ಕೈಲ್ ಮುಹೂರ್ತ ಹಬ್ಬವನ್ನು ಸಾಂಪ್ರದಾಯಿಕವಾಗಿ ಕೊಡಗು ಜಿಲ್ಲೆಯಾದ್ಯಂತ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೈಲ್ ಮುಹೂರ್ತ ಹಬ್ಬವನ್ನು ಸಾಂಪ್ರದಾಯಿಕವಾಗಿ ಕೊಡಗು ಜಿಲ್ಲೆಯಾದ್ಯಂತ ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.ಕೈಲ್‌ಪೋಳ್ದ್(ಕೊಡವ ಭಾಷೆ), ಕೈಲ್ ಮುಹೂರ್ತ(ಕನ್ನಡ). ಕೊಡವ ಭಾಷೆಯಲ್ಲಿ ಕೈಲ್ ಎಂದರೆ ಆಯುಧ. ಪೋಳ್ದ್ ಎಂದರೆ ಹಬ್ಬ ಎಂದು ಅರ್ಥವಿದೆ. ಹಾಗಾಗಿ ಈ ಹಬ್ಬ ಕೊಡವರ ಆಯುಧ ಪೂಜೆಯೆಂದೇ ಪರಿಗಣಿಸಲ್ಪಡುತ್ತದೆ. ಕೊಡವ ಕ್ಯಾಲೆಂಡರ್ ಪ್ರಕಾರ ಕೊಡವ ತಿಂಗಳ ಚಿನ್ಯಾರ್‌ನ 18ನೇ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಂದರೆ ಪ್ರತಿವರ್ಷ ಸೆ.3 ರಂದು ಕೊಡಗಿನಾದ್ಯಂತ ಕೈಲ್ ಪೋಳ್ದ್ ಆಚರಣೆಯ ಸಂಭ್ರಮ ಮನೆ ಮಾಡಿರುತ್ತದೆ. ಜಿಲ್ಲೆಯ ಗಾಳಿಬೀಡು, ನಾಲ್ಕುನಾಡು ವ್ಯಾಪ್ತಿಯಲ್ಲಿ ಬೇರೆಬೇರೆ ದಿನದಂದು ಹಬ್ಬ ಆಚರಿಸಲಾಗುತ್ತದೆ. ಅಂದು ಮುಂಜಾನೆ ಮನೆಯ ಯಜಮಾನ ತೋಟದಿಂದ ಕುತ್ತರ್ಚಿ ಎಂಬ ಮರದ ಸಣ್ಣ ಪುಟ್ಟ ಕೊಂಬೆಯನ್ನು ತಂದು ನೇರಳೆ ಮರದ ರೆಂಬೆಯೊಂದಿಗೆ ಅಲಂಕರಿಸಿ ಹಾಲು ಮರಕ್ಕೆ ಸಿಕ್ಕಿಸುವ ಪದ್ಧತಿ ಇದೆ. ನಂತರ ತಮ್ಮ ಕೃಷಿ ಚಟುವಟಿಕೆಗಳಿಗೆ ಬಳಸಲಾದ ನೇಗಿಲು, ನೋಗ, ಹಾಗೂ ನೇಗಿಲಿಗೆ ನೊಗ ಕೊಟ್ಟ ದನವನ್ನು ಸ್ವಚ್ಛಗೊಳಿಸಿ, ಶೃಂಗರಿಸಲಾಗುತ್ತದೆ. ನಂತರ ಕೃಷಿಗೆ ಬಳಸಿಕೊಳ್ಳಲಾದ ಎಲ್ಲ ವಸ್ತುವನ್ನು ಚೆನ್ನಾಗಿ ಶುದ್ಧವಾಗಿ ತೊಳೆದು ನೆಲ್ಲಿಕ್ಕಿಯಲ್ಲಿಟ್ಟು(ದೇವರಮನೆ) ಪೂಜಿಸಲಾಗುತ್ತದೆ. ಇದು ಕೊಡಗಿನವರಿಗೆ ಕೃಷಿಯೊಂದಿಗೆ ಇರುವ ಸಂಬಂಧವನ್ನು ಸೂಚಿಸುತ್ತದೆ. ಕೈಲ್ ಮುಹೂರ್ತ ಹಬ್ಬದ ನಂತರ ಕತ್ತಿ, ಕೋವಿಗಳು ಬಳಕೆಯಾದರೆ ಅಲ್ಲಿಯವರೆಗೆ ವ್ಯವಸಾಯದಲ್ಲಿ ಬಳಕೆಯಾದ ನೇಗಿಲು, ನೊಗ ಇತ್ಯಾದಿ ಉಪಕರಣಗಳಿಗೆ ವಿರಾಮ ದೊರೆಯುತ್ತದೆ. ಈ ಎಲ್ಲಾ ಉಪಕರಣ ತೊಳೆದು ಪೂಜೆ ಸಲ್ಲಿಸಲಾಯಿತು. ಉಳುಮೆ ಮಾಡಿದ ಎತ್ತುಗಳ ಮೈ ತೊಳೆದು ಅವುಗಳಿಗೆ ಕುಂಕುಮ, ಗಂಧ ಹಚ್ಚಿ ಅಲಂಕರಿಸಲಾಗಿತ್ತು. ಕೈಲು ಮುಹೂರ್ತ ಹಬ್ಬದ ವಿಶೇಷವಾಗಿರುವ ಕಡಂಬಿಟ್ಟು ಹಾಗೂ ಹಂದಿ ಮಾಂಸದ ಊಟ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಸೇವಿಸಿದರು. ವಿಶೇಷ ಖಾದ್ಯದ ಊಟದ ಬಳಿಕ ಎಲ್ಲರೂ ಊರ್ ಮಂದ್‌ನಲ್ಲಿ ಸೇರಿ ಅಲ್ಲಿ ಕೋವಿಯ ಮೂಲಕ ತೆಂಗಿನ ಕಾಯಿಗೆ ಗುಂಡು ಹಾರಿಸಿ ಹಬ್ಬ ಆಚರಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.