ಕನ್ನಡಪ್ರಭ ವಾರ್ತೆ ಬೇಲೂರು
ಕಾನೂನು ಪಾಲನೆ ಮಾಡಬೇಕಾಗಿದ್ದ ಅಧಿಕಾರಿಗಳೇ ಕಾನೂನು ಗಾಳಿಗೆ ತೂರಿ ತಮಗೆ ತೋಚಿದಂತೆ ಚುನಾವಣೆ ನಡೆಸಿ ಗ್ರಾಮ ಪಂಚಾಯತ್ ಸದಸ್ಯರ ಮೇಲೆ ದರ್ಪ ತೋರಿದ್ದಾರೆಂದು ಕಳ್ಳೇರಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀನಿವಾಸ್ ಹಾಗೂ ಸದಸ್ಯೆ ಮೀನಾಕ್ಷಿ ಗಿರೀಶ್ ಆರೋಪ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಳ್ಳೇರಿ ಗ್ರಾಪಂನಲ್ಲಿ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗದ ಅ ವರ್ಗಕ್ಕೆ ಮೀಸಲಾಗಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ಎಂ ಮಮತಾರವರು, ಕಳ್ಳೇರಿ ಗ್ರಾಪಂ ವ್ಯಾಪ್ತಿಯ ಸಾಮಾನ್ಯ ಕ್ಷೇತ್ರದಿಂದ ಹಾಗೂ ಪರಿಶಿಷ್ಟ ಜಾತಿ ಕ್ಷೇತ್ರದಿಂದ ಗೆದ್ದಂತ ನನಗೆ ಹಾಗೂ ಮೀನಾಕ್ಷಿ ಅವರಿಗೆ ಚುನಾವಣೆಗೆ ಸಂಬಂಧಿಸಿದಂತೆ ನೋಟಿಸ್ ಕೂಡ ನೀಡಿದ್ದರು. ಅದರಂತೆ ಚುನಾವಣೆ ಸಭೆ ೧ ಗಂಟೆಗೆ ಕರೆಯಲು ನಿಗದಿಯಾಗಿತ್ತು. ಆದರೆ ಚುನಾವಣಾಧಿಕಾರಿ ಸುಮಾರು ೨೦ ನಿಮಿಷಗಳ ತಡವಾಗಿ ಬಂದು ತರಾತುರಿಯಲ್ಲಿ ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿದರು. ನಾವು ಹೊರಗಡೆ ಇದ್ದು ನನಗೆ ಕಾಲು ನಡೆಯಲು ಸ್ವಲ್ಪ ತೊಂದರೆ ಇದ್ದ ಕಾರಣ ತಡವಾಗಿ ಬಂದ ಹಿನ್ನೆಲೆಯಲ್ಲಿ ನನ್ನ ಹಾಗೂ ಮೀನಾಕ್ಷಿ ಅವರನ್ನು ಒಳಗೆ ಬರದಂತೆ ತಡೆದಿದ್ದಲ್ಲದೆ ನೀವಿಬ್ಬರು ಸಭೆಗೆ ಬರುವ ಹಾಗಿಲ್ಲ ಎಂದು ಜೋರು ಮಾತಿನಿಂದ ನಿಂದಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಈ ಸಂಬಂಧವಾಗಿ ಪಂಚಾಯತ್ ರಾಜ್ ನಿಯಮವನ್ನು ತೋರಿಸುವಂತೆ ಪಟ್ಟುಹಿಡಿದಾಗ ನಿಮಗೆ ಅದರ ಅವಶ್ಯಕತೆ ಇಲ್ಲ. ನೀವು ಸಭೆಗೆ ಬರುವ ಹಾಗಿಲ್ಲ, ನೀವು ನಡವಳಿಕೆಗೆ ಸಹಿ ಹಾಕುವ ಆಗಿಲ್ಲ ಎಂದು ಗ್ರಾಪಂ ಪ್ರತಿನಿಧಿಗಳಾದ ನಮ್ಮ ಮೇಲೆ ಅಧಿಕಾರದ ದರ್ಪ ತೋರಿದ್ದಾರೆ. ಇದರಿಂದ ನಮಗೆ ಗ್ರಾಪಂ ಹಕ್ಕುಚ್ಯುತಿ ಆಗಿದ್ದು ಮನಸ್ಸಿಗೆ ನೋವಾಗಿದೆ. ಅಲ್ಲದೆ ನಮ್ಮ ಮೇಲೆ ಅವರಿಗೆ ವೈಯಕ್ತಿಕ ದ್ವೇಷ ಇರಲು ಕಾರಣ ೫ ತಿಂಗಳ ಹಿಂದೆ ತಾಲೂಕು ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ತಿಳಿಸಿದ್ದೆ. ಈ ಕಾರಣ ಮೇಲೆ ನನ್ನ ಮೇಲೆ ದ್ವೇಷವನ್ನಿಟ್ಟುಕೊಂಡು ಈ ರೀತಿ ವರ್ತಿಸುತ್ತಿದ್ದಾರೆ. ನಾವೇನು ಹೊರದೇಶದಿಂದ ಬಂದವನಲ್ಲ. ನಾನು ಇಲ್ಲಿ ಒಬ್ಬ ರೈತನ ಮಗನಾಗಿ ಹುಟ್ಟಿ ಎಲ್ಲಾ ಅಧಿಕಾರವನ್ನು ಕಂಡಿದ್ದೇನೆ. ಇವರು ಅಧಿಕಾರಕ್ಕಿಂತ ರಾಜಕಾರಣ ಮಾಡುವುದರಲ್ಲಿ ನಿಸ್ಸೀಮರು. ರೈತರು ಯಾವುದೇ ಸಮಸ್ಯೆಗಳನ್ನು ಇವರ ಬಳಿ ಹೇಳುವಂತಿಲ್ಲ. ಇವರ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ನಮ್ಮ ಗ್ರಾಪಂ ನಲ್ಲಿ ಚುನಾವಣೆ ನಡೆದಿದ್ದರೂ ಸಹ ಸಮಯಕ್ಕಿಂತ ಮುಂಚಿತವಾಗಿ ನಿಗದಿ ಪಡಿಸಿದ ಸಮಯಕ್ಕಿಂತ ಅವರಿಗೆ ಬೇಕಾದ ರೀತಿಯಲ್ಲಿ ಚುನಾವಣೆ ನಡೆಸಿದ್ದು ಈ ಬಗ್ಗೆ ಸಂಬಂಧಪಟ್ಟ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ ಖರ್ಗೆ ಹಾಗು ಜಿಲ್ಲಾಧಿಕಾರಿಗಳಿಗೆ ಎಸಿಯವರಿಗೆ ಪತ್ರ ಬರೆಯಲಾಗಿದೆ ಎಂದರು.ಕೆಡಿಪಿ ಸದಸ್ಯ ನಂದೀಶ್ ಮಾತನಾಡಿ, ತಾಲೂಕು ದಂಡಾಧಿಕಾರಿ ಎಂ ಮಮತಾರವರು ಕಾನೂನು ಪಾಲನೆಯನ್ನು ಗಾಳಿಗೆ ತೂರಿಸುವಲ್ಲಿ ನಿಸ್ಸೀಮರಾಗಿದ್ದು, ಕಾನೂನು ಪ್ರಕಾರ ಕೆಲಸ ಮಾಡದೇ ರಾಜಕಾರಣ ಮಾಡುವುದರಲ್ಲಿ ನಿಸ್ಸೀಮರಾಗಿದ್ದಾರೆ. ಯಾರೇತಪ್ಪು ಮಾಡಿದರು ಶಿಕ್ಷೆಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಚಿನ್ ಹಾಜರಿದ್ದರು.