ರಾಜ್ಯದ ರೈತರ ಭೂಮಿಯ ಪಹಣಿಯಲ್ಲಿ(ಆರ್‌ಟಿಸಿ) ಮಹತ್ವದ ಬದಲಾವಣೆ ತರಲು ರಾಜ್ಯ ಸರ್ಕಾರ ಮುಂದಾಗಿದ್ದು, ಭೂ ಮಾಲೀಕರ ಪೋಟೋ, ವಿಳಾಸ, ಆಧಾರ್‌ ಸಂಖ್ಯೆ, ಫ್ರೂಟ್ಸ್‌ ಐಡಿ ಮಾಹಿತಿಗಳು ಇನ್ನು ಮುಂದೆ ಪಹಣಿಯಲ್ಲಿ ಮುದ್ರಣವಾಗಲಿವೆ.

ಬೆಂಗಳೂರು : ರಾಜ್ಯದ ರೈತರ ಭೂಮಿಯ ಪಹಣಿಯಲ್ಲಿ(ಆರ್‌ಟಿಸಿ) ಮಹತ್ವದ ಬದಲಾವಣೆ ತರಲು ರಾಜ್ಯ ಸರ್ಕಾರ ಮುಂದಾಗಿದ್ದು, ಭೂ ಮಾಲೀಕರ ಪೋಟೋ, ವಿಳಾಸ, ಆಧಾರ್‌ ಸಂಖ್ಯೆ, ಫ್ರೂಟ್ಸ್‌ ಐಡಿ ಮಾಹಿತಿಗಳು ಇನ್ನು ಮುಂದೆ ಪಹಣಿಯಲ್ಲಿ ಮುದ್ರಣವಾಗಲಿವೆ.

ಅಷ್ಟೆ ಅಲ್ಲ, ಜಮೀನಿನ ವಿಸ್ತೀರ್ಣಕ್ಕೆ ಸಂಬಂಧಿಸಿ ‘ಆಕಾರ್‌ಬಂಧ್’ ದಾಖಲೆಗಳನ್ನು ಪಹಣಿಯೊಂದಿಗೆ ಡಿಜಿಟಲ್ ರೂಪದಲ್ಲಿ ಜೋಡಿಸಲಾಗುತ್ತಿದೆ. ಇದರಿಂದ, ನಕ್ಷೆಯಲ್ಲಿರುವ ವಿಸ್ತೀರ್ಣಕ್ಕೂ ಪಹಣಿಯಲ್ಲಿ ನಮೂದಾಗಿರುವ ವಿಸ್ತೀರ್ಣಕ್ಕೂ ವ್ಯತ್ಯಾಸವಿರುವ ಗೊಂದಲಗಳು ಬಗೆಹರಿಯಲಿವೆ. ಅಲ್ಲದೆ, ಪ್ರತಿಯೊಂದು ಆರ್‌ಟಿಸಿಯಲ್ಲೂ ಕ್ಯೂಆರ್ ಕೋಡ್‌ ಕೂಡ ಇರಲಿದೆ. ಇದರಿಂದ ಜಮೀನಿನ ಮೇಲಿರುವ ಸಾಲ ಸೇರಿ ಇತರೆ ಅಧಿಕೃತ ಮಾಹಿತಿಗಳನ್ನು ತಕ್ಷಣವೇ ಪಡೆಯಲು ಸಹಕಾರಿಯಾಗಲಿದೆ.

ಮಾಲೀಕತ್ವದ ಖಾತ್ರಿ ನೀಡಲು ಪಹಣಿಯನ್ನು ಆಧಾರ್‌ ಸಂಖ್ಯೆಗೆ ಜೋಡಿಸಿರುವ ಕಂದಾಯ ಇಲಾಖೆ

ಭೂ ಮಾಲೀಕರು ಮತ್ತು ರೈತರಿಗೆ ಭೂಮಿಯ ಹಕ್ಕುಸ್ವಾಮ್ಯ ಮತ್ತು ಮಾಲೀಕತ್ವದ ಖಾತ್ರಿ ನೀಡಲು ಪಹಣಿಯನ್ನು ಆಧಾರ್‌ ಸಂಖ್ಯೆಗೆ ಜೋಡಿಸಿರುವ ಕಂದಾಯ ಇಲಾಖೆಯು ಇದರ ಮುಂದುವರೆದ ಭಾಗವಾಗಿ, ಸಂಬಂಧಿಸಿದ ರೈತರ ಅಥವಾ ಭೂ ಮಾಲೀಕರ ಫೋಟೋ, ವಿಳಾಸ, ಆಧಾರ್‌ ಸಂಖ್ಯೆ, ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆಯ (ಫ್ರೂಟ್ಸ್‌) ದತ್ತಾಂಶಗಳನ್ನು ಹೊಂದಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪೂರ್ಣ ಹಕ್ಕು ನೀಡಲು ಬದಲಾವಣೆ:

ಜಮೀನಿನ ಮೂಲ ದಾಖಲೆಯಾದ ಆರ್‌ಟಿಸಿ (ಪಹಣಿ)ಯನ್ನು ಆಧಾರ್ ಸಂಖ್ಯೆಗೆ ಜೋಡಿಸುವ ಜೊತೆಗೆ, ಜಿಯೋ-ರೆಫರೆನ್ಸ್‌ಡ್ ನಕ್ಷೆ ಮತ್ತು ಓಪನ್ ಲೊಕೇಷನ್ ಕೋಡ್‌ಗಳೊಂದಿಗೆ ಡಿಜಿಟಲೀಕರಣಗೊಳಿಸಿ ನವೀಕೃತ ರೂಪದಲ್ಲಿ ವಿತರಿಸಲು ಇಲಾಖೆ ನಿರ್ಧರಿಸಿದೆ. ಜಮೀನಿನ ಪಹಣಿಯಲ್ಲಿ ಹೆಸರು ಇರುವುದು ಎಂದರೆ ಭೂಮಿಯ ಸಂಪೂರ್ಣ ಮಾಲೀಕತ್ವ ಎಂದರ್ಥವಲ್ಲ ಎಂಬ ಸಮಸ್ಯೆಗೆ ಅಂತ್ಯ ಹಾಡಿ, ‘ದಾಖಲೆ’ಯಿಂದ ‘ಪೂರ್ಣ ಹಕ್ಕು’ ನೀಡಲು ಈ ತಂತ್ರಜ್ಞಾನ ಆಧಾರಿತ ಬದಲಾವಣೆ ತರಲಾಗಿದೆ.

ಮುಂಬರುವ ಮೂರು ನಾಲ್ಕು ತಿಂಗಳುಗಳಲ್ಲಿ ಕನಿಷ್ಠ 25 ಲಕ್ಷ ಇಂಥ ನವೀಕೃತ ಆರ್‌ಟಿಸಿಗಳನ್ನು ಸಾರ್ವಜನಿಕರಿಗೆ ವಿತರಿಸುವ ಗುರಿ ಇದೆ. ಇದರಿಂದ ನಕಲಿ ದಾಖಲೆಗಳ ಸೃಷ್ಟಿ ಮತ್ತು ಅಕ್ರಮ ಜಮೀನು ಕಸಿಯುವ ಯತ್ನಗಳಿಗೆ ಸಂಪೂರ್ಣ ಕಡಿವಾಣ ಬೀಳಲಿದೆ. ಆರಂಭಿಕ ಹಂತದಲ್ಲಿ ಏಕಮಾಲೀಕತ್ವ ಹೊಂದಿರುವ ಆರ್‌ಟಿಸಿಗಳಿಗೆ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಜಂಟಿ ಮಾಲೀಕತ್ವದ ಆರ್‌ಟಿಸಿಗಳಿಗೆ ಮಾಲೀಕರು ವಿವಿಧ ಕಂದಾಯ ಸೇವೆಗಳನ್ನು ಕೋರಿ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಹೊಸ ಮಾದರಿಯ ಪಹಣಿಗಳನ್ನು ವಿತರಿಸಲು ಇಲಾಖೆ ನಿರ್ಧರಿಸಿದೆ.