ಕೈವಾರ ತಾತಯ್ಯ ಈ ನಾಡು ಕಂಡ ಅಪರೂಪದ ಸಂತರು, ಸಮಾಜ ಸುಧಾರಕರು: ಎಚ್.ಎ.ವೆಂಕಟೇಶ್

KannadaprabhaNewsNetwork |  
Published : Mar 04, 2026, 01:15 AM IST
12 | Kannada Prabha

ಸಾರಾಂಶ

ಕೈವಾರ ನಾರೇಯಣಯತಿ ಅವರು ಒಂದು ಸಾಧಾರಣ ಸಂಸಾರದಲ್ಲಿದ್ದು ಒಬ್ಬ ಬಳೆ ವ್ಯಾಪಾರಿಯಾಗಿ ಜೀವನ ಸಾಗಿಸುತ್ತಾ ಮಕ್ಕಳನ್ನು ಪಡೆದು, ನಂತರ ದಿನಗಳಲ್ಲಿ ಸಂಸಾರ ತ್ಯಜಿಸಿ, ಸನ್ಯಾಸ ಸ್ವೀಕರಿಸಿ, ಸಮಾಜವನ್ನು ಆಧ್ಯಾತ್ಮಿಕ ಮಾರ್ಗಕ್ಕೆ ಕೊಂಡೊಯ್ಯುವ ಕೆಲಸದಲ್ಲಿ ತೊಡಗಿಸಿಕೊಂಡರು.

ಕನ್ನಡಪ್ರಭ ವಾರ್ತೆ ಮೈಸೂರು

ಕೈವಾರ ತಾತಯ್ಯನವರು ಈ ನಾಡು ಕಂಡ ಅಪರೂಪದ ಸಂತರು, ಸಮಾಜ ಸುಧಾರಕರು, ಮಹಾನ್ ಜ್ಞಾನಿಗಳು, ಯೋಗಿಗಳು, ಸಿದ್ಧಪುರುಷರು ಹಾಗೂ ತ್ರಿಕಾಲ ಜ್ಞಾನಿಗಳು ಎಂದು ಶ್ರೀ ಯೋಗಿ ನಾರಾಯಣ ಯತಿಂದ್ರರ ಪ್ರಚಾರ ಸಭಾ ಪ್ರಧಾನ ಸಂಚಾಲಕ ಹಾಗೂ ಮೈಲಾಕ್ ಮಾಜಿ ಅಧ್ಯಕ್ಷ ಎಚ್.ಎ. ವೆಂಕಟೇಶ್ ಬಣ್ಣಿಸಿದರು.

ನಗರದ ಸರಸ್ವತಿಪುರಂ ನಲ್ಲಿರುವ ಬಣಜಿಗ (ಬಲಿಜ) ವಿದ್ಯಾರ್ಥಿನಿಲಯದಲ್ಲಿ ಕೈವಾರ ತಾತಯ್ಯನವರ 300ನೇ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಸದಾ ಭಕ್ತಿ, ಭಜನೆ ,ಧ್ಯಾನ ಮತ್ತು ಉಪದೇಶಗಳ ಮೂಲಕ ಅಂತರಂಗ ಶುದ್ದಿಗೆ ಒತ್ತು ಕೊಟ್ಟರು. ಶಾಂತ ಸ್ವಭಾವ, ಪ್ರೀತಿ, ಸರಳ ಬದುಕನ್ನು ಜಗತ್ತಿಗೆ ಸಾರಿದ ಮಹಾನ್ ಚೇತನ ಎಂದರು.

ಕೈವಾರ ನಾರೇಯಣಯತಿಯ ಕಾಲ ಕ್ರಿ.ಶ.1730 ರಿಂದ1840.100 ವರ್ಷಗಳ ಸುದೀರ್ಘ ಬದುಕಿನಲ್ಲಿ ಅರ್ಧಶತಕ ಪ್ರಾಪಂಚಿಕ ಜೀವನವನ್ನು, ಉಳಿದರ್ದ ಬಾಳನ್ನು ಯೋಗಿಯಾಗಿ ಬಾಳಿದವರು. ಒಂದು ಸಾಧಾರಣ ಸಂಸಾರದಲ್ಲಿದ್ದು ಒಬ್ಬ ಬಳೆ ವ್ಯಾಪಾರಿಯಾಗಿ ಜೀವನ ಸಾಗಿಸುತ್ತಾ ಮಕ್ಕಳನ್ನು ಪಡೆದು, ನಂತರ ದಿನಗಳಲ್ಲಿ ಸಂಸಾರ ತ್ಯಜಿಸಿ, ಸನ್ಯಾಸ ಸ್ವೀಕರಿಸಿ, ಸಮಾಜವನ್ನು ಆಧ್ಯಾತ್ಮಿಕ ಮಾರ್ಗಕ್ಕೆ ಕೊಂಡೊಯ್ಯುವ ಕೆಲಸದಲ್ಲಿ ತೊಡಗಿಸಿಕೊಂಡರು. ನಿಜಕ್ಕೂ ತಾತಯ್ಯನವರ ಜೀವನ ಒಂದು ಅದ್ಭುತ ಪವಾಡ ಎಂದರು.

ಸಂಸಾರ ಜೀವನದಲ್ಲಿ ಬಳೆಗಾರ ವೃತ್ತಿಯಲ್ಲಿ ನಿರತರಾಗಿದ್ದ ತಾತಯ್ಯನವರು ಯೋಗಿ ಬಾಳಿನಲ್ಲಿ ಕವಿ, ಸಮಾಜಮುಖಿ ಚಿಂತಕ, ಸಾಮಾಜಿಕ ಪಿಡುಗುಗಳನ್ನು ಪರಿಹರಿಸಿದ ಹರಿಕಾರನಾಗಿ, ಕೈವಾರ ನಾರೇಯಣಪ್ಪ ಸಾರ್ಥಕತೆಯನ್ನು ಕಂಡಿದ್ದಾರೆ. ಕಾಲಜ್ಞಾನ, ನಾರೇಯಣ ಕವಿ ಶತಕ, ಸೂಕ್ಷ್ಮ ಬೀಮಲಿಂಗ ಮತ್ತು ಪ್ರಪಂಚ ನಾರೇಯಣ ಕವಿ ಪದ್ಯಗಳು ತಾತಯ್ಯನವರು ಬರೆದಿರುವ ಪ್ರಮುಖ ಕೃತಿಗಳು ಎಂದರು.

ಒಟ್ಟಾರೆಯಾಗಿ ಸಾಹಿತ್ಯ, ವಿಜ್ಞಾನ ,ತಂತ್ರಜ್ಞಾನ, ಆರ್ಥಿಕ, ರಾಜಕೀಯ, ಧಾರ್ಮಿಕ ಮತ್ತು ಆಧ್ಯಾತ್ಮಿಕಗಳೆಲ್ಲದರ ಸಮ ಹಿತ ಮಿಶ್ರಣವಿರುವ ತಾತಯ್ಯನವರ ವಿಚಾರಧಾರೆಗಳು ಎಲ್ಲಾ ಕಾಲಕ್ಕೂ ಅನ್ವಯಗೊಳ್ಳುವ ಗುಣ ಹೊಂದಿದೆ ಎಂದರು.

ಸಂಘದ ಅಧ್ಯಕ್ಷ ಎಂ. ನಾರಾಯಣ್, ಪ್ರಧಾನ ಕಾರ್ಯದರ್ಶಿ ಎಚ್.ಆರ್. ಗೋಪಾಲಕೃಷ್ಣ, ಖಜಾಂಚಿ ಕೆ. ಚಂದ್ರಶೇಖರ್, ನಿರ್ದೇಶಕರಾದ ಬಿ.ಕೆ. ಸುರೇಶ್, ಟಿ.ಎಸ್. ರಮೇಶ್, ಎ.ಚನ್ನಕೇಶವ, ನಿವೃತ್ತ ಶಿಕ್ಷಕ ರಮೇಶ್, ಮಂಜುನಾಥ್ ವ್ಯವಸ್ಥಾಪಕ ಎಚ್.ಆರ್. ವೆಂಕಟೇಶ್, ನಿಲಯಪಾಲಕ ರಾಮಕೃಷ್ಣಯ್ಯ, ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಜೆಟ್‌ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ನಿರೀಕ್ಷೆಗಳೇನು?
ಕೇಂದ್ರ ಸರ್ಕಾರದ 4 ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಲು ಆಗ್ರಹಿಸಿ ಸಿಐಟಿಯು ಪ್ರತಿಭಟನೆ