧಾನ ಪರಿಷತ್‌ನ 3 ಪದವೀಧರ ಹಾಗೂ 3 ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದಾರೆ ಎಂದು ಕೆಪಿಸಿಸಿ ಶಿಕ್ಷಕರ ಘಟಕ ಅಧ್ಯಕ್ಷ ಬಸವರಾಜ ಗುರಿಕಾರ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಪದವೀಧರರು ಹಾಗೂ ಶಿಕ್ಷಕರ ಪರವಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ವಿಧಾನ ಪರಿಷತ್ ನ 6 ಸ್ಥಾನಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ ಎಂದರು.

ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಈ ಹಿಂದೆ ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದಾಗ ಪದವೀಧರರಿಗೆ ಶಿಷ್ಯ ವೇತನವನ್ನು ನೀಡುವ ಯೋಜನೆ ರೂಪಿಸಲಾಗಿತ್ತು. ಬಿಜೆಪಿ ಸರ್ಕಾರದಲ್ಲಿ ಅನುದಾನಿತ ಶಾಲೆಗಳ ಸಮಸ್ಯೆ, ವೇತನ ತಾರತಮ್ಯ ಮೊದಲಾದ ಸಮಸ್ಯೆಗಳಿದ್ದವು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸರ್ಕಾರಿ ಶಾಲೆಗಳಿಗೆ 11494 ಶಿಕ್ಷಕರ ನೇಮಕಾತಿ, 35 ಸಾವಿರ ಅತಿಥಿ ಶಿಕ್ಷಕರ ನೇಮಕ ಮಾಡಲಾಗಿದೆ.

2162 ಸರ್ಕಾರಿ ಶಾಲೆಗಳ 7342 ಕೊಠಡಿಗಳ ದುರಸ್ತಿಗೆ 70 ಕೋಟಿ ಅನುದಾನ ನೀಡಲಾಗಿದೆ. 58 ಲಕ್ಷ ವಿದ್ಯಾರ್ಥಿಗಳಿಗೆ 280 ಕೋಟಿ ವೆಚ್ಚದಲ್ಲಿ ಪೌಷ್ಠಿಕ ಆಹಾರ ವಿತರಣೆ, ಸರ್ಕಾರಿ ಶಾಲೆಯ 45 ಲಕ್ಷ ಮಕ್ಕಳಿಗೆ 43 ಕೋಟಿ ವೆಚ್ಚದಲ್ಲಿ ಎರಡು ಜತೆ ಸಮವಸ್ತ್ರ ವಿತರಣೆ ಮಾಡಲಾಗಿದೆ. ಶಿಕ್ಷಕರ ಕೋರಿಕೆಯ ಮೇರೆಗೆ 29 ಸಾವಿರ ಶಿಕ್ಷಕರಿಗೆ ಅವರು ಬಯಸಿದ ಸ್ಥಳಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು.

ಅತ್ಯುತ್ತಮ ಸಾಧನೆಗೈದ ವಿಶ್ವವಿದ್ಯಾಲಯಗಳಿಗೆ ತಲಾ 50 ಲಕ್ಷ ರು.ಗಳಂತೆ ಒಟ್ಟು 350 ಕೋಟಿ ರು. ಅನುದಾನ ನೀಡಲಾಗಿದೆ. ಅತಿಥಿ ಉಪನ್ಯಾಸಕರಿಗೆ ಕನಿಷ್ಠ 5 ಸಾವಿರ ರು.ಗಳಿಂದ ಗರಿಷ್ಠ 8 ಸಾವಿರ ರು.ಗಳಿಗೆ ವೇತನ ಹೆಚ್ಚಳ ಮಾಡಲಾಗಿದೆ. 5 ಲಕ್ಷ ರು. ವೈದ್ಯಕೀಯ ಸೌಲಭ್ಯ ಹಾಗೂ 60 ವರ್ಷದ ನಂತರ ನಿವೃತ್ತಿಯಾಗುವಾಗ ಬರಿಗೈಯಿಂದ ಕಳುಹಿಸದೇ 5 ಲಕ್ಷ ರು.ಗಳ ಇಡಿ ಗಂಟು ನೀಡಲಾಗುವುದು ಎಂದರು.

19 ಸಾವಿರ ಎನ್‌ಪಿಎಸ್‌ ಯೋಜನೆಯಲ್ಲಿದ್ದ ನೌಕರರನ್ನು ಓಪಿಎಸ್ ವ್ಯಾಪ್ತಿಗೆ ಒಳಪಡಿಸಲಾಗಿದೆ. ಕೇಂದ್ರ ಸರ್ಕಾರ ತನ್ನ ನೌಕರರಿಗೆ ತುಟ್ಟಿ ಭತ್ಯೆ ನೀಡಿದ ಕ್ಷಣಾರ್ಧದಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಿದೆ. ಗೊಂದಲದ ಗೂಡಾಗಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಬದಲಿಸಿ ರಾಜ್ಯ ಶಿಕ್ಷಣ ನೀತಿಯನ್ನು ತರಲು ಸಮಿತಿ ರಚಿಸಲಾಗಿದೆ ಎಂದು ಬಸವರಾಜ ಗುರಿಕಾರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಯುವ ಕಾಂಗ್ರೆಸ್ ಘಟಕ ಜಿಲ್ಲಾಧ್ಯಕ್ಷ ಗುರುಪ್ರಸಾದ್ , ಘಟಕದ ಜಿಲ್ಲಾಧ್ಯಕ್ಷ ಆರ್ .ಕೆ.ಬೈರಲಿಂಗಯ್ಯ, ಗೌರವಾಧ್ಯಕ್ಷ ಪಟೇಲ್ ಸಿ.ರಾಜು ಇತರರಿದ್ದರು.ಕೋಟ್ .........

ಬೆಂಗಳೂರು ಪದವೀಧರ ಕ್ಷೇತ್ರದ ಅಭ್ಯರ್ಥಿ ರಾಮೋಜಿಗೌಡ ಅವರು ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ನಿರತರಾಗಿದ್ದು, ಜೂನ್ 3 ರಂದು ನಡೆಯಲಿರುವ ಚುನಾವಣೆಯಲ್ಲಿ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಬೆಂಬಲಿಸಬೇಕು.

- ಬಸವರಾಜ ಗುರಿಕಾರ, ರಾಜ್ಯಾಧ್ಯಕ್ಷರು, ಶಿಕ್ಷಕರ ಘಟಕ, ಕೆಪಿಸಿಸಿ28ಕೆಆರ್ ಎಂಎನ್ 2.ಜೆಪಿಜಿ

ರಾಮನಗರದಲ್ಲಿ ಕೆಪಿಸಿಸಿ ಶಿಕ್ಷಕರ ಘಟಕ ಅಧ್ಯಕ್ಷ ಬಸವರಾಜ ಗುರಿಕಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Share this article