ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ರಥದಲ್ಲಿರುವ ನಾಡ ದೇವತೆ ತಾಯಿ ಭುವನೇಶ್ವರಿಗೆ ಮಾಲಾರ್ಪಣೆ ಮಾಡಿ, ಆರತಿ ಬೆಳಗಿ ಬರಮಾಡಿಕೊಂಡರು. ಮುತ್ತೈದೆಯರು ಪೂರ್ಣ ಕುಂಭದೊಂದಿಗೆ ರಥಯಾತ್ರೆಗೆ ಸ್ವಾಗತ ಕೋರಿದರು.
ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟಿಲ ದೇವಿದಾಸ್, ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ, ಶಿಷ್ಠಾಚಾರ ತಹಸೀಲ್ದಾರ ನಿಸಾರ್ ಅಹ್ಮದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪ ಸೇರಿದಂತೆ ಅನೇಕ ಜಿಲ್ಲಾ ಮಟ್ಟದ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸಾಹಿತಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಇದಕ್ಕೆ ಸಾಕ್ಷಿಯಾದರು.ನಂತರ ನಡೆದ ರಥಯಾತ್ರೆಯ ಮೆರವಣಿಗೆಗೆ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, 1973ರಲ್ಲಿ ಡಿ.ದೇವರಾಜ ಅರಸು ಅವರು ಮೈಸೂರು ರಾಜ್ಯವನ್ನು ವಿಶಾಲಾರ್ಥದಲ್ಲಿ ಕರ್ನಾಟಕ ಮರುನಾಮಕರಣ ಮಾಡಿ 50 ವರ್ಷ ಗತಿಸಿದ ಕಾರಣಕ್ಕಾಗಿ ನಮ್ಮ ಸರ್ಕಾರ ಇಡೀ ವರ್ಷ ನಾಡು-ನುಡಿ ಕುರಿತು ಯುವ ಪೀಳಿಗೆಗೆ ಪರಿಚಯಿಸಲು ಈ ರಥ ಯಾತ್ರೆ ಹಮ್ಮಿಕೊಂಡಿದೆ. ಕನ್ನಡ ಕಟ್ಟುವ ಕೆಲಸಕ್ಕೆ ಇಂದಿಲ್ಲಿ ನೆರೆದ ಎಲ್ಲಾ ಕನ್ನಡ ಪ್ರೇಮಿಗಳಿಗೆ ಧನ್ಯವಾದ ತಿಳಿಸುವೆ ಎಂದರು.
ರಥಯಾತ್ರೆ ಮೆರವಣಿಗೆಯುದ್ದಕ್ಕೂ ಕನ್ನಡ ಹಾಡಿಗೆ ಅಧಿಕಾರಿಗಳು, ಸಂಘ-ಸಂಸ್ಥೆಗಳು, ಶಾಲಾ ಮಕ್ಕಳು, ಸಾಹಿತಿಗಳು, ಸಾರ್ವಜನಿಕರು ವಿಶೇಷವಾಗಿ ಕೆಂಪು-ಹಳದಿ ಶಾಲು ಧರಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹೆಜ್ಜೆ ಹಾಕುತ್ತಾ, ಕುಣಿದು ಸಂಭ್ರಮಿಸಿದರು. ಕಳಸ ಹೊತ್ತ ಲಂಬಾಣಿ ಮಹಿಳೆಯರ ಸೊಗಸಾದ ನೃತ್ಯ ನೋಡಗರನ್ನು ಆಕರ್ಷಿಸಿತ್ತು.
ನಗರದಲ್ಲಿನ ರಥ ಯಾತ್ರೆ ಮೆರವಣಿಗೆ ಸಂದರ್ಭದಲ್ಲಿ ಕನ್ನಡ ಮತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಡಿ ವಿವಿಧ ಕಲಾ ತಂಡಗಳು ಡೊಳ್ಳು ಕುಣಿತ, ಕಂಸಾಳೆ, ಲಂಬಾಣಿ ನೃತ್ಯ ಪ್ರದರ್ಶಿಸಿ ಗಮನ ಸೆಳೆದವು. ನಾಟ್ಯಂಜಲಿ ತಂಡವು ಎಸ್.ವಿ.ಪಿ. ವೃತ್ತದಲ್ಲಿ ಭರತನಾಟ್ಯ ಪ್ರದರ್ಶಿಸಿದರು.