ಬರಪೀಡಿತ ಪ್ರದೇಶಗಳಿಗೆ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಪರಿಶೀಲನೆ

KannadaprabhaNewsNetwork |  
Published : Aug 08, 2026, 01:15 AM IST
51 | Kannada Prabha

ಸಾರಾಂಶ

ಹುಣಸೂರು ತಾಲೂಕಿನಲ್ಲಿ ಶೇ. 40 ರಿಂದ 50ರಷ್ಟು ಮಳೆ ಕೊರತೆಯಾಗಿದೆ. ಇದೀಗ ಮಳೆ ಆರಂಭಗೊಂಡಿದ್ದರೂ ಬೆಳೆಗಳ ಪ್ರಮಾಣದಲ್ಲಿ ಬದಲಾವಣೆ ಅಸಾಧ್ಯ. ಈ ನಡುವೆ ಹೊಗೆಸೊಪ್ಪು ಬೆಳೆ ಕೂಡ ಈ ಬಾರಿ ಇಳುವರಿ ಕುಂಠಿತವಾಗಲಿದೆ. ಆಂದ್ರ ಪ್ರದೇಶದಲ್ಲಿ ಕಳೆದ ಸಾಲಿನಲ್ಲಿ ಪ್ರಕೃತಿ ವಿಕೋಪದಿಂದಾಗಿ ತಂಬಾಕು ರೈತರಿಗೆ 50 ಸಾವಿರ ರು. ಗಳ ಪರಿಹಾರ ಧನ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಹುಣಸೂರು

ಮಳೆ ಕೊರತೆಯಿಂದಾಗಿ ಬರ ಪರಿಸ್ಥಿತಿ ಅನುಭವಿಸುತ್ತಿರುವ ತಾಲೂಕಿನ ಬರಪೀಡಿತ ಪ್ರದೇಶಗಳಿಗೆ ರಾಜ್ಯ ನಗರಾಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಪ್ರಕೃತಿ ವಿಕೋಪ ಮೇಲುಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಪರಿಶೀಲಿಸಿದರು.

ಸಚಿವರ ಆಗಮನದೊಂದಿಗೆ ಧಾರಾಕಾರ ಮಳೆಯೂ ಆರಂಭಗೊಂಡ ಪರಿಣಾಮ ಮಳೆಯಲ್ಲಿಯೇ ಬರಪರಿಶೀಲನೆ ನಡೆಯಿತು.

ಶುಕ್ರವಾರ ತಾಲೂಕಿನ ಬಿಳಿಕೆರೆ ಹೋಬಳಿ ಚೋಳೇನಹಳ್ಳಿ ಗ್ರಾಮದ ಜವರೇಗೌಡರ ಜಮೀನಿನಲ್ಲಿ ಬೆಳೆದ ಅಲಸಂದೆ ಗಿಡಗಳನ್ನು ಕೈಯಲ್ಲಿ ಹಿಡಿದು ಪರಿಶೀಲನೆ ನಡೆಸಿದರು. ಗಿಡದಲ್ಲಿ ಅಲಸಂದೆ ಕಾಳುಗಳು ಕಡಿಮೆ ಪ್ರಮಾಣದಲ್ಲಿರುವುದನ್ನು ಕಂಡು ಕೃಷಿ ಅಧಿಕಾರಿಗಳಲ್ಲಿ ಕಾರಣ ಕೇಳಿ ಮಾಹಿತಿ ಪಡೆದರು.

ಶಾಸಕ ಜಿ.ಡಿ. ಹರೀಶ್‌ ಗೌಡ ಸಚಿವರಿಗೆ ಬರ ಪರಿಸ್ಥಿತಿಯ ಕುರಿತು ವಿವರಿಸಿ ಮಾತನಾಡಿ, ತಾಲೂಕಿನಲ್ಲಿ ಶೇ. 40 ರಿಂದ 50ರಷ್ಟು ಮಳೆ ಕೊರತೆಯಾಗಿದೆ. ಇದೀಗ ಮಳೆ ಆರಂಭಗೊಂಡಿದ್ದರೂ ಬೆಳೆಗಳ ಪ್ರಮಾಣದಲ್ಲಿ ಬದಲಾವಣೆ ಅಸಾಧ್ಯ. ಈ ನಡುವೆ ಹೊಗೆಸೊಪ್ಪು ಬೆಳೆ ಕೂಡ ಈ ಬಾರಿ ಇಳುವರಿ ಕುಂಠಿತವಾಗಲಿದೆ. ಆಂದ್ರ ಪ್ರದೇಶದಲ್ಲಿ ಕಳೆದ ಸಾಲಿನಲ್ಲಿ ಪ್ರಕೃತಿ ವಿಕೋಪದಿಂದಾಗಿ ತಂಬಾಕು ರೈತರಿಗೆ 50 ಸಾವಿರ ರು. ಗಳ ಪರಿಹಾರ ಧನ ನೀಡಲಾಗಿದೆ. ಅದರಂತೆಯೇ ರಾಜ್ಯದಲ್ಲೂ ರೈತರಿಗೆ ಈ ಬಾರಿ ಪರಿಹಾರ ಧನ ನೀಡುವತ್ತ ರಾಜ್ಯ ಸರ್ಕಾರ ಕ್ರಮವಹಿಸಬೇಕು. ಕಳೆದಸಾಲಿನಲ್ಲಿ ಕೆಜಿಗೆ ರು.90, 100 ರು.ಗಳಿಗೆ ಮಾರಾಟ ಮಾಡಿ ನಷ್ಟ ಅನುಭವಿಸಿದ್ದಾರೆ. ಈ ಕುರಿತು ಈ ಹಿಂದಿನ ಅಧಿವೇಶನದಲ್ಲಿ ನಾನು ವಿಷಯವನ್ನು ಸರ್ಕಾರದ ಗಮನಕ್ಕೆ ತಂದಿದ್ದೆ. ಮುಂಬರುವ ಅಧಿವೇಶನದಲ್ಲಿ ಸಚಿವರಾಗಿ ನೀವು ವಿಷಯವನ್ನು ಎತ್ತಿ ಈ ಭಾಗದ ತಂಬಾಕು ರೈತರಿಗೆ ಅನುಕೂಲ ಮಾಡಿಕೊಡಲು ಕೋರಿದರು.

ಮುಸುಕಿನ ಜೋಳಕ್ಕೆ ಪರಿಹಾರ:

ಈ ವೇಳೆ ರೈತರು ತಾಲೂಕಿನಲ್ಲಿ ಮುಸುಕಿನ ಜೋಳಕ್ಕೆ ಬಿಳಿಸುರುಳಿ ರೋಗ ಬಾಧೆ ತಗುಲಿದ್ದು, ಹೆಚ್ಚಿನ ಪ್ರಮಾಣದಲ್ಲಿ ರೈತರು ನಷ್ಟ ಅನುಭವಿಸಿದ್ದಾರೆ. ವಿಮೆಯನ್ನೂ ಮಾಡಿಸಿದ್ದು ವಿಮಾಹಣವನ್ನು ಮತ್ತು ಬೆಳೆಪರಿಹಾರ ಒದಗಿಸಿರೆಂದು ಕೋರಿದಾಗ, ಮುಸುಕಿನ ಜೋಳಕ್ಕೆ ಬೆಳೆ ಪರಿಹಾರ ನೀಡುವ ಅವಕಾಶವಿಲ್ಲ. ರೈತರು ಒಂದೇ ಜಮೀನಿನಲ್ಲಿ ಸತತವಾಗಿ ಮುಸುಕಿನ ಜೋಳ ಬೆಳೆದಲ್ಲಿ ಭೂಮಿ ಸತ್ವ ಕಳೆದುಕೊಳ್ಳುತ್ತದೆ. ಹಾಗಾಗಿ ಬೆಳೆಗಳನ್ನು ಬದಲಾಯಿಸುತ್ತಲೇ ಮುಸುಕಿನ ಜೋಳ ಬೆಳೆಯಬೇಕಿದ್ದು, ಈ ಕುರಿತು ಕೃಷಿ ಇಲಾಖೆ ರೈತರಿಗೆ ಸಾಕಷ್ಟು ಅರಿವು ಮೂಡಿಸುವ ಕಾರ್ಯ ನಡಸಿದೆ. ತಾಲೂಕಿನಲ್ಲಿ ತಂಬಾಕು ಕೃಷಿ ಮತ್ತು ಮುಸುಕಿನಜೋಳದ ಪರಿಸ್ಥಿತಿಯ ಕುರಿತು ಸರ್ಕಾರದ ಮಟ್ಟದಲ್ಲಿ ಮುಖ್ಯಮಂತ್ರಿಗಳಿಗೆ ವರದಿ ನೀಡುವುದಾಗಿ ತಿಳಿಸಿದರು.

ರಾಗಿ ಹಣ ಬಂದಿಲ್ಲ:

ತಾಲೂಕಿನಲ್ಲಿ ತಂಬಾಕಿನ ನಂತರ ಅತಿ ಹೆಚ್ಚು ಪ್ರಮಾಣದಲ್ಲಿ ರೈತರು ರಾಗಿ ಬೆಳೆಯುತ್ತಿದ್ದು, ಕಳೆದ ಮಾರ್ಚಿ ತಿಂಗಳಿನಲ್ಲಿ ರೈತರು ಸರ್ಕಾರ ಸ್ಥಾಪಿಸಿದ ಬೆಂಬಲಬೆಲೆ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ್ದಾರೆ. ಶೇ. 50ರಷ್ಟು ರೈತರಿಗೆ ಇಂದಿಗೂ ಹಣ ಸಂದಾಯವಾಗಿಲ್ಲ. ಒಂದಡೆ ಬರಗಾಲ, ಮತ್ತೊಂದಡೆ ಸರ್ಕಾರದಿಂದ ಬರಬೇಕಿದ್ದ ಹಣವೂ ಬಾರದೇ ರೈತರು ತೊಂದರೆಗೊಳಗಾಗಿದ್ದೇವೆ ಎಂದು ರೈತರು ಅವಲತ್ತುಕೊಂಡಾಗ, ಈ ಕುರಿತು ಜಿಲ್ಲಾಧಿಕಾರಿಗಳಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಬರ ಪರಿಶೀಲನೆ ವೇಳೆ ಮಾಜಿ ಶಾಸಕ ಎಚ್.ಪಿ. ಮಂಜುನಾಥ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ. ಅಮರನಾಥ್, ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಮೈಮುಲ್ ನಿರ್ದೇಶಕ ಕೆ.ಎಸ್. ಕುಮಾರ್, ಧಣಿಕುಮಾರ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕೃಷಿ ಇಲಾಖೆ ಜೆಡಿ ಕೆ.ಎಚ್.ರವಿ, ಡಿಡಿ ಬಿ.ಎನ್. ಧನಂಜಯ್, ಎಡಿಎ ಅನಿಲ್‌ ಕುಮಾರ್, ತಹಸೀಲ್ದಾರ್ ಜೆ. ಮಂಜುನಾಥ್ ಮತ್ತು ರೈತರು ಇದ್ದರು.

ಮಳೆಯಲ್ಲಿಯೇ ಬರವೀಕ್ಷಣೆ:

ತಾಲೂಕಿನಲ್ಲಿ ಶೇ. 40 ರಷ್ಟು ಮಳೆಯ ಕೊರತೆಯಿಂದಾಗಿ ರೈರು ಕಂಗೆಟ್ಟಿದ್ದರು. ಕಳೆದ 10 ದಿನಗಳಿಂದ ತುಂತುರು ಮಳೆ ಕೂಡ ಆಗಿರಲಿಲ್ಲ. ಆದರೆ ಶುಕ್ರವಾರ ತಾಲೂಕಿನಾದ್ಯಂತ ಜಿಟಿಜಿಟಿ ಮಳೆ ಆರಂಭಗೊಂಡಿತು. ಮಳೆಯ ನಡುವೆಯೇ ಸಚಿವರು ಬರಪರಿಶೀಲನೆ ನಡಸಿದ್ದು ವಿಶೇಷವೆನಿಸಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲೆಯ ವಿವಿಧೆಡೆ ಬರದ ಭೀಕರ ಪರಿಸ್ಥಿತಿ ದರ್ಶನ
ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಸಂಘಟಿತ ಕೆಲಸ