ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಶಿಲಾನ್ಯಾಸ ನಡೆದ ಬಳಿಕ ನಡೆದ ಸಭಾ ಕಾರ್ಯಕ್ರಮ
ಪುತ್ತೂರು: ಮುಂದಿನ ಒಂದೂವರೆ ವರ್ಷದೊಳಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡು, ಎರಡು ವರ್ಷದೊಳಗೆ ಬ್ರಹ್ಮಕಲಶೋತ್ಸವ ನಡೆಯಬೇಕು. ಈ ಗುರಿ ಇಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಶಿಲಾನ್ಯಾಸ ನಡೆದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರ‍್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ಹಳೆ ಸಭಾಭವನ ತೆರವು ಮಾಡಿ ದೇವರಮಾರು ಗದ್ದೆಯ ಇನ್ನೊಂದು ಭಾಗದಲ್ಲಿ 1000 ಜನ ಕೂರುವ ನೂತನ ಕಲ್ಯಾಣ ಮಂಟಪ ನಿರ್ಮಿಸಲಾಗುವುದು. ಇದರಲ್ಲಿ 600 ಜನರಿಗೆ ಭೋಜನದ ವ್ಯವಸ್ಥೆಯೂ ಇರುತ್ತದೆ. ನೆಲ್ಲಿಕಟ್ಟೆಯ ದೇಗುಲ ಜಾಗದಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಿಸಲಾಗುವುದು. ಕೆರೆ ಅಭಿವೃದ್ಧಿಗೆ ಸರ್ಕಾರದಿಂದ 3.75 ಕೋಟಿ ಬಂದಿದೆ. ಹಳೆ ಸಭಾಭವನ ತೆರವು ಮಾಡಿದ ಜಾಗದಲ್ಲಿ 7 ಕೋಟಿ ರು. ವೆಚ್ಚದಲ್ಲಿ ಸಂಗೀತ ಕಾರಂಜಿ ಕೊಳ ನಿರ್ಮಿಸಲಾಗುವುದು. ಆರಂಭದಲ್ಲಿ ಇದನ್ನು ದೇವಳದ ಕೆರೆಯ ಸುತ್ತ ಮಾಡುವ ಯೋಚನೆ ಇತ್ತು. ಆದರೆ ಕೆರೆಯಲ್ಲಿ ನಡೆಯುವ ತೆಪ್ಪೋತ್ಸವಕ್ಕೆ ಇದರಿಂದ ತೊಂದರೆ ಆಗಬಹುದೆಂಬ ಸಲಹೆ ಕಂಡು ಬಂದ ಪ್ರಕಾರ ಬದಲಿ ನಿರ್ಧಾರ ಮಾಡಲಾಗಿದೆ. 60 ಲಕ್ಷ ರು. ವೆಚ್ಚದಲ್ಲಿ ದೇವಳಕ್ಕೆ ಲೈಟಿಂಗ್ ಮಾಡಲಾಗುವುದು ಎಂದರು.ದೇವಳದ ಸುತ್ತ 4 ಕಟ್ಟೆಗಳು, ಕೆರೆಯ ಮುಂದಿನ ಕಟ್ಟೆಗೆ ಪ್ರಾಯೋಜಕತ್ವ ನಾವು ಹುಡುಕಿಕೊಂಡು ಹೋಗಿಲ್ಲ. ದಾನಿಗಳು ಅವರಾಗಿಯೇ ಬಂದು ಒಪ್ಪಿಕೊಂಡಿದ್ದಾರೆ ಎಂದು ಶಾಸಕರು ಹೇಳಿದರು.
ದೇವಳದ ಪಕ್ಕದ 40 ಸೆಂಟ್ಸ್ ಸ್ಥಳವನ್ನು 1 ಕೋಟಿ ರು.. ಗೆ ಖರೀದಿಸಿ ಅವರಿಗೆ 10 ಲಕ್ಷ ಮುಂಗಡ ನೀಡಿದ್ದೇವೆ. ಇದರ ಪಕ್ಕದಲ್ಲಿರುವ 1 ಎಕರೆ ಜಾಗವನ್ನೂ 2 ಕೋಟಿ ರು. ಗಳಿಗೆ ಖರೀದಿಸಲು ಯೋಚಿಸಲಾಗಿದೆ. ಯಾರಾದರೂ ದಾನಿಗಳು ಈ ಮೊತ್ತ ನೀಡಿದಲ್ಲಿ ಅವರ ಹೆಸರಿನಲ್ಲಿ ದೇವರಿಗೆ ಭೂದಾನ ಮಾಡಲಾಗುವುದು. ನೂತನ ಸಭಾಭವನ ನಿರ್ಮಾಣಕ್ಕೆ ಉದ್ಯಮಿ ಪ್ರಕಾಶ್ ಶೆಟ್ಟಿ ಬಂದು ಶಿಲಾನ್ಯಾಸ ಮಾಡಲಿದ್ದಾರೆ ಎಂದು ಹೇಳಿದ ಶಾಸಕರು, ಜೀರ್ಣೋದ್ಧಾರ ನಿಧಿಗೆ ನಾನು 1 ಕೋಟಿ ರು. ದೇಣಿಗೆ ನೀಡಲಿದ್ದೇನೆ. ಅದರಲ್ಲಿ 10 ಲಕ್ಷ ಈಗ ನೀಡುತ್ತಿದ್ದೇನೆ ಎಂದರು.ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ದೇವಸ್ಥಾನಕ್ಕೆ ಸೇರಿದ 8 ಎಕರೆ ಜಾಗ ಸ್ವಾಧೀನಪಡಿಸಿ 20 ಹಳೆಯ ಕಟ್ಟಡ ತೆರವು ಮಾಡಲಾಗಿದೆ. ನೆಲ್ಲಿಕಟ್ಟೆಯಲ್ಲಿ 3 ಮನೆಯವರು ಬಿಟ್ಟು ಕೊಡುವ ಭರವಸೆ ನೀಡಿದ್ದಾರೆ. ದೇವಳದ ಜಾಗ ಎಲ್ಲೆಲ್ಲಿದೆಯೋ ಎಲ್ಲವನ್ನೂ ಸ್ವಾಧೀನ ಮಾಡಿಕೊಳ್ಳಲಾಗುವುದು. ಅನೇಕ ಸಾನಿಧ್ಯಗಳನ್ನು ಮಧ್ಯಂತರ ಅವಧಿಯಲ್ಲಿ ನಾನಾ ಕಡೆ ಸ್ಥಳಾಂತರ ಮಾಡಿದ್ದರು. ಈಗ ಅದೆಲ್ಲವೂ ಮೂಲಕ್ಕೆ ಬರುತ್ತಿದೆ ಎಂದರು.
ವ್ಯವಸ್ಥಾಪನಾ ಸಮಿತಿಯ ಸದಸ್ಯರು, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಕಟ್ಟಡ ಸಮಿತಿ ಸಂಚಾಲಕ ಸಂತೋಷ್ ರೈ ನಳೀಲು , ಸಮಿತಿಯ ಪ್ರಸಾದ ಕೌಶಲ್ ಶೆಟ್ಟಿ, ಶಿವರಾಮ್ ಆಳ್ವ ಮತ್ತಿತರರಿದ್ದರು.ಸಭಾ ಕಾರ್ಯಕ್ರಮಕ್ಕೆ ಮೊದಲು ರಾಜಾಂಗಣ ಸುತ್ತಲಿನ 4 ಕಟ್ಟೆ, ಕೆರೆ ಬಳಿಯ ಕಟ್ಟೆ, ಅಶ್ವತ್ಥ ಮರದ ಕಟ್ಟೆ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಲಾಯಿತು. ಕೆರೆ ಅಭಿವೃದ್ಧಿಗೆ ಚಾಲನೆ ನೀಡಿ, ನೂತನ ಅಯ್ಯಪ್ಪ ಗುಡಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ತಂತ್ರಿಗಳಾದ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಧಾರ್ಮಿಕ ವಿಧಾನ ನೆರವೇರಿಸಿದರು. ಪ್ರಧಾನ ಅರ್ಚಕ ವಸಂತ ಕೆದಿಲಾಯ ಸಹಕರಿಸಿದರು. ದೇವಳದ ಒಳಾಂಗಣದಲ್ಲಿ ನಿರ್ಮಿಸಿರುವ ನೂತನ ಸೇವಾ ಕೌಂಟರ್‌ನ್ನು ಶಾಸಕರು ಉದ್ಘಾಟಿಸಿದರು. ಹಳೆಯ ಕೌಂಟರ್ ತೆರವು ಮಾಡಿ ಅಲ್ಲಿ ನವಗ್ರಹ ಗುಡಿ ನಿರ್ಮಾಣವಾಗಲಿದೆ. ಗದ್ದೆಯಲ್ಲಿರುವ ನವಗ್ರಹ ಗುಡಿ ತೆರವಾಗಲಿದೆ.