ಕನ್ನಡಪ್ರಭ ವಾರ್ತೆ ಕಲಬುರಗಿ
ಜನರನ್ನು ರಕ್ಷಣೆ ಮಾಡಬೇಕಿದ್ದ ಆರಕ್ಷಕರೇ ಭಕ್ಷಕರಾದರೆ ಜನ ಯಾರ ಬಳಿ ಹೋಗಬೇಕು ಎಂಬ ಪ್ರಶ್ನೆಯನ್ನು ಈ ಪ್ರಕರಣ ಮೂಡಿಸಿದೆ.
ಪ್ರತಿ ದಿನ ಕುಡಿದು ಬಂದು ಜಗಳವಾಡುತ್ತಿದ್ದ ಗಂಡನ ಕಾಟಕ್ಕೆ ಬೇಸತ್ತಿದ್ದ ಮಹಿಳೆ ದೂರು ನೀಡಲು ಕಮಲಾಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ನ್ಯಾಯಕ್ಕಾಗಿ ಪೊಲೀಸರ ಬಳಿ ಅಂಗಲಾಚಿದ್ದರು. ಮಹಿಳೆಯ ಅಸಹಾಯಕತೆಯನ್ನು ನೋಡಿದ ಕಾನ್ಸ್‌ಟೇಬಲ್ ಬಸವರಾಜ ಆಕೆಯ ಕಣ್ಣೀರೊರೆಸುವ ನೆಪದಲ್ಲಿ ಮಹಿಳೆಯ ಪರಿಚಯ ಮಾಡಿಕೊಂಡಿದ್ದ. ಅಷ್ಟೇ ಅಲ್ಲದೆ ಪ್ರತಿನಿತ್ಯ ವಾಟ್ಸಪ್ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಸದ್ಯ ಕಿರುಕುಳ ತಾಳಲಾರದೆ ಕಲಬುರಗಿ ಮಹಿಳಾ ಠಾಣೆಯಲ್ಲಿ ಕಾನ್‌ಸ್ಟೇಬಲ್ ಬಸವರಾಜ ವಿರುದ್ಧ ಮಹಿಳೆ ದೂರು ದಾಖಲಿಸಿದ್ದಾರೆ. ಕಮಲಾಪುರ ಠಾಣೆಯಲ್ಲಿ ಐಪಿಸಿ ಸೆ.345ಚಿ ಹಾಗೂ 506 ಅಡಿಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ನಡೆದಿದೆ.