ಪಿರಿಯಾಪಟ್ಟಣ ಅಧಿಕಾರಿಗಳ ಮಾಹಿತಿ ಪ್ರಕಾರ ತಾಲೂಕಿನಲ್ಲಿ 27 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಳೆ ಕೊರತೆಯಿಂದ ತಂಬಾಕು ಬೆಳೆ ಬೆಳೆಯಲಾಗಿದೆ. ಇದರೊಂದಿಗೆ ಮುಸುಕಿನ ಜೋಳ, ಶುಂಠಿ, ಎಳ್ಳು, ಅಲಸಂದೆ ಮೊದಲಾದ ಎಲ್ಲ ಬೆಳೆಗಳನ್ನು ಬೆಳೆಯಲಾಗಿದ್ದು ನಿರೀಕ್ಷಿತ ಮಟ್ಟದಲ್ಲಿ ಬೆಳೆ ಬಂದಿಲ್ಲ.
ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ
ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಾಲೂಕು ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ಪರಿಶೀಲಿಸಿದರು.
ತಾಲೂಕಿನ ರಾವಂದೂರು ಗ್ರಾಪಂ ವ್ಯಾಪ್ತಿಯಲ್ಲಿ ಮಳೆ ಕೊರತೆಯಿಂದ ಹಾನಿಗೊಳಗಾದ ಕೃಷಿ ಭೂಮಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಅಧಿಕಾರಿಗಳ ಮಾಹಿತಿ ಪ್ರಕಾರ ತಾಲೂಕಿನಲ್ಲಿ 27 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಳೆ ಕೊರತೆಯಿಂದ ತಂಬಾಕು ಬೆಳೆ ಬೆಳೆಯಲಾಗಿದೆ. ಇದರೊಂದಿಗೆ ಮುಸುಕಿನ ಜೋಳ, ಶುಂಠಿ, ಎಳ್ಳು, ಅಲಸಂದೆ ಮೊದಲಾದ ಎಲ್ಲ ಬೆಳೆಗಳನ್ನು ಬೆಳೆಯಲಾಗಿದ್ದು ನಿರೀಕ್ಷಿತ ಮಟ್ಟದಲ್ಲಿ ಬೆಳೆ ಬಂದಿಲ್ಲ ಈ ಕುರಿತು ಮುಖ್ಯಮಂತ್ರಿಯವರ ಗಮನಸೆಳೆದು ರೈತರಿಗೆ ತುರ್ತು ನೆರವು ತಲುಪಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಈ ಭಾಗದ ಪ್ರಮುಖ ಬೆಳೆಯಾದ ಮುಸುಕಿನಜೋಳದಲ್ಲಿ ರೋಗ ಬಾಧೆ ಕಂಡು ಬಂದಿದೆ. ರೈತರು ಒಂದೇ ಬೆಳೆ ನೆಚ್ಚಿಕೊಳ್ಳದೆ ಬೆಳೆ ಪರಿವರ್ತನೆ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಬೆಳೆಗಳು ಹಾಳಾಗಿದ್ದು, ಪ್ರಸ್ತುತ ಪರಿಸ್ಥಿತಿ ಗಂಭೀರವಾಗಿದ್ದು ನಷ್ಟ ಅನುಭವಿಸಿದ ರೈತರಿಗೆ ವಿಶೇಷ ಪರಿಹಾರ ಘೋಷಿಸುವಂತೆ ಕೋರಲಾಗುವುದು ಎಂದರು.
ಅಧಿಕಾರಿಗಳು ತ್ವರಿತವಾಗಿ ಸಮೀಕ್ಷೆ ಪೂರ್ಣಗೊಳಿಸಿ ವಾಸ್ತವ ವರದಿ ಸಲ್ಲಿಸಬೇಕು. ರೈತರಿಗೆ ಯಾವುದೇ ತೊಂದರೆ ಆಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ ಎಂದರು.
ನಂತರ ರಾವಂದೂರಿನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಳೆ ಕೊರತೆ ಕುಡಿಯುವ ನೀರಿನ ಸಮಸ್ಯೆ ಹಾಗೂ ಬರದ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡರು.
ಮಾಜಿ ಸಚಿವ ಕೆ. ವೆಂಕಟೇಶ್ ಮಾತನಾಡಿ, ಪ್ರಸ್ತುತ ಹಾರಂಗಿ ನಾಲೆಯಿಂದ ಬಿಡಲಾಗುತ್ತಿರುವ ನೀರು ಕೇವಲ ಕೆರೆಕಟ್ಟೆಗಳನ್ನು ತುಂಬಿಸಲು ಮಾತ್ರವಾಗಿದ್ದು, ಅದು ಜನಜಾನುವಾರುಗಳ ಕುಡಿಯುವ ನೀರಿನ ಉದ್ದೇಶದಿಂದ ಆಗಿದೆ ಇದನ್ನು ನೆಚ್ಚಿಕೊಂಡು ರೈತರು ಹೆಚ್ಚಿನ ಬೆಳೆ ಬೆಳೆಯಲು ಮುಂದಾಗದಂತೆ ಮನವಿ ಮಾಡಿಕೊಂಡರು.
ತಾಲೂಕಿನಲ್ಲಿ 27 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು, ಇದರಲ್ಲಿ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು, 5 ಸಾವಿರ ಎಕರೆ ಪ್ರದೇಶದಲ್ಲಿ ಮುಸುಕಿನ ಜೋಳ, ಹೆಸರು, ಅಲಸಂದೆ, ಎಳ್ಳು , ರಾಗಿ ಬೆಳೆಯಲಾಗಿದೆ. ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು ಈ ಬಗ್ಗೆ ದೂರುಗಳು ಕೇಳಿ ಬಂದರೆ ಅಂತಹ ಅಧಿಕಾರಿಗಳ ವಿರುದ್ದ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು, ಹಾಗಾಗಿ ಕುಡಿಯುವ ನೀರಿಗೆ ಹೆಚ್ಚಿನ ಆಧ್ಯತೆ ನೀಡಬೇಕು. ರಾಜ್ಯದಲ್ಲಿಯೇ ಅತಿ ಹೆಚ್ಚು ಕೊಳವೆ ಬಾವಿ ಹೊಂದಿರುವ ತಾಲ್ಲೂಕು ಪಿರಿಯಾಪಟ್ಟಣ, ಹಾಗಾಗಿ ರಾಜ್ಯದಾದ್ಯಂತ ಮಳೆಯ ಕೊರತೆ ಇದ್ದರೂ ಇಲ್ಲಿನ ರೈತರು ಪಂಪ್ ಸೆಟ್ ಗಳಿಂದ ನೀರು ಹಾಯಿಸಿ ತಂಬಾಕು ಬೆಳೆ ಸೇರಿದಂತೆ ಇನ್ನಿತರ ಬೆಳೆ ಬೆಳೆದರೂ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬಂದಿಲ್ಲ, ಹಾಗಾಗಿ ಈ ಭಾಗದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು.
ಸದ್ಯದಲ್ಲೇ ಹಾರಂಗಿ ಎಡದಂಡೆ ಹಾಗೂ ಬಲದಂಡೆ ನಾಲೆಯಿಂದ ಜನರು ಕುಡಿಯಲು ಹಾಗೂ ಜಾನುವಾರುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆರೆಗಳಿಗೆ ನೀರು ಹಾಯಿಸಲಾಗುವುದು ನಮ್ಮ ರೈತರು ಯಾವುದೇ ಕಾರಣಕ್ಕೂ ಬೆಳೆ ಬೆಳೆಯಲು ಈ ನೀರನ್ನು ಬಳಸಬಾರದು ಎಂದು ಮನವಿ ಮಾಡಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಮೈಸೂರು ಪೇಂಟ್ ಅಂಡ್ ವಾರ್ನೀಸ್ ನಿಗಮದ ಅಧ್ಯಕ್ಷ ಎಚ್.ಡಿ.ಗಣೇಶ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ಜಿಪಂ ಇಒ ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ, ತಹಸೀಲ್ದಾರ್ ನಿಸರ್ಗಪ್ರಿಯ, ತಾಪಂ ಇಒ ಸುನಿಲ್ ಕುಮಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಕುಸುಮಾ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಾಗೂ ರೈತರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.