ಕನ್ನಡಪ್ರಭ ವಾರ್ತೆ ಕಲಬುರಗಿ
ಕಳೆದ ಒಂದು ವರ್ಷದ ಹಿಂದೆಯೇ ಚಾಲನೆಗೊಂಡಿರುವ ಕಲಬುರಗಿ ಜವಳಿ ಪಾರ್ಕ್ ಮುಂದಿನ 6 ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಿ. ಜಾಧವ್ ಹೇಳಿದ್ದಾರೆ.ಕೇಂದ್ರ ಜವಳಿ ಖಾತೆಯು ನವ ದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ ಭಾರತ್ ಟೆಕ್ಸ್ 2024 ಜಾಗತಿಕ ಜವಳಿ ವಸ್ತು ಪ್ರದರ್ಶನ ಉದ್ಘಾಟಿಸಲಾಯಿತು.
ಕಲಬುರಗಿ ಸೇರಿದಂತೆ ಏಳು ಕಡೆಗಳ ಪಿಎಂ ಮಿತ್ರ ಯೋಜನೆಯಡಿ ಪ್ರಾರಂಭಿಸಲಾಗುವ ಜವಳಿ ಪಾರ್ಕ್‌ನಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು ಸೇರಿದಂತೆ ಉದ್ಯಮಿಗಳು ಬಂಡವಾಳ ಹೂಡುವಂತೆ ಉದ್ಯಮಿಗಳಿಗೆ ಪ್ರಧಾನಮಂತ್ರಿಗಳು ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಾ. ಉಮೇಶ್ ಜಾಧವ್ ನಂತರ ಕೇಂದ್ರ ಜವಳಿ ಇಲಾಖೆಯ ಅಧಿಕಾರಿಗಳ ಜೊತೆ ಕರ್ನಾಟಕ ಜವಳಿ ವಸ್ತು ಪ್ರದರ್ಶನ ಮಳಿಗೆಯಲ್ಲಿ ಸಭೆ ನಡೆಸಿದ್ದಾಗಿಯೂ ಜಾಧವ ಪ್ರಕಟಣೆಯಲ್ಲಿ ಹೇಳಿದ್ದಾರೆ.ಈಗಾಗಲೇ ದೇಶಿಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳ ಜೊತೆ ಮಾತುಕತೆ ಪ್ರಗತಿಯ ಹಂತದಲ್ಲಿದ್ದು, ಇನ್ನೂ ಆರು ತಿಂಗಳಲ್ಲಿ ಕಾಂಪೌಂಡ್ ಸೇರಿದಂತೆ ಮೂಲ ಸೌಲಭ್ಯಗಳ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಉದ್ಯಮ ಆರಂಭಿಸುವವರಿಗೆ ಪ್ರತಿ ಯೂನಿಟ್‌ಗೆ 5 ರುಪಾಯಿಗಿಂತ ಕಡಿಮೆ ದರದಲ್ಲಿ ವಿದ್ಯುತ್ ನೀಡಲಾಗುವುದು ಹಾಗೂ ರಿಯಾಯಿತಿ ದರದಲ್ಲಿ ನೀರು ಪೂರೈಕೆ ಮಾಡಲಾಗುವುದು ಎಂದು ಜವಳಿ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಒಂದು ಲಕ್ಷ ನೇರ ಉದ್ಯೋಗ ಸೃಷ್ಟಿ:ಕಲಬುರಗಿ ಜಿಲ್ಲೆಯ ನದಿಸಿನ್ನೂರ್ ಮತ್ತು ಫಿರೋಜಾಬಾದ್ ಗ್ರಾಮಗಳ ಸಾವಿರ ಎಕರೆ ಪ್ರದೇಶದಲ್ಲಿ ಹತ್ತು ಸಾವಿರ ಕೋಟಿ ವೆಚ್ಚದಲ್ಲಿ ಅಸ್ತಿತ್ವಕ್ಕೆ ಬರಲಿರುವ ಜವಳಿ ಪಾರ್ಕ್‌ಗೆ ಕೇಂದ್ರ ಸರ್ಕಾರ ಮೂಲಭೂತ ಸೌಲಭ್ಯ ಅಭಿವೃದ್ಧಿಗಾಗಿ 600 ಕೋಟಿ ರು.ಗಳ ಅನುದಾನ ಬಿಡುಗಡೆ ಮಾಡಿದೆ.
ಇದರಿಂದ ಒಂದು ಲಕ್ಷ ನೇರ ಉದ್ಯೋಗ ಸೃಷ್ಟಿಯಾಗಲಿದೆ. ಅಷ್ಟೇ ಸಂಖ್ಯೆಯ ಪರೋಕ್ಷ ಉದ್ಯೋಗವು ಸೃಷ್ಟಿಯಾಗಲಿದೆ. ಯೋಜನೆಗಾಗಿ ಭೂಮಿ ನೀಡಿದವರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. ತಾಂತ್ರಿಕ ಸರ್ಟಿಫಿಕೇಟ್ ಹೊಂದದಿದ್ದರೂ ಕನಿಷ್ಠ 5ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದವರಿಗೂ ಉದ್ಯೋಗ ಲಭಿಸುವ ಅವಕಾಶಗಳು ಇವೆ ಎಂದು ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಿದ್ದಾರೆ.ಇದರ ವಿಸ್ತೃತ ಯೋಜನೆ ಅಂಗೀಕಾರವಾಗಿದ್ದು ಸಣ್ಣಪುಟ್ಟ ಪರವಾನಗಿಗಾಗಿ ಕಾಯಲಾಗುತ್ತಿದೆ. ಶೀಘ್ರದಲ್ಲೇ ಜವಳಿ ಪಾರ್ಕ್ ತಲೆ ಎತ್ತಲಿದ್ದು, ರೈಲು ಹಳಿ ಸಂಪರ್ಕವನ್ನೂ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಸೂರತ್ - ಚೆನ್ನೈ ಸಾಗರ್ ಮಾಲಾ ರಸ್ತೆ ಸಂಪರ್ಕವು ಕೇವಲ 15 ರಿಂದ 20 ಕಿ.ಮೀ ದೂರದಲ್ಲಿ ಸಾಗುವುದರಿಂದ ಉದ್ಯಮಿಗಳಿಗೆ ಇದು ಕೂಡ ಅನುಕೂಲಕರವಾಗಲಿದೆ ಎಂದು ಈ ಸಂದರ್ಭದಲ್ಲಿ ಜಾಧವ್ ಹೇಳಿದ್ದಾರೆ.
ಇಂದು ಅಂತಾರಾಷ್ಟ್ರೀಯ ಉದ್ಯಮಿಗಳ ಸಭೆ: ಕಲಬುರಗಿ ಸೇರಿದಂತೆ ದೇಶದಲ್ಲಿ ಮಾತ್ರ ಏಳು ಕಡೆಗಳಲ್ಲಿ ಜವಳಿ ಉದ್ಯಮ ಪ್ರಾರಂಭಿಸಲು ಅಂತಾರಾಷ್ಟ್ರೀಯ ಮಟ್ಟದ ಜವಳಿ ಉದ್ಯಮ ಕಂಪನಿಗಳ ಮುಖ್ಯಸ್ಥರ ಜೊತೆ ನವ ದೆಹಲಿಯಲ್ಲಿ ಸಭೆ ಆಯೋಜಿಸಲಾಗಿದೆ. ಈ ಮಹತ್ವದ ಯೋಜನೆಗೆ ಸಂಬಂಧಿಸಿ ಮುಖ್ಯ ಪ್ರಸ್ತಾಪವು ಕೇಂದ್ರ ಜವಳಿ ಖಾತೆಯಲ್ಲಿ ಒಪ್ಪಿಗೆಗೆ ಸಿದ್ಧವಾಗಿದೆ. ಮಾ.4ನೇ ವಾರದಲ್ಲಿ ಹರಾಜು ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ಈ ಯೋಜನೆಯ ಪೂರ್ಣ ಮಾಹಿತಿಯನ್ನು ವಿಡಿಯೋ ಪ್ರದರ್ಶನದೊಂದಿಗೆ ಸಂಸದರಿಗೆ ಸ್ಪಷ್ಟಪಡಿಸಿದ್ದಾರೆ.ಈ ಸಂದರ್ಭದಲ್ಲಿ ಜವಳಿ ಇಲಾಖೆ ಯೋಜನಾ ಸಲಹೆಗಾರರಾದ ವಾಜೀರ್ ಅಡ್ವೈಸರ್‌ನ ಉದ್ಯಮ ನಿರ್ದೇಶಕ ಸಂಜಯ್ ಅರೋರ ಯೋಜನೆಯ ಪೂರ್ಣ ಮಾಹಿತಿ ನೀಡಿದರು. ಜವಳಿ ಇಲಾಖೆಯ ಕರ್ನಾಟಕ ರಾಜ್ಯ ಆಯುಕ್ತರಾದ ಶ್ರೀಧರ್ ಇಲಾಖೆಯ ಉಪ ಕಾರ್ಯದರ್ಶಿ ರವೀಂದ್ರ ನಿಂಗಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.