ನಿಯಮ ಪಾಲಿಸದ ಕಾರ್ಖಾನೆಗಳಿಗೆ ಕಾನೂನಿನ ಬಿಸಿ : ಡಿಸಿ ರಾಹುಲ್‌ ಪಾಂಡ್ಚೆ

KannadaprabhaNewsNetwork |  
Published : Aug 08, 2026, 01:15 AM IST
ಕಡೇಚೂರು ಕೈಗಾರಿಕೆ ಪ್ರದೇಶದಲ್ಲಿ ಅನಿಲ ದುರಂತ ಹಿನ್ನೆಲೆ, ಶುಕ್ರವಾರ ಕೈಗಾರಿಕೆಗಳ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿ ರಾಹುಲ್‌ ಪಾಂಡ್ಚೆ ಸಭೆ ನಡೆಸಿದರು. | Kannada Prabha

ಸಾರಾಂಶ

Law will be imposed on factories that do not follow rules: DC Rahul Pandey

- ಕಡೇಚೂರು ಕೈಗಾರಿಕೆ ಪ್ರದೇಶದಲ್ಲಿ ಅನಿಲ ದುರಂತ ಹಿನ್ನೆಲೆ। ಕೈಗಾರಿಕೆಗಳ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ

ಕನ್ನಡಪ್ರಭ ವಾರ್ತೆ ಯಾದಗಿರಿ

ಇಲ್ಲಿಗೆ ಸಮೀಪದ ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಸಿಐಎಲ್ ಕಂಪನಿಯಲ್ಲಿ ಬುಧವಾರ ಸಂಭವಿಸಿದ ಅನಿಲ ಸೋರಿಕೆ ಘಟನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರಾಹುಲ್‌ ತುಕಾರಾಂ ಪಾಂಡ್ವೆ ಅಧ್ಯಕ್ಷತೆಯೊಂದಿಗೆ ಜಿಲ್ಲೆಯ ಎಲ್ಲ ಕೈಗಾರಿಕೆಗಳ ಪ್ರತಿನಿಧಿಗಳ ಪರಿಶೀಲನಾ ಸಭೆ ಶುಕ್ರವಾರ ನಡೆಯಿತು.

ಜಿಲ್ಲಾಧಿಕಾರಿಗಳು ಮಾತನಾಡಿ, ಕೈಗಾರಿಕಾ ಸುರಕ್ಷತೆ, ಪರಿಸರ ಸಂರಕ್ಷಣೆ ಹಾಗೂ ಕಾರ್ಮಿಕರ ಕಲ್ಯಾಣಕ್ಕೆ ಅತ್ಯುನ್ನತ ಆದ್ಯತೆ ನೀಡಬೇಕು. ಜತೆಗೆ ಸಂಬಂಧಿಸಿದ ಎಲ್ಲ ಇಲಾಖೆಗಳು ಹಾಗೂ ಕೈಗಾರಿಕೆಗಳು ಕಾನೂನುಬದ್ಧ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು.

ಜಂಟಿ ಕೈಗಾರಿಕಾ ನಿರ್ದೇಶಕರು, ಜಂಟಿ ಕಾರ್ಖಾನೆಗಳ ನಿರ್ದೇಶಕರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧಿಕಾರಿಗಳು, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಕೆಐಎಡಿಬಿ (ಕೆಐಎಡಿಬಿ) ಅಧಿಕಾರಿಗಳು ಹಾಗೂ ವಿವಿಧ ಕೈಗಾರಿಕೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಕೈಗಾರಿಕೆಗಳಲ್ಲಿ ಸುರಕ್ಷತಾ ನಿಯಮಗಳ ಅನುಸರಣೆ: ಎಲ್ಲ ಕೈಗಾರಿಕೆಗಳು ಸರ್ಕಾರ ನಿಗದಿಪಡಿಸಿದ ಸುರಕ್ಷತಾ ಮಾನದಂಡಗಳು ಹಾಗೂ ಕಾನೂನುಬದ್ಧ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜಂಟಿ ಕೈಗಾರಿಕಾ ನಿರ್ದೇಶಕರು ಹಾಗೂ ಜಂಟಿ ಕಾರ್ಖಾನೆಗಳ ನಿರ್ದೇಶಕರು ಮುಂದಿನ 15 ದಿನಗಳೊಳಗೆ ಜಿಲ್ಲೆಯ ಎಲ್ಲ ಕೈಗಾರಿಕೆಗಳನ್ನು ಪರಿಶೀಲಿಸಿ ಸುರಕ್ಷತಾ ಕ್ರಮಗಳ ಅನುಷ್ಠಾನ ಖಚಿತಪಡಿಸಿಕೊಳ್ಳಬೇಕು. ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವ ಕೈಗಾರಿಕೆಗಳ ವಿರುದ್ಧ ಕಾನೂನಿನ ಪ್ರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಡಿಸಿ ರಾಹುಲ್‌ ಆದೇಶಿಸಿದರು.

ಪರಿಸರ ನಿಯಮಗಳ ಅನುಸರಣೆ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಮುಂದಿನ 15 ದಿನಗಳೊಳಗೆ ಎಲ್ಲಾ ಕೈಗಾರಿಕೆಗಳನ್ನು ಪರಿಶೀಲಿಸಿ ಪರಿಸರ ಸಂರಕ್ಷಣೆ ಹಾಗೂ ಮಾಲಿನ್ಯ ನಿಯಂತ್ರಣ ನಿಯಮಗಳ ಅನುಸರಣೆ ಪರಿಶೀಲಿಸಬೇಕು. ಪರಿಸರ ನಿಯಮಗಳನ್ನು ಉಲ್ಲಂಘಿಸಿರುವ ಕೈಗಾರಿಕೆಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ದ್ರವ ಅಥವಾ ಘನ ತ್ಯಾಜ್ಯ ಚರಂಡಿ, ಕಾಲುವೆ ಅಥವಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಸರ್ಜನೆ ಮಾಡುವ ಯಾವುದೇ ಕೈಗಾರಿಕೆಯ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಾರ್ಮಿಕರ ಮಾಹಿತಿ ಸಂಗ್ರಹ, ಪೊಲೀಸ್ ಪರಿಶೀಲನೆ:

ಪ್ರತಿ ಕೈಗಾರಿಕೆಯು ತನ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಕಾರ್ಮಿಕರ ಸಂಪೂರ್ಣ ವಿವರಗಳನ್ನು ಒಳಗೊಂಡ ಸಮಗ್ರ ಮಾಹಿತಿ ಪಟ್ಟಿಯನ್ನು (Line List) ಸಿದ್ಧಪಡಿಸಿ ನಿರ್ವಹಿಸಬೇಕು. ಎಲ್ಲ ಕಾರ್ಮಿಕರ ಪೊಲೀಸ್ ಪರಿಶೀಲನೆಯನ್ನು ಕಡ್ಡಾಯವಾಗಿ ನಡೆಸಿ ಅವರ ಗುರುತು ಹಾಗೂ ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರಾಹುಲ್‌ ಸೂಚಿಸಿದರು.

ಕಾರ್ಮಿಕರ ನೋಂದಣಿ: ಕಾರ್ಮಿಕ ಇಲಾಖೆಯು ಎಲ್ಲ ಅರ್ಹ ಕೈಗಾರಿಕಾ ಕಾರ್ಮಿಕರನ್ನು ಉದ್ಯೋಗಿಗಳ ರಾಜ್ಯ ವಿಮಾ ನಿಗಮ (ESIC) ಹಾಗೂ ಇ-ಶ್ರಮ್ (e-Shram) ಪೋರ್ಟಲ್‌ನಲ್ಲಿ ವಿಳಂಬವಿಲ್ಲದೆ ನೋಂದಾಯಿಸುವುದನ್ನು ಖಚಿತಪಡಿಸಬೇಕು. ಕೆಐಎಡಿಬಿ (KIADB) ಕೈಗಾರಿಕಾ ಪುದೇಶಕ್ಕೆ ಪ್ರವೇಶಿಸುವ ಎಲ್ಲ ಲಾರಿಗಳಿಗೆ ಏಕಮುಖ ಪ್ರವೇಶ ವ್ಯವಸ್ಥೆ ಜಾರಿಗೊಳಿಸಬೇಕು. ಕೈಗಾರಿಕಾ ಪ್ರದೇಶಕ್ಕೆ ಪ್ರವೇಶಿಸುವ ಹಾಗೂ ಎಲ್ಲ ಲಾರಿಗಳ ದಾಖಲಾತಿ ಸಮರ್ಪಕವಾಗಿ ನಿರ್ವಹಿಸಬೇಕು. ಸಾರ್ವಜನಿಕ ಸುರಕ್ಷ ಕೈಗಾರಿಕಾ ಪುದೇಶದ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ಉದ್ದೇಶದಿಂದ ರಾತ್ರಿ ವೇಳೆಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧಿಸಬೇಕು ಎಂದು ನಿರ್ದೇಶಿಸಿದರು.

ನಿರ್ದೇಶನಗಳನ್ನು ನಿಗದಿತ ಅವಧಿಯೊಳಗೆ ಅನುಷ್ಠಾನಗೊಳಿಸಿ ಪರಿಶೀಲನೆ ಪೂರ್ಣಗೊಂಡ ನಂತರ ಅನುಪಾಲನಾ ವರದಿ ಸಲ್ಲಿಸುವಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು. ಜತೆಗೆ, ಎಲ್ಲ ಕೈಗಾರಿಕೆಗಳು ಪರಿಶೀಲನಾ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಬೇಕು ಹಾಗೂ ಸುರಕ್ಷತೆ, ಪರಿಸರ ಸಂರಕ್ಷಣೆ, ಕಾರ್ಮಿಕರ ಕಲ್ಯಾಣಕ್ಕೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು.

ಜಿಲ್ಲಾಡಳಿತವು ಕೈಗಾರಿಕಾ ಸುರಕ್ಷತೆ ಬಲಪಡಿಸುವುದು, ಪರಿಸರ ಸಂರಕ್ಷಿಸುವುದು, ಕಾರ್ಮಿಕರ ಹಿತಾಸಕ್ತಿ ಕಾಪಾಡುವುದು ಹಾಗೂ ಅವಘಡಗಳು ಮರುಕಳಿಸದಂತೆ ಎಚ್ಚರಿಕೆ ಕ್ರಮಗಳ ಕೈಗೊಳ್ಳುವುದರ ಜತೆಗೆ ನಿರಂತರ ಮೇಲ್ವಿಚಾರಣೆ ನಡೆಸಲು ಬದ್ಧವಾಗಿದೆ ಎಂದು ಡಿಸಿ ರಾಹುಲ್‌ ಪಾಂಡ್ವೆ ಸ್ಪಷ್ಟಪಡಿಸಿದರು.

----ಫೋಟೊ------

7ವೈಡಿಆರ್1 : ಕಡೇಚೂರು ಕೈಗಾರಿಕೆ ಪ್ರದೇಶದಲ್ಲಿ ಅನಿಲ ದುರಂತ ಹಿನ್ನೆಲೆ, ಶುಕ್ರವಾರ ಕೈಗಾರಿಕೆಗಳ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿ ರಾಹುಲ್‌ ಪಾಂಡ್ಚೆ ಸಭೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲೆಯ ವಿವಿಧೆಡೆ ಬರದ ಭೀಕರ ಪರಿಸ್ಥಿತಿ ದರ್ಶನ
ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಸಂಘಟಿತ ಕೆಲಸ