)
ಬಸವರಾಜ ಹಿರೇಮಠ
ವಿಧಾನ ಪರಿಷತ್ನ ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಇನ್ನೇನು ಮತದಾನಕ್ಕೆ ದಿನಗಣನೆ ಶುರುವಾಗುತ್ತಿದ್ದಂತೆ ಪಕ್ಷೇತರರು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಲ್ಲಿ ಆತಂಕ ಹುಟ್ಟಿಸಿದ್ದಾರೆ. 14 ಜನ ಅಭ್ಯರ್ಥಿಗಳು ಕಣದಲ್ಲಿರುವುದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಲೆಕ್ಕಾಚಾರವನ್ನು ತುಸು ಜಟಿಲಗೊಳಿಸಿದೆ.
ಸ್ವತಂತ್ರ ಅಭ್ಯರ್ಥಿಗಳು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಮತಗಳನ್ನು ವಿಭಜಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಆ ಪಕ್ಷಗಳಿಗೆ ಚಿಂತೆಯ ವಿಷಯವಾಗಿದೆ. ಪಕ್ಷೇತರರ ಪೈಕಿ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಲಕ್ಷಾಂತರ ನಿರುದ್ಯೋಗಿ ಯುವಕರ ಬೃಹತ್ ಹೋರಾಟದ ನೇತೃತ್ವ ವಹಿಸಿದ್ದ ಆರ್. ಕಾಂತ್ಕುಮಾರ್ ಪ್ರಮುಖ ಪಕ್ಷಗಳ ಗೆಲುವಿನ ಹಾದಿಗೆ ಅಡ್ಡಿಯಾಗಲಿದ್ದಾರೆ ಎಂಬ ಚರ್ಚೆ ಇದೀಗ ಕ್ಷೇತ್ರದಲ್ಲಿ ಶುರುವಾಗಿದೆ.ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸುಮಾರು 97,000 ನೋಂದಾಯಿತ ಮತದಾರರಿದ್ದು, ಇಲ್ಲಿ ಪ್ರತಿಯೊಂದು ಮತವೂ ನಿರ್ಣಾಯಕವಾಗಬಲ್ಲದು. ತಮ್ಮ ಮತಬ್ಯಾಂಕ್ಗೆ ಧಕ್ಕೆ ತರಬಲ್ಲ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಯುವಂತೆ ಮನವೊಲಿಸಲು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಪ್ರಯತ್ನಿಸಿದ್ದವು. ನಾಮಪತ್ರ ಸಲ್ಲಿಸಿದ್ದ 18 ಅಭ್ಯರ್ಥಿಗಳ ಪೈಕಿ ನಾಲ್ವರು ಮಾತ್ರ ಹಿಂದೆ ಸರಿದಿದ್ದು, ಸದ್ಯ 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಪದವೀಧರರ ನೋಂದಣಿ ಸಂಖ್ಯೆ ಕಡಿಮೆ ಇರುವುದು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಅವರ ಭಾಗವಹಿಸುವಿಕೆ ಅಷ್ಟಕ್ಕಷ್ಟೇ. ರಾಜಕೀಯ ವಿಶ್ಲೇಷಕರೊಬ್ಬರ ಪ್ರಕಾರ, ಹಿಂದಿನ ಪ್ರತಿನಿಧಿಗಳು ತಮ್ಮ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಯತ್ನಿಸಿದ್ದಾರೆಯೇ ಹೊರತು ಸಫಲರಾಗಿಲ್ಲ ಎಂಬ ಭಾವನೆ ಅನೇಕ ಪದವೀಧರರಲ್ಲಿದೆ. ಕಾಂತ್ಕುಮಾರ್ ಅವರ ಸ್ಪರ್ಧೆಯು ಈ ಚುನಾವಣಾ ಕಣಕ್ಕೆ ಹೊಸ ಆಯಾಮ ನೀಡಿದೆ. ''''''''''''''''ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘಟನೆ (ಅಕ್ಸಾ) ಅಧ್ಯಕ್ಷರಾಗಿ, ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಗಳ ನೇತೃತ್ವ ವಹಿಸುವ ಮೂಲಕ ಅವರು ನಿರುದ್ಯೋಗಿ ಯುವಜನರ ನಡುವೆ ಗುರುತಿಸಿಕೊಂಡಿದ್ದಾರೆ. ಯುವ ಪದವೀಧರರ ವಲಯದಲ್ಲಿ ಅವರಿಗಿರುವ ಜನಪ್ರಿಯತೆಯು, ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ಮತಗಳನ್ನು ಸೆಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ.