-2 ಕೋಟಿ ರು.ವೆಚ್ಚದ ಯೋಜನೆ । ಸಾಮಾಜಿಕ ಅರಣ್ಯ ಇಲಾಖೆಯಿಂದ ನಿರ್ಮಾಣ । ಕಾಮಗಾರಿಗೆ ಶಾಸಕ ಶರಣಗೌಡ ಕಂದಕೂರ ಚಾಲನೆ
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯ ಗುರುಮಠಕಲ್ ವಿಧಾನಸಭಾ ಮತಕ್ಷೇತ್ರದ ಕಾಳೆಬೆಳಗುಂದಿಯಲ್ಲಿ ಅರಣ್ಯ ಇಲಾಖೆಯಿಂದ 2 ಕೋಟಿ ರು.ಅನುದಾನದಲ್ಲಿ ಟ್ರೀ ಪಾರ್ಕ್ ನಿರ್ಮಿಲಾಗುತ್ತಿದ್ದು, ಇದೀಗ 50 ಲಕ್ಷ ರು.ಅನುದಾನ ಬಂದಿದೆ. ಅದರ ಕಾಮಗಾರಿಗಳ ಅಭಿವೃದ್ಧಿ ಕೆಲಸ ಪ್ರಾರಂಭವಾಗಲಿದ್ದು, ಜನರಿಗೆ ಒಂದು ದಿನದ ವಿರಾಮಕ್ಕಾಗಿ ಟ್ರೀ ಪಾರ್ಕ್ ಸಹಕಾರವಾಗಲಿದೆ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.ಕಾಳಬೆಳಗುಂದಿ ಅರಣ್ಯ ಪ್ರದೇಶದಲ್ಲಿ 2 ಕೋಟಿ ರು.ವೆಚ್ಚದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ನಿರ್ಮಾಣವಾಗುತ್ತಿರುವ ಬನದೇಶ್ವರ ಪ್ರಾಣವಾಯು ವೃಕ್ಷೋದ್ಯಾನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಜಗತ್ತು ಆಧುನೀಕರಣಕ್ಕೆ ಒಡ್ಡಿಕೊಳ್ಳುತ್ತಿದ್ದಂತೆ ಪ್ರಕೃತಿ, ಪರಿಸರ ಕ್ಷೀಣವಾಗುತ್ತಿದೆ. ಭೂಮಿ ತಾಯಿಯನ್ನು ನಿಕೃಷ್ಟವಾಗಿ ಕಂಡು ತಮ್ಮ ಏಳಿಗೆಯನ್ನು ಮನುಷ್ಯ ಮಾಡಲು ಹೊರಟಿದ್ದಾನೆ. ದಿನದಿಂದ ದಿನಕ್ಕೆ ಮರಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಉಷ್ಣತೆ, ಬರಗಾಲ, ನೆರೆ, ಪ್ರಕೃತಿ ವಿಕೋಪಗಳು ತಾರಕ್ಕೇರುತ್ತಿವೆ. ಇದನ್ನು ಮನಗಂಡ ಕರ್ನಾಟಕ ಅರಣ್ಯ ಇಲಾಖೆ ಮಹತ್ ಕಾರ್ಯಕ್ಕೆ ಕೈ ಹಾಕಿದೆ ಎಂದು ತಿಳಿಸಿದರು.
ಸಾಮಾಜಿಕ ಅರಣ್ಯ ಇಲಾಖೆಯ ಡಿಸಿಎಫ್‌ಒ ಚೇತನ ಗಸ್ತಿ ಮಾತನಾಡಿ, 5 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಟ್ರೀ ಪಾರ್ಕ್ನಲ್ಲಿ ಆಮ್ಲ ಜನಕ ಹೊರಸೂಸೂವ ಸಸಿಗಳನ್ನು ನೆಡುವುದು, ವಾಕಿಂಗ್ ಟ್ರ‍್ಯಾಕ್, ಯೋಗ ವೇದಿಕೆ, ಮಕ್ಕಳ ಆಟಿಕೆಗಳು, ಜಿಮ್ ವ್ಯವಸ್ಥೆ ಎರಡು ಪರಗೋಲಗಳು(ಆಸನಗಳು), ಆರ್‌ಓ ಶುದ್ಧ ಕುಡಿಯುವ ನೀರಿನ ಪ್ಲ್ಯಾಂಟ್, ಪ್ರತ್ಯೇಕ ಶೌಚಾಲಯಗಳು ಸಹಿತ ಟ್ರೀ ಪಾರ್ಕ್ ಭದ್ರತೆಗಾಗಿ ತಂತಿಬೇಲಿ ಅಳವಡಿಕೆ, ಟ್ರೀಕ್ ಪಾರ್ಕ್ ಎದುರುಗಡೆ ಅತ್ಯಂತ ಸುಂದರವಾದ ಆರ್ಚ್(ದ್ವಾರಬಾಗೀಲು) ನಿರ್ಮಾಣ ಮಾಡಿ ಟ್ರೀ ಪಾರ್ಕ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಾಮಾಜಿಕ ಅರಣ್ಯ ಇಲಾಖೆಯ ಎಸಿಎಫ್‌ಒ ಮಹ್ಮದ್ ಅಸದ್, ಸಾಮಾಜಿಕ ಆರ್‌ಎಫ್‌ಒ ಚನ್ನಬಸವ ಕಟ್ಟಿಮನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ಮುಖಂಡರಾದ ಅಜಯರಡ್ಡಿ ಎಲ್ಹೇರಿ, ಮಲ್ಲಣಗೌಡ ಕೌಳೂರು, ಶರಣಪ್ಪಗೌಡ ಹೊಸಳ್ಳಿ, ಪರ್ವತರಡ್ಡಿ, ಬಸವರಾಜ ಕಣೇಕಲ್, ಲಕ್ಷ್ಮಣ ನಾಯಕ ಕಾಳಬೆಳಗುಂದಿ, ಪೋಲಪ್ಪ ನೀಲಹಳ್ಳಿ, ಬೆಂಜಮನ್, ರಾಜೇಶ ಉಪ್ಪಿನ್, ಮಹಿಪಾಲರಡ್ಡಿ ಮಲ್ಹಾರ, ರಾಜು ಕಾಳಬೆಳಗುಂದಿ, ನರಸಿಂಹರಡ್ಡಿ ಚಿಂತಗುಂಟಾ, ರಾಜೇಶ ಉಡುಪಿ, ಅಲ್ಲಾವುದ್ದೀನ್, ಚೌಡಯ್ಯ, ಶರಣಗೌಡ ಮಾಧ್ವಾರ, ಮಲ್ಲಣಗೌಡ ಬದ್ದೇಪಲ್ಲಿ, ಶರಣು ಗಾಡಿ ಮೊಟ್ನಳ್ಳಿ, ವೆಂಕಟರಮಣ ಮೊಟ್ನಳ್ಳಿ. ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.
ನೈಸರ್ಗಿಕ ಕಾಡುಗಳಿಗಿಂತ ಭಿನ್ನವಾಗಿ, ಮೂಲಭೂತ ಸೌಕರ್ಯಗಳ ಸ್ಥಾಪನೆ ಒಳಗೊಂಡಿರುವ ಈ ಟ್ರೀ ಪಾರ್ಕ್ ವಿರಾಮಕ್ಕಾಗಿ ಬರುವ ಜನರಿಗೆ ಅನುಕೂಲತೆ ಮತ್ತು ಸೌಕರ್ಯಗಳನ್ನು ಒದಗಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಜನರು ತಮ್ಮ ಕುಟುಂಬದೊಂದಿಗೆ ಬಂದು ಕೆಲವು ಕಾಲ ತಂಗಲು ಇಲ್ಲಿ ವ್ಯವಸ್ಥೆ ಮಾಡುವುದರ ಜತೆಗೆ ಒಂದು ಅತ್ಯುತ್ತಮ ಉದ್ಯಾನ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ.
----ಫೋಟೊ---
ಗುರುಮಠಕಲ್ ವಿಧಾನಸಭಾ ಮತಮಕ್ಷೇತ್ರದ ಕಾಳೆಬೆಳಗುಂದಿಯಲ್ಲಿ ಅರಣ್ಯ ಇಲಾಖೆಯಿಂದ 2 ಕೋಟಿ ರೂ.ಅನುದಾನದಲ್ಲಿ ಟ್ರೀ ಪಾರ್ಕ್ ನಿರ್ಮಾಣ ಕಾಮಗಾರಿಗೆ ಶಾಸಕ ಶರಣಗೌಡ ಕಂದಕೂರ ಚಾಲನೆ ನೀಡಿ, ಕಾಮಗಾರಿ ವೀಕ್ಷಿಸಿದರು. ಎಸಿಎಫ್‌ಒ ಮಹ್ಮದ್ ಅಸದ್, ಸಾಮಾಜಿಕ ಆರ್‌ಎಫ್‌ಒ ಚನ್ನಬಸವ ಕಟ್ಟಿಮನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ ಇತರರಿದ್ದರು.