ಮಲ್ಲಿಗೆನಾಡಿನ ಮುಡಿಗೇರಿದ ನರೇಗಾ ಪ್ರಶಸ್ತಿ ಗರಿ

KannadaprabhaNewsNetwork | Published : Feb 5, 2025 12:31 AM

ಸಾರಾಂಶ

ರಾಜ್ಯದ ಕಲಬುರಗಿ ವಿಭಾಗೀಯ ಮಟ್ಟದಲ್ಲಿ ವಿಜಯನಗರ ಜಿಲ್ಲೆ ಹೂವಿನಹಡಗಲಿ ಹಾಗೂ ಬಳ್ಳಾರಿ ಜಿಲ್ಲೆಯ ಸಂಡೂರು ತಾಪಂಗಳು ಪ್ರಶಸ್ತಿಗೆ ಆಯ್ಕೆಯಾಗಿವೆ.

ಹೂವಿನಹಡಗಲಿ: ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2023-24ನೇ ಸಾಲಿನಲ್ಲಿ ಉತ್ತಮ ಸಾಧನೆಗೈದ ಮಲ್ಲಿಗೆ ನಾಡಿಗೆ ಅತ್ಯುತ್ತಮ ತಾಪಂ ಪ್ರಶಸ್ತಿಗೆ ಆಯ್ಕೆಯಾಗಿದೆ. ರಾಜ್ಯದ ಕಲಬುರಗಿ ವಿಭಾಗೀಯ ಮಟ್ಟದಲ್ಲಿ ವಿಜಯನಗರ ಜಿಲ್ಲೆ ಹೂವಿನಹಡಗಲಿ ಹಾಗೂ ಬಳ್ಳಾರಿ ಜಿಲ್ಲೆಯ ಸಂಡೂರು ತಾಪಂಗಳು ಪ್ರಶಸ್ತಿಗೆ ಆಯ್ಕೆಯಾಗಿವೆ.

ಕಳೆದ 2023-24ನೇ ಸಾಲಿನ ನರೇಗಾ ಯೋಜನೆಯಲ್ಲಿ ತಾಲೂಕಿನ 26 ಗ್ರಾಪಂಗಳ ವ್ಯಾಪ್ತಿಯ 15,30,000 ಮಾನವ ದಿನಗಳ ಗುರಿ ನಿಗದಿಯಾಗಿತ್ತು. ಇದರಲ್ಲಿ 19,90,849 ಮಾನವ ದಿನಗಳನ್ನು ಸೃಜಿಸಿ, ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ, ಕಾಂಪೌಂಡ್‌, ಕ್ರೀಡಾಂಗಣ, ಅಡುಗೆ ಕೋಣೆ ನಿರ್ಮಿಸಲಾಗಿದೆ.

ನೀರು ಸಂರಕ್ಷಣೆ ಹಾಗೂ ಮಣ್ಣಿನ ಸವಕಳಿ ತಪ್ಪಿಸಲು ನರೇಗಾದಲ್ಲಿ ಹತ್ತಾರು ರೀತಿಯ ಕಾಮಗಾರಿಗಳನ್ನು ಕೈಗೊಂಡು, ಸಕಾಲದಲ್ಲಿ ಪೂರ್ಣಗೊಳಿಸಲಾಗಿದೆ. ಇದರಲ್ಲಿ ಕೆರೆ ಹಾಗೂ ಕಾಲುವೆ ನಿರ್ಮಾಣ, ರೈತರ ಜಮೀನಿನ ಮಣ್ಣು ಸವಕಳಿ ಮತ್ತು ಅಂತರ್ಜಲ ನಿರ್ಮಾಣಕ್ಕಾಗಿ ನಾಲಾ ಪುನಶ್ಚೇತನ, ಮಳೆ ನೀರು ಹಳ್ಳದ ಮೂಲಕ ಹರಿದು ಹೋಗುವುದನ್ನು ತಡೆಗಟ್ಟಲು ಚೆಕ್‌ ಡ್ಯಾಂಗಳನ್ನು ನಿರ್ಮಾಣ ಮಾಡಿ, ಸಾಕಷ್ಟು ನೀರು ಸಂಗ್ರಹಿಸಲಾಗಿದೆ. ಆಸ್ತಿ ಸೃಜನೆಯ ಕಾಮಗಾರಿಗಳಾದ ಸಿಸಿ ರಸ್ತೆ, ಮಣ್ಣಿನ ರಸ್ತೆ ನಿರ್ಮಾಣ, ಘನತ್ಯಾಜ್ಯ ವಿಲೇವಾರಿ ಘಟಕಗಳ ನಿರ್ಮಾಣ, ಗ್ರಾಪಂ ಮಟ್ಟದಲ್ಲಿ ಸಂಜೀವಿನಿ ಶೆಡ್‌ ನಿರ್ಮಾಣ ಮಾಡಲಾಗಿದೆ.

ರೈತರಿಗೆ ನೀರಾವರಿ ಸೌಲಭ್ಯ ಹೆಚ್ಚಿಸಿಕೊಳ್ಳಲು ಬದು ನಿರ್ಮಾಣ, ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಕೃಷಿಯೊಂದಿಗೆ ಉಪ ಕಸಬು ಹೊಂದಿರುವ ರೈತರಿಗೆ ದನದ ದೊಡ್ಡಿ, ಕುರಿದೊಡ್ಡಿ ಕಾಮಗಾರಿಗಳನ್ನು ನರೇಗಾ ಯೋಜನೆಯಲ್ಲಿ ಅನುಷ್ಠಾನ ಮಾಡಲಾಗಿದೆ.

ತಾಲೂಕಿನಲ್ಲಿ 34976 ಕ್ರಿಯಾಶೀಲ ಉದ್ಯೋಗ ಚೀಟಿಗಳಿದ್ದು, ಇದರಲ್ಲಿ 30114 ಉದ್ಯೋಗ ಚೀಟಿಗಳಲ್ಲಿರುವ ಕಾರ್ಮಿಕರಿಗೆ ಕೆಲಸ ನೀಡಲಾಗಿದೆ. ಶೇ. 52ರಷ್ಟು ಮಹಿಳೆಯರಿಗೆ ಕೆಲಸ, ಪಜಾ ಶೇ. 27.83ರಷ್ಟು, ಪಪಂ ಜನಾಂಗಕ್ಕೆ 8.99ರಷ್ಟು ಕೆಲಸ ನೀಡಲಾಗಿದೆ. ಕೆಲಸ ನಿರ್ವಹಿಸಿದ ಕೂಲಿ ಕಾರ್ಮಿಕರಿಗೆ ಶೇ. 99.98ರಷ್ಟು ಕೂಲಿ 15 ದಿನದೊಳಗೆ ಪಾವತಿಯಾಗಿದೆ.ಸಕಾಲದಲ್ಲಿ ಕೂಲಿ

ಹ್ಯಾರಡ ಗ್ರಾಮಕ್ಕೆ ಅತ್ಯುತ್ತಮ ಗ್ರಾಪಂ ಪ್ರಶಸ್ತಿ ಗರಿಕಲಬುರಗಿ ವಿಭಾಗೀಯಮಟ್ಟದಲ್ಲಿ ನರೇಗಾ ಯೋಜನೆಯಡಿ ಉತ್ತಮ ಸಾಧನೆ ಮಾಡಿರುವ ತಾಲೂಕಿನ ಹ್ಯಾರಡ ಗ್ರಾಮ ಪಂಚಾಯಿತಿಗೆ ಅತ್ಯುತ್ತಮ ಗ್ರಾಪಂ ಎಂದು ಪ್ರಶಸ್ತಿ ಲಭಿಸಿದೆ. ಈ ಗ್ರಾಪಂ ವ್ಯಾಪ್ತಿಯ ನರೇಗಾ ಕೂಲಿ ಕಾರ್ಮಿಕರಿಗೆ ಸಕಾಲದಲ್ಲಿ ಕೆಲಸ, ಕೂಲಿ ಪಾವತಿ, ನೀರು ಮತ್ತು ಮಣ್ಣಿನ ಸಂರಕ್ಷಣೆಯ ಕಾಮಗಾರಿಗಳು ಹಾಗೂ ಲೆಕ್ಕ ಪರಿಶೋಧನೆಯಲ್ಲಿ ಉತ್ತಮ ಸಾಧನೆ ಮಾಡಿದೆ.ಉತ್ತಮ ಕೆಲಸ

ನರೇಗಾ ಯೋಜನೆಯಲ್ಲಿ ಸರ್ಕಾರ ನಿಗದಿ ಮಾಡಿದ ಗುರಿ ಸಾಧನೆ ಮಾಡಲಾಗಿದೆ. ತಾಪಂ ಹಾಗೂ ಆಯಾ ಗ್ರಾಪಂ ವ್ಯಾಪ್ತಿಯ ಪಿಡಿಒ, ಸಿಬ್ಬಂದಿ ಉತ್ತಮವಾಗಿ ಕೆಲಸ ನಿರ್ವಹಿಸಿದ್ದರಿಂದ ಕಲಬುರಗಿ ವಿಭಾಗೀಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತೋಷ ತಂದಿದೆ.

ಎಂ. ಉಮೇಶ, ಇಒ ತಾಪಂ, ಹೂವಿನಹಡಗಲಿಅನುಕೂಲ

ನರೇಗಾ ಯೋಜನೆಯಲ್ಲಿ ಮಣ್ಣು ಸವಕಳಿ ಹಾಗೂ ಜಲ ಸಂರಕ್ಷಣೆಗೆ ಅನೇಕ ಕಾಮಗಾರಿಳಿಂದ ನೀರು ಸಂಗ್ರಹವಾಗಿದೆ. ಇದರಿಂದ ಜನ ಜಾನುವಾರುಗಳಿಗೆ ತುಂಬಾ ಅನುಕೂಲವಾಗಿದೆ. ಈ ಸಾಧನೆ ಮಾಡಿರುವ ಹಡಗಲಿ ತಾಪಂಗೆ ವಿಭಾಗೀಯ ಮಟ್ಟದ ಪ್ರಶಸ್ತಿ ಲಭಿಸಿದೆ.

ವೀರಣ್ಣ ನಾಯ್, ತಾಪಂ ನರೇಗಾ ಎಡಿ, ಹೂವಿನಹಡಗಲಿ.

Share this article