ವಿದೇಶಕ್ಕೂ ಹಾರಿದ ಕಲಬುರಗಿ ಜೋಳದ ರೊಟ್ಟಿ!

KannadaprabhaNewsNetwork |  
Published : May 18, 2026, 02:00 AM IST
ಕಲಬುರಗಿ ಜೋಳದ ರೊಟ್ಟಿ | Kannada Prabha

ಸಾರಾಂಶ

ಈ ನೆಲ ಮೂಲದ ಅತ್ಯಂತ ಜನಪ್ರಿಯ ಖಾದ್ಯ ಜೋಳದ ರೊಟ್ಟಿ ಸಾಗರೋಲ್ಲಂಘನ ಮಾಡಿದೆ. ಅಮೇಜಾನ್‌, ಲೋಕಲ್‌ ಏಜನ್ಸಿಗಳ ಮೂಲಕ ಆನ್‌ಲೈನ್‌ನಲ್ಲಿ ದೇಶಾದ್ಯಂತ ಗ್ರಾಹಕರನ್ನು ಸೆಳೆದಿರುವ ಕಲಬುರಗಿ ರೊಟ್ಟಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಈ ನೆಲ ಮೂಲದ ಅತ್ಯಂತ ಜನಪ್ರಿಯ ಖಾದ್ಯ ಜೋಳದ ರೊಟ್ಟಿ ಸಾಗರೋಲ್ಲಂಘನ ಮಾಡಿದೆ. ಅಮೇಜಾನ್‌, ಲೋಕಲ್‌ ಏಜನ್ಸಿಗಳ ಮೂಲಕ ಆನ್‌ಲೈನ್‌ನಲ್ಲಿ ದೇಶಾದ್ಯಂತ ಗ್ರಾಹಕರನ್ನು ಸೆಳೆದಿರುವ ಕಲಬುರಗಿ ರೊಟ್ಟಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಪುಣೆಯಲ್ಲಿರುವ ಅಷ್ಟಮ ಟ್ರೇಡರ್ಸ್‌ ಜೊತೆ ಒಪ್ಪಂದ ಮಾಡಿಕೊಂಡಿರುವ ಜಿಲ್ಲಾಡಳಿತ ಅಮೆರಿಕ, ಕೆನಡಾ, ಆಸ್ಟ್ರೇಲಿಯಾಕ್ಕೆ ಮಾಸಿಕ 25 ಸಾವಿರದಂತೆ ವಾರ್ಷಿಕ 3 ಲಕ್ಷಕ್ಕೂ ಅಧಿಕ ರೊಟ್ಟಿ ರಫ್ತು ಮಾಡಲು ಮುಂದಾಗಿದೆ. ಪುಣೆಯ ಅಷ್ಟಮ ಟ್ರೇಡರ್ಸ್‌ನ ರಮೇಶ ಕಡಗಂಚಿ ಈಗಾಗಲೇ ಅಮೆರಿಕ, ಆಸ್ಟ್ರೇಲಿಯಾ, ಕೆನಡಾ ಸೇರಿದಂತೆ 25ಕ್ಕೂ ಹೆಚ್ಚು ದೇಶಗಳಲ್ಲಿ ಸಮೀಕ್ಷೆ ನಡೆಸಿದ್ದಾರೆ. ಭಾರತೀಯರು, ಮಹಾರಾಷ್ಟ್ರ, ಕರ್ನಾಟಕ, ಅದರಲ್ಲೂ ಉತ್ತರ ಕರ್ನಾಟಕದವರು ಎಲ್ಲೆಲ್ಲಿ ಹೆಚ್ಚಾಗಿದ್ದಾರೆ ಎಂಬುದರ ಲೆಕ್ಕ ಹಾಕಿದ್ದಾರೆ. ಮೊದಲ ಹಂತದಲ್ಲಿ 3 ದೇಶಗಳಿಗೆ ಮಾಸಿಕ 25 ಸಾವಿರದಂತೆ ರೊಟ್ಟಿ ರಫ್ತು ಮಾಡಲಿದ್ದಾರೆ. ಇನ್ನುಳಿದ ದೇಶಗಳಲ್ಲೂ ರೊಟ್ಟಿ ರಫ್ತಿಗೆ ಅವಕಾಶಗಳಿವೆ ಎಂಬುದು ಸಮೀಕ್ಷೆಯಲ್ಲಿ ಸ್ಪಷ್ಟವಾಗಿದೆ.ರೊಟ್ಟಿ ಉದ್ಯಮದಿಂದಬದಲಾಯ್ತು ಬದುಕು:

ಜಿಲ್ಲಾಡಳಿತದ ಕಲಬುರಗಿ ರೊಟ್ಟಿ ಬ್ರ್ಯಾಂಡ್‌ ಉಪಕ್ರಮದಲ್ಲಿ 150 ಸ್ವಹಾಯ ಸಂಘಗಳು, ಸಾವಿರಕ್ಕೂ ಹೆಚ್ಚು ಮಹಿಳೆಯರಿದ್ದು, ರೊಟ್ಟಿ ಸಿದ್ಧಪಡಿಸುವ ಕಾಯಕ ನಿರತ ಪ್ರತಿಯೋರ್ವ ಮಹಿಳೆ ಮಾಸಿಕ 15 ರಿಂದ 200 ಸಾವಿರ ರು. ಆದಾಯ ಗಳಿಸುತ್ತಿದ್ದಾರೆ. ಸದ್ಯ ಸ್ಥಳೀಯ ಮಾರುಕಟ್ಟೆಯಲ್ಲಿ ಒಂದು ರೊಟ್ಟಿ ಬೆಲೆ ₹10ರಿಂದ ₹12 ಇದೆ, ವಿದೇಶಿ ರಫ್ತು, ಮಾರುಕಟ್ಟೆಯಲ್ಲಿ ಇದೇ ರೊಟ್ಟಿ ಬೆಲೆ ₹30ರಿಂದ ₹35 ಆಗಲಿದ್ದು ಶೇ.80ರಿಂದ ಶೇ.100 ಆದಾಯ ರೊಟ್ಟಿ ಉದ್ಯಮದಲ್ಲಿರೋ ಮಹಿಳೆಯರ ಕೈ ಸೇರಲಿದೆ.₹55 ಲಕ್ಷ ವೆಚ್ಚದ ಪ್ಯಾಕೇಜ್‌ ಘಟಕ

ಎಚ್‌ಡಿಎಫ್‌ಸಿ ಬ್ಯಾಂಕ್‌ ತನ್ನ ಸಿಎಸ್‌ಆರ್‌ ಅನುದಾನದಲ್ಲಿ ₹55 ಲಕ್ಷ ಒದಗಿಸಿ ರೊಟ್ಟಿ ಮಹಿಳೆಯರಿಗೆ ಹೊಚ್ಚಹೊಸ ಪ್ಯಾಕಿಂಗ್‌ ಘಟಕ ಕೊಡುಗೆ ನೀಡಿದೆ. ಜಿಲ್ಲಾಡಳಿತ ಜಿಲ್ಲಾ ಖನೀಜ ನಿಧಿಯಲ್ಲಿ ₹32 ಲಕ್ಷ ನೀಡಿದೆ. ಕಟನೂರ್‌ ಡಿ ಬಳಿಯ ಬೀಜೋತ್ಪಾದನಾ ಕೇಂದ್ರದಲ್ಲೇ ಹೊಸ ಪ್ಯಾಕಿಂಗ್‌ ಘಟಕ ನಿರ್ಮಾಣವಾಗುತ್ತಿದೆ.-ಕೋಟ್‌-

ಸ್ಥಳೀಯವಾಗಿ ಸ್ವಸಹಾಯ ಸಂಘಗಳ ಮೂಲರಕ ತಯಾರಿಸುವ ಕಲಬುರಗಿ ರೊಟ್ಟಿ ಇದೀಗ ವಿದೇಶದಲ್ಲಿ ಲಭ್ಯವಾಗುತ್ತಿದೆ. 2 ವರ್ಷದಲ್ಲೇ ಕಲಬುರಗಿ ರೊಟ್ಟಿ ವಿದೇಶಿ ಮಾರುಕಟ್ಟೆಯಲ್ಲಿ ಸಿಗುವಂತೆ ಕ್ರಮವಹಿಸಲಾಗಿದ್ದು ಇದು ಹೆಮ್ಮೆಯ ವಿಷಯ. ಇದರಿಂದ ಗ್ರಾಮೀಣ ಮಹಿಳಾ ಉದ್ಯಮ ಶೀಲತೆಗೂ ಬಲ ಬಲಿದೆ, ರೈತರು ಬೆಳೆಯುವ ಜೋಳಕ್ಕೂ ಬೆಲೆ ಬರಲಿದೆ.

-ಪ್ರಿಯಾಂಕ್ ಖರ್ಗೆ, ಐಟಿಬಿಟಿ ಸಚಿವ

-ಕೋಟ್‌-

ರೊಟ್ಟಿ ಮಾಡುತ್ತ ಇಲ್ಲೇ ಮಾರುತ್ತಿದ್ದೆವು. ಇದೀಗ ನಮ್ಮ ರೊಟ್ಟಿ ದೇಶ, ವಿದೇಶದಲ್ಲಿ ಮಾರಾಟ ಆಗುತ್ತಿವೆ. ನಮಗೆ ಕೈ ತುಂಬಾ ಕೆಲಸ, ಆದಾಯ ಸಿಗುತ್ತಿದೆ. ಈಗ ರೊಟ್ಟಿ ಮಾಡಲು ಯಂತ್ರ ಬಳಸುತ್ತಿದ್ದು ಇದರಿಂದ ಇನ್ನೂ ಗುಣಮಟ್ಟದ ರೊಟ್ಟಿ ಗ್ರಾಹಕರಿಗೆ ಪೂರೈಸಲು ಅನುಕೂಲ ಆಗಿದೆ. ಜಿಲ್ಲಾಡಳಿತ, ಜಿಲ್ಲಾ ಸಚಿವರಿಗೆ ಧನ್ಯವಾದಗಳು.

-ಶರಣವ್ವ, ರೊಟ್ಟಿ ಉತ್ಪಾದಕಿ, ಕಲಬುರಗಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಹಿತ್ಯಕ್ಕೆ ಭಾಷೆ ಮಾತ್ರವಲ್ಲ, ರಾಜಕೀಯ ಪ್ರಜ್ಞೆ, ಗ್ರಹಿಕೆ ಮುಖ್ಯ: ಡಾ. ರಂಗನಾಥ
ಬಾಗೇಪಲ್ಲಿ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ