Navaratri, which proclaims the victory of righteousness over unrighteousness.

ಕನ್ನಡಪ್ರಭ ವಾರ್ತೆ, ​ಕೊಪ್ಪ

ಇಲ್ಲಿನ ಪ್ರಸಿದ್ಧ ದಿವ್ಯಕ್ಷೇತ್ರ ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠದಲ್ಲಿ ಶ್ರೀ ಸ್ವಸ್ತಿ ಶ್ರೀ ಪರಾಭವ ಸಂವತ್ಸರದ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಮಂಗಳವಾರ ಮತ್ತು ಬುಧವಾರ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರದ್ಧಾ-ಭಕ್ತಿಯಿಂದ ಸಂಪನ್ನಗೊಂಡವು.

ಆಶ್ವಯುಜ ಶುಕ್ಲ ನವಮಿಯ ದಿನವಾದ ಮಂಗಳವಾರ ಬೆಳಿಗ್ಗೆ ಗಜಾರೋಹಣ (ಮಹಾಲಕ್ಷ್ಮೀ ಅಲಂಕಾರ) ಪೂಜಾ ಕೈಂಕರ್ಯಗಳು ನೆರವೇರಿದವು. ಲೋಕಕಲ್ಯಾಣಾರ್ಥವಾಗಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳವರ ಅಮೃತಹಸ್ತದಿಂದ ಶ್ರದ್ಧಾ-ಭಕ್ತಿಯಿಂದ ಚಂಡಿಕಾ ಹೋಮ ನೆರವೇರಿತು. ಮಹಾ ನವಮಿ ಆಯಧ ಪೂಜೆ ಪ್ರಯಕ್ತ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳವರ ಉಪಸ್ಥಿತಿಯಲ್ಲಿ ಮಠದ ವಾಹನಗಳಿಗೆ ಪೂಜೆ ನೆರವೇರಿಸಲಾಯಿತು.

ರಾತ್ರಿ ರಂಗಪೂಜೆಯು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಸಂಜೆ 5.30ರಿಂದ ಉಡುಪಿಯ ವಿದ್ವಾನ್ ಶ್ರೀ ಮಧೂರ್ ಪಿ. ಬಾಲಸುಬ್ರಹ್ಮಣ್ಯಂ ಮತ್ತು ವೃಂದದವರಿಂದ ನಡೆದ ಗಾಯನ ಕಾರ್ಯಕ್ರಮವು ಸಂಗೀತಪ್ರಿಯರನ್ನು ಮಂತ್ರಮುಗ್ಧರನ್ನಾಗಿಸಿತು.

ಆಶ್ವಯುಜ ಶುಕ್ಲ ದಶಮಿಯ ದಿನವಾದ ಬುಧವಾರ ವಿಜಯದಶಮಿಯ ಪಾವನ ಸಂದರ್ಭದಲ್ಲಿ ಬೆಳಿಗ್ಗೆ ವಿಶೇಷ ಧಾರ್ಮಿಕ ವಿಧಿವಿಧಾನಗಳೊಂದಿಗೆ ಲಕ್ಷ್ಮೀನಾರಾಯಣ ಹೃದಯ ಹೋಮ ನೆರವೇರಿತು. ಭಕ್ತರಿಗೆ ಮಹಾ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. 5.30ಕ್ಕೆ ಹರಿಹರಪುರದ ಶ್ರೀ ತ್ಯಾಗರಾಜ ಸಂಗೀತ ವಿದ್ಯಾಲಯದ ವತಿಯಿಂದ ಸುಶ್ರಾವ್ಯ ಸಂಗೀತ ವೈವಿಧ್ಯ ಕಾರ್ಯಕ್ರಮ ಪ್ರಸ್ತುತಗೊಂಡಿತು.

​ಜಗದ್ಗುರುಗಳಿಂದ ಭಕ್ತರಿಗೆ ಆಶೀರ್ವಚನ:

ನವರಾತ್ರಿ ಮಹೋತ್ಸವದ ಈ ದಿನಗಳಲ್ಲಿ ಪರಮಪೂಜ್ಯ ಶ್ರೀಗಳವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಅಷ್ಟಾವಧಾನ ಸೇವೆಗಳು ನೆರವೇರಿದವು. ರಾತ್ರಿ ದರ್ಬಾರಿನ ನಂತರ ಮಹಾಸ್ವಾಮಿಗಳವರು ನೆರೆದಿದ್ದ ಅಪಾರ ಭಕ್ತವೃಂದವನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ನವರಾತ್ರಿಯು ಅಧರ್ಮದ ಮೇಲೆ ಧರ್ಮದ ವಿಜಯವನ್ನು ಸಾರುವ ಪವಿತ್ರ ಸಂದರ್ಭ. ಜಗನ್ಮಾತೆಯಾದ ಶ್ರೀ ಶಾರದಾ ಪರಮೇಶ್ವರಿಯ ಆರಾಧನೆಯಿಂದ ಮಾನವನ ಅಂತರಂಗದ ಅಜ್ಞಾನ, ದುರ್ಗುಣಗಳು ನಿವಾರಣೆಯಾಗಿ ಸದ್ಗುಣ, ಶಾಂತಿ ಮತ್ತು ಜ್ಞಾನ ಪ್ರಾಪ್ತಿಯಾಗುತ್ತದೆ. ಪ್ರತಿಯೊಬ್ಬರೂ ಧರ್ಮದ ಮಾರ್ಗದಲ್ಲಿ ನಡೆದು, ಭಕ್ತಿ ಹಾಗೂ ಸತ್ಕರ್ಮಗಳಿಂದ ಸಮಾಜದ ಕಲ್ಯಾಣಕ್ಕೆ ತಮ್ಮ ಕೈಲಾದ ಸೇವೆ ಸಲ್ಲಿಸಬೇಕು. ತಾಯಿಯ ಅನಂತ ಕೃಪಾಶೀರ್ವಾದಗಳು ಸದಾ ಸರ್ವರಿಗೂ ದೊರೆತು, ಲೋಕದಲ್ಲಿ ಸುಖ-ಶಾಂತಿ ನೆಲೆಸಲಿ " ಎಂದು ಹರಸಿ, ಭಕ್ತರಿಗೆ ಮಂತ್ರಾಕ್ಷತೆ ಹಾಗೂ ಪ್ರಸಾದ ನೀಡಿ ಅನುಗ್ರಹಿಸಿದರು. ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಸಹಸ್ರರಾರು ಭಕ್ತಾದಿಗಳು ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡು ತಾಯಿಯ ಕೃಪೆಗೆ ಪಾತ್ರರಾದರು.

ಧನ್ಯವಾದ ಸಮರ್ಪಣೆ:

ಕಾರ್ಯಕ್ರಮದ ಸಮಾರೋಪದ ಸಂದರ್ಭದಲ್ಲಿ ಶ್ರೀಮಠದ ಆಡಳಿತಾಧಿಕಾರಿ ಟಿ.ಎಸ್. ಚಂದ್ರನ್ ಅವರು ಮಾತನಾಡಿ, ನವರಾತ್ರಿಯ ಹತ್ತು ದಿನಗಳ ಕಾಲ ನಡೆದ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅತ್ಯಂತ ಭಕ್ತಿ-ಭಾವದಿಂದ ಪಾಲ್ಗೊಂಡು, ಶ್ರೀ ಶಾರದಾ ಪರಮೇಶ್ವರಿ ಅಮ್ಮನವರ ಹಾಗೂ ಶ್ರೀಮದ್ ಜಗದ್ಗುರುಗಳವರ ಅನುಗ್ರಹಕ್ಕೆ ಪಾತ್ರರಾದ ಸಮಸ್ತ ಭಕ್ತವೃಂದಕ್ಕೆ ಮತ್ತು ಕಾರ್ಯಕ್ರಮಗಳ ಯಶಸ್ವಿಗೆ ಹಗಲಿರುಳು ಶ್ರಮಿಸಿದ ಶ್ರೀಮಠದ ಎಲ್ಲಾ ಸಿಬ್ಬಂದಿ ವರ್ಗದವರಿಗೂ ಶ್ರೀಮಠದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಕೃತಜ್ಞತೆ ಸಲ್ಲಿಸಿದರು.