ಕನ್ನಡಪ್ರಭ ವಾರ್ತೆ ಕಲಬುರಗಿ
ಮಾ.9ರಂದು ಸಂಜೆ 5 ಗಂಟೆಗೆ ಕಲಬುರ್ಗಿಯಲ್ಲಿ ನೂತನ ರೈಲು ಸಂಚಾರದ ಉದ್ಘಾಟನೆಯಾಗಲಿದೆ. ನೂತನ ಕಲಬುರಗಿ- ಬೆಂಗಳೂರು ರೈಲು ಗಾಡಿಯು ಕಲಬುರ್ಗಿಯಿಂದ ಸಂಜೆ 5 ಗಂಟೆಗೆ ಹೊರಟು ಮರುದಿನ ಮುಂಜಾನೆ ಮಾ.10ರಂದು 4.15ಕ್ಕೆ ಬೆಂಗಳೂರು ಸಮೀಪದ ಬೈಯ್ಯಪ್ಪನಹಳ್ಳಿ ಅತ್ಯಾಧುನಿಕ ಮತ್ತು ಸುಸಜ್ಜಿತವಾಗಿ ನಿರ್ಮಾಣಗೊಂದಿರುವ ಸರ್. ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣಕ್ಕೆ ತಲುಪಲಿದೆ. ವಾರದಲ್ಲಿ 3 ದಿನ ಇದೇ ವೇಳಾಪಟ್ಟಿಯಲ್ಲಿ ಈ ರೈಲು ಕಲಬುರಗಿ ಹಾಗೂ ಬೆಂಗಳೂರು ಮಧ್ಯೆ ಓಡಾಟ ನಡೆಸಲಿದೆ.
ಈ ರೈಲುಗಾಡಿಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಗಮನಿಸಿಕೊಂಡು ರೈಲ್ವೆ ಇಲಾಖೆಯು ಏ.5ರಿಂದ ವಾರಕ್ಕೆ ಮೂರು ದಿನ ಸಂಚಾರ ನಡೆಸಲು ಒಪ್ಪಿಕೊಂಡಿದೆ.ಕಲಬುರಗಿ ರೈಲು ಬಳಕೆದಾರರಿಗೆ ಸಂತಸ: ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯಾಬಲವನನ್ನು ಗಮನದಲ್ಲಿಟ್ಟುಕೊಂಡು ಕಲಬುರಗಿ ಹಾಗೂ ಬೆಂಗಳೂರು ನಡುವೆ ನಿತ್ಯ ಎಕ್ಸ್‌ಪ್ರೆಸ್ ರೈಲೊಂದನ್ನು ಓಡಿಸಬೇಕು ಎಂಬ ಈ ಭಾಗದ ಜನರ ಬಹು ದಿನಗಳ ಬೇಡಿಕೆಗೆ ಸ್ಪಂದಿಸಿರುವ ರೇಲ್ವೆ ಇಲಾಖೆ ವಾರದಲ್ಲಿ 3 ದಿನ ಓಡುವ ಹೊಸ ರೈಲನ್ನು ನೀಡಿದ್ದರಿಂದ ಈ ಭಾಗದ ಜನ ನಿಟ್ಟುಸಿರು ಬಿಡುವಂತಾಗಿದೆ.
ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಖಾತೆಯ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಇಂದು (ಮಾರ್ಚ್ 4ರಂದು) ರೈಲು ಭವನದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿ ನಡೆಸಿದ ಮಾತುಕತೆ ಯಶಸ್ವಿಯಾಗಿದ್ದು ಮಾರ್ಚ್ 9ರಂದು ಶನಿವಾರ ಸಾಯಂಕಾಲ 5 ಗಂಟೆಗೆ ಕಲಬುರ್ಗಿ- ಬೆಂಗಳೂರು ನೂತನ ರೈಲು ಸಂಚಾರ ಶುಭಾರಂಭಗೊಳ್ಳಲಿದೆ ಎಂದು ಜಾಧವ್ ಹೇಳಿಕೆಯಲ್ಲಿ ಖಚಿತಪಡಿಸಿದ್ದಾರೆ.
ವಚನ ಪಾಲನೆ - ಅಭಿನಂದನೆ: ಸುಧೀರ್ಘ ಪ್ರಯತ್ನದ ಫಲವಾಗಿ ಕಲ್ಬುರ್ಗಿ ಲೋಕಸಭಾ ಕ್ಷೇತ್ರದ ಜನತೆಯ ದಶಕಗಳ ಕನಸು ಸಾಕಾರಗೊಳ್ಳುತ್ತಿದೆ. ಚುನಾವಣೆಯ ಸಂದರ್ಭದಲ್ಲಿ ನೀಡಿದ ಆಶ್ವಾಸನೆಗಳನ್ನು ಪ್ರಾಮಾಣಿಕವಾಗಿ ಒಂದೊಂದಾಗಿ ಈಡೇರಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಕ್ಷೇತ್ರದ ಜನರಿಗೆ ಕೊಟ್ಟ ಮಾತು ಉಳಿಸಿ ವಿಶ್ವಾಸವನ್ನು ಗಳಿಸಿರುವುದಕ್ಕೆ ಸಂತಸವಾಗುತ್ತಿದೆ. ಈ ಭಾಗದ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ ನೆಚ್ಚಿನ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರನ್ನು ಮತ್ತು ರೈಲ್ವೆ ಖಾತೆಯ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಕ್ಷೇತ್ರದ ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದು ಜಾಧವ್ ಹೇಳಿದ್ದಾರೆ.