ಪೊಲೀಸ್‌ ಸರ್ಪಗಾವಲಿನ ಮಧ್ಯೆ ದರ್ಗಾದಲ್ಲಿನ ಶಿವಲಿಂಗಕ್ಕೆ ಪೂಜೆ - ನ್ಯಾಯಾಲಯ ನಿರ್ದೇಶನ

ಸಾರಾಂಶ

ಪೊಲೀಸ್‌ ಸರ್ಪಗಾವಲಿನಲ್ಲಿ ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೇ ಮಶಾಕ್‌ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಶಿವರಾತ್ರಿ ದಿನ ಬುಧವಾರ ಪೂಜೆ ಸಲ್ಲಿಸಲಾಯಿತು.

  ಕಲಬುರಗಿ : ಪೊಲೀಸ್‌ ಸರ್ಪಗಾವಲಿನಲ್ಲಿ ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೇ ಮಶಾಕ್‌ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಶಿವರಾತ್ರಿ ದಿನ ಬುಧವಾರ ಪೂಜೆ ಸಲ್ಲಿಸಲಾಯಿತು.

ಕಲಬುರಗಿ ಹೈಕೋರ್ಟ್‌ ಪೀಠ 15 ಜನರಿಗೆ ಪೂಜೆಗೆ ಅವಕಾಶ ನೀಡಿದ್ದರಿಂದ ಕಡಗಂಚಿ ಕಟ್ಟಿಮಠದ ಶ್ರೀ ವೀರಭದ್ರ ಶಿವಾಚಾರ್ಯರ ನೇತೃತ್ವದಲ್ಲಿ, ಯುವ ಮುಖಂಡ ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ, ಗುಂಡು ಗೌಳಿ, ಆನಂದ ಪಾಟೀಲ ಕೊರಳ್ಳಿ, ಪ್ರಕಾಶ ಜೋಶಿ, ಶಿವರಾಜ ರದ್ದೇವಾಡಗಿ, ಸಿದ್ರಾಮಯ್ಯ ಹಿರೇಮಠ, ಸಂತೋಷ ಹಾದಿಮನಿ, ಕಲಬುರಗಿ ಲಿಂಗರಾಜ ಅಪ್ಪಾ, ವಿಜಯಕುಮಾರ ರಾಠೋಡ ತೀರ್ಥ ತಾಂಡಾ ಸೇರಿ 10ಕ್ಕೂ ಹೆಚ್ಚು ಮಂದಿ ತೆರಳಿ ರಾಘವಚೈತನ್ಯ ಶಿವಲಿಂಗದ ಪೂಜೆ ನೆರವೇರಿಸಿದರು. ವಕ್ಫ್‌ ಟ್ರಿಬ್ಯೂನಲ್ ಆದೇಶ ಹಿನ್ನೆಲೆಯಲ್ಲಿ ಈ ಬಾರಿ ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಹೊರಗೆ ಉಳಿದಿದ್ದರು.

ಕಳೆದ ವರ್ಷ ಪೂಜೆ ಸಲ್ಲಿಸಿದ 15 ಜನರೇ ಈಗಲೂ ಹೋಗಬೇಕೆಂದು ಸ್ಥಳೀಯ ಪೊಲೀಸರು ಪಟ್ಟು ಹಿಡಿದ ಕಾರಣ 10ರಿಂದ 12 ಜನ ಮಾತ್ರ ಪೂಜೆಗೆ ಹೋಗುವ ಹಾಗಾಯ್ತು. ಕೆಲವರು ಮಹಾಕುಂಭ ಮೇಳಕ್ಕೆ ಹೋಗಿರೋದರಿಂದ 15 ಜನ ಹೋಗಲಾಗಲಿಲ್ಲ. ಮಧ್ಯಾಹ್ನ 2.30ಕ್ಕೆ ಪೂಜೆಗೆ ಹೋದವರು 4 ಗಂಟೆ ಸುಮಾರಿಗೆ ಹೊರಬಂದರು. ಮುಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಜನರ ಓಡಾಟ, ವ್ಯಾಪಾರ ಸಂಪೂರ್ಣ ಬಂದ್‌ ಆಗಿತ್ತು. ಪ್ರಮುಖ ರಸ್ತೆಗಳಲ್ಲಿನ ಅಂಗಡಿ-ಮುಗ್ಗಟ್ಟು ಮುಚ್ಚಿಸಲಾಗಿತ್ತು.

Share this article