ಕನ್ನಡಪ್ರಭ ವಾರ್ತೆ ಬಾಗಲಕೋಟೆಡಿಸಿಸಿ ಬ್ಯಾಂಕಿನಲ್ಲಿ ನಡೆಯುತ್ತಿರುವ ಸ್ವಜನಪಕ್ಷಪಾತ, ದುರಾಡಳಿತ ಮತ್ತು ಭ್ರಷ್ಟಾಚಾರದ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಮತ್ತು ರೈತರಿಗೆ ತಕ್ಷಣವೇ ಸಾಲ ಸೌಲಭ್ಯ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಡಿಸಿಸಿ ಬ್ಯಾಂಕಿನಲ್ಲಿ ನಡೆಯುತ್ತಿರುವ ಸ್ವಜನಪಕ್ಷಪಾತ, ದುರಾಡಳಿತ ಮತ್ತು ಭ್ರಷ್ಟಾಚಾರದ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಮತ್ತು ರೈತರಿಗೆ ತಕ್ಷಣವೇ ಸಾಲ ಸೌಲಭ್ಯ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.ಇಲ್ಲಿನ ನವನಗರದ ಡಿಸಿಸಿ ಬ್ಯಾಂಕ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ ರೈತರು, ಬಾಗಲಕೋಟೆ ಡಿಸಿಸಿ ಬ್ಯಾಂಕಿನಲ್ಲಿ ನಡೆಯುತ್ತಿದೆ ಎನ್ನಲಾದ ಸ್ವಜನಪಕ್ಷಪಾತ, ದುರಾಡಳಿತ ಹಾಗೂ ಭ್ರಷ್ಟಾಚಾರದ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಬ್ಯಾಂಕಿನ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ತರಬೇಕು. ಕೃಷಿ, ಪಶುಪಾಲನೆ ಮತ್ತು ಕುರಿ ಸಂಗೋಪನೆಯನ್ನು ಜೀವನಾಧಾರವಾಗಿಸಿಕೊಂಡಿರುವ ಜಿಲ್ಲೆಯ ರೈತರಿಗೆ ಸಾಲ ಸೌಲಭ್ಯ ದೊರೆಯುವುದು ಅತ್ಯಂತ ಅಗತ್ಯವಾಗಿದೆ. ಆದ್ದರಿಂದ ಸರ್ಕಾರ ಈ ಕೂಡಲೇ ರೈತರ ಬೇಡಿಕೆಗಳಿಗೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ರಾಜ್ಯ ರೈತಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ, ಯಲ್ಲಪ್ಪ ಹೆಗಡೆ, ಶ್ರೀಶೈಲ ಬೂಮಾರ, ರಾಜು ನದಾಫ್‌, ಬಾಹುಬಾಲಿ ನ್ಯಾಮಗೌಡ, ಸದಾಶಿವ ಕವಟಗಿ, ಧರಿಯಪ್ಪ ದಾನಗೊಂಡ, ಕಲ್ಮೇಶ ನ್ಯಾಮಗೌಡ, ಗುರು ಗಾಣಗೇರಿ, ಸಿದ್ದಪ್ಪ ಬಳಗಾನೂರ, ಶಿವನಗೌಡ ಪಾಟೀಲ, ಹುಸೇನಸಾಬ ಮಾಲದಾರ, ಬಸುಗೌಡ ಪೈಲ್, ಬಸವರಾಜ ಧರ್ಮಂತಿ, ಯಲ್ಲಪ್ಪ ಹೆಗಡೆ, ಗೋವಿಂದಪ್ಪ ಬೆಳಗಂಟಿ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.

ಹಸಿರು ಟಾವೆಲ್ ಮೂಲಕ ರೈತರಿಂದ ಹೋರಾಟಕ್ಕೆ ಹಣ ಸಂಗ್ರಹ ಮಾಡಲಾಯಿತು. ಸ್ಥಳದಲ್ಲಿ ಪೊಲೀಸ್ ಬಿಗಿಭದ್ರತೆ ಮಾಡಲಾಗಿತ್ತು.

ರೈತರ ಪ್ರಮುಖ ಬೇಡಿಕೆಗಳು

ಸರ್ಕಾರದ ಆದೇಶದಂತೆ ಅರ್ಹ ರೈತರಿಗೆ ಯಾವುದೇ ವಿಳಂಬವಿಲ್ಲದೆ ಶೂನ್ಯ ಬಡ್ಡಿ ದರದಲ್ಲಿ ₹5 ಲಕ್ಷ ಗಳವರೆಗೆ ಬೆಳೆ ಸಾಲ ನೀಡಬೇಕು. ರೈತರು ಸಾಲ ಪಡೆಯುವಾಗ ಎದುರಿಸುತ್ತಿರುವ ಅನಗತ್ಯ ತೊಂದರೆಗಳನ್ನು ತಕ್ಷಣವೇ ನಿವಾರಿಸಬೇಕು. ಪಶುಪಾಲನೆ ಹಾಗೂ ಕುರಿ ಸಾಗಾಣಿಕೆಯನ್ನೇ ನಂಬಿಕೊಂಡಿರುವ ರೈತರು ಮತ್ತು ಕುರಿಗಾಹಿಗಳಿಗೆ ಮಂಜೂರಾಗಬೇಕಾದ ಸಾಲವನ್ನು ವಿಳಂಬ ಮಾಡದೇ ತಕ್ಷಣವೇ ಬಿಡುಗಡೆ ಮಾಡಬೇಕು. ಅರ್ಹ ಫಲಾನುಭವಿಗಳಿಗೆ ಸಾಲ ತಲುಪುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ರೈತರು ಒತ್ತಾಯಿಸಿದ್ದಾರೆ.