ಮರಳು ಗಣಿಗಾರಿಕೆಗೆ ಪರವಾನಗಿ: ಗುತ್ತಲ ಸಮೀಪದ ಹಾವನೂರ ಗ್ರಾಮದಲ್ಲಿ ಪ್ರತಿಭಟನೆ

KannadaprabhaNewsNetwork |  
Published : Jan 14, 2024, 01:32 AM IST
13ಜಿಟಿಎಲ್1ಗುತ್ತಲ ಸಮೀಪದ ಹಾವನೂರ ಗ್ರಾಮದ ತುಂಗಭದ್ರಾ ನದಿ ವ್ಯಾಪ್ತಿಯಲ್ಲಿ ಸರ್ಕಾರದ ಪರವಾನಿಗೆಯಿಂದ ಮರಳು ತಗೆಯುವದನ್ನು ವಿರೋಧಿಸಿ ಪ್ರತಿಭಟಿಸಿದ ಗ್ರಾಮಸ್ಥರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರು, ಜಾತ್ರ ಕಮೀಟಿ ಸದಸ್ಯರು ಹಾಗೂ ಮಹಿಳೆಯರಿದ್ದರು. | Kannada Prabha

ಸಾರಾಂಶ

ಮರಳು ಗಣಿಗಾರಿಕೆಗೆ ಸರ್ಕಾರ ಪರವಾನಗಿ ನೀಡಿದೆ ಹಾಗೂ ಸ್ಥಳೀಯ ಶಾಸಕರು ಮೌನವಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಗುತ್ತಲ

ಮರಳು ಗಣಿಗಾರಿಕೆಗೆ ಸರ್ಕಾರ ಪರವಾನಗಿ ನೀಡಿದೆ ಹಾಗೂ ಸ್ಥಳೀಯ ಶಾಸಕರು ಮೌನವಹಿಸಿದ್ದಾರೆ ಎಂದು ಆರೋಪಿಸಿ ನೂರಾರು ಜನ ಗ್ರಾಮಸ್ಥರು, ಮಹಿಳೆಯರು ಸಮೀಪದ ಹಾವನೂರ ಗ್ರಾಮದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಹರಿಯುವ ತುಂಗಭದ್ರಾ ನದಿ ದಡದಲ್ಲಿ ಸರ್ಕಾರದ ಪರವಾನಗಿಯನ್ನು ಪಡೆದು ಮರಳು ತಗೆಯುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು ವರ್ಷಗಳಿಂದ ಈ ಭಾಗದ ನದಿ ದಡದಲ್ಲಿ ಯಾವುದೇ ಅಕ್ರಮ ಗಣಿಗಾರಿಕೆ ನಡೆದಿಲ್ಲ, ಆದರೆ ಸರ್ಕಾರ ಏಕಾಏಕಿ ಇಂತಹ ನಿರ್ಧಾರ ಕೈಗೊಂಡಿರುವುದು ಜನ ವಿರೋಧಿ ನೀತಿಯಾಗಿದೆ ಅನುಸರಿಸುತ್ತಿದೆ ಎಂದು ಗ್ರಾಪಂ ಸದಸ್ಯ ಗೋಪಾಲ ಗೊಣ್ಣಿ ದೂರಿದರು.

ಗ್ರಾಮದ ತುಂಗಭದ್ರಾ ನದಿ ಜನರ ಜೀವನಾಡಿಯಾಗಿದ್ದು, ಬೆಳಗಿನಿಂದ ಸಂಜೆವರೆಗೂ ನದಿಗೆ ನೂರಾರು ಜನರು ಬರುತ್ತಾರೆ, ರೈತರು ಪಂಪಸೆಟ್ ನೋಡಲು, ದನ ಕರುಗಳಿಗೆ ನೀರು ಕುಡಿಸಲು, ಮೈ ತೊಳೆಯಲು ಹಾಗೂ ಮಹಿಳೆಯರು ಬಟ್ಟೆ ತೊಳೆಯಲು ಸೇರಿದಂತೆ ಅನೇಕ ಕೆಲಸಗಳಿಗೆ ನದಿಯನ್ನೇ ಅವಲಂಬಿಸಿದ್ದಾರೆ. ಆದ್ದರಿಂದ ಸರ್ಕಾರ ಮರಳು ಗಣಿಗಾರಿಕೆ ಪ್ರಾರಂಭಿಸಿದರೆ ಸುಮಾರು ಅಡಿ ಆಳದ ಗುಂಡಿಗಳಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟರೇ ಸರ್ಕಾರವೇ ನೇರ ಹೊಣೆಯಾಗಲಿದೆ. ಸರ್ಕಾರ ಹಾಗೂ ಅಧಿಕಾರಿಗಳು ಈ ಕೂಡಲೇ ಮರಳು ಗಣಿಗಾರಿಕೆಯ ಪರವಾನಗಿ ರದ್ದು ಪಡಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಸ್ಥಳಕ್ಕಾಗಮಿಸಿದ ತಹಸೀಲ್ದಾರ ಶಂಕರ ಜಿ.ಎಸ್. ಮಾತನಾಡಿ, ಸರ್ಕಾರದ ನಿಯಮವನ್ನು ಯಾರು ವಿರೋಧಿಸಬಾರದು. ಜನರ ಸಮಸ್ಯೆ ಏನೇ ಇದ್ದರೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಜಿಲ್ಲಾಧಿಕಾರಿಯೊಂದಿಗೆ ಸಭೆ ಹಮ್ಮಿಕೊಳ್ಳಲಾಗುವುದು ಅಲ್ಲಿ ತಮ್ಮ ಅಭಿಪ್ರಾಯ ಮಂಡಿಸಬೇಕು. ಜನತೆ ಸರ್ಕಾರಿ ಪರವಾನಗಿಯ ಗಣಿಗಾರಿಕೆಗೆ ಅವಕಾಶ ನೀಡಬೇಕು ಎಂದರು.

ಅಕ್ರಮ ಮರಳು ಮಾರಾಟದ ದಂಧೆ ತಪ್ಪಿಸಲು ಪರವಾನಗಿ ನೀಡಿ ಕಡಿಮೆ ದರದಲ್ಲಿ ಮರಳು ನೀಡುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದ್ದು, ಕೆಲವರು ತಮ್ಮ ಲಾಭಕ್ಕೆ ಹೊಡೆತ ಬೀಳಲಿದೆ ಎಂದು ಸರ್ಕಾರ ಹಾಗೂ ಕಾನೂನಿಗೆ ಬೆಲೆ ನೀಡದಿರುವುದು ಸರಿಯಲ್ಲ ಎಂದು ಅಧಿಕಾರಿಗಳು ಹೇಳಿದರು.

ಪ್ರತಿಭಟನೆ ಹಿಂತಗೆದುಕೊಳ್ಳುವಂತೆ ಗ್ರಾಮಸ್ಥರ ಮನವೊಲಿಸುವಲ್ಲಿ ಅಧಿಕಾರಿಗಳು ವಿಫಲವಾದರು. ದಡದಿಂದ ತೆಗೆದ ಮರಳನ್ನು ಮತ್ತೆ ಗುಂಡಿಗೆ ಹಾಕಲು ಗ್ರಾಮಸ್ಥರು ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಷಣ್ಮುಖಪ್ಪ ಡಿ.ಎಚ್., ಭೂ ವಿಜ್ಞಾನಿಗಳಾದ ಕುಮಾರ ನಾಯ್ಕ್, ಶಬ್ಬೀರ್ ಅಹಮ್ಮದ್, ಪಿಎಸ್‌ಐ ಶಂಕರಗೌಡ ಪಾಟೀಲ, ಉಪ ತಹಶೀಲ್ದಾರ ಎಂ.ಡಿ. ಕಿಚಡೇರ, ಕಂದಾಯ ನಿರೀಕ್ಷಕ ಆರ್.ಎನ್. ಮಲ್ಲಾಡದ, ಪ್ರಕಾಶ ಉಜ್ಜನಿ, ಗ್ರಾಮ ಲೆಕ್ಕಿಗರು ಸೇರಿದಂತೆ ಅನೇಕರಿದ್ದರು.

ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯ ಗೋಪಾಲ ಗೊಣ್ಣಿ, ಭೋಜಪ್ಪ ತೇಜಪ್ಪನವರ, ಗಣೇಶ ಕೆಂಗನಿಂಗಪ್ಪನವರ, ಕವಿತಾ ಕೆಂಗನಿಂಗಪ್ಪನವರ, ಪರಶುರಾಮ ಮಲಿಯನ್ನನವರ, ಮಾಲತೇಶ ಉದಗಟ್ಟಿ, ಗ್ರಾಪಂ ಮಾಜಿ ಅಧ್ಯಕ್ಷ ಶಾಂತಪ್ಪ ಗೊಣ್ಣಿ, ಹೊನ್ನಮ್ಮ ಬುಳ್ಳಬುಳ್ಳಿ, ನಿಂಗಪ್ಪ ಕೆಂಗನಿಂಗಪ್ಪನವರ, ದುರಗಪ್ಪ ಉದಗಟ್ಟಿ, ಅಭಿಷೇಕ ಬೆಂಡಿಗೇರಿ, ಉದಯ ಜೋಗ, ಶಿವನಗೌಡ ಗೌಡಪ್ಪನವರ, ನಿಂಗರಾಜ ಚಾವಡಿ, ಬಸವರಾಜ ದೊಡ್ಡಿರಪ್ಪನವರ, ನಿಂಗಮ್ಮ ಗೊಣ್ಣಿ, ಅಕ್ಕಮ್ಮ ಗೊಣ್ಣಿ, ಗಂಗವ್ವ ಬನ್ನಿಮಟ್ಟಿ, ಗಂಗವ್ವ ಮಟ್ಟಿ, ಲೆಕ್ಕವ್ವ ಕತ್ತಿ ಸೇರಿದಂತೆ ಅನೇಕರಿದ್ದರು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಿ ಸೂಕ್ತ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ