ನಿರಂತರ ರಂಗ ಉತ್ಸವ: ಮೂರನೇ ದಿನ ರಂಗಗೀತೆಗಳ ಸಂಗೀತ ಸಂಭ್ರಮ

KannadaprabhaNewsNetwork |  
Published : Dec 20, 2025, 01:00 AM IST
29 | Kannada Prabha

ಸಾರಾಂಶ

ರಂಗಭೂಮಿಯ ಸಂವೇದನೆ ಮತ್ತು ಸಂಗೀತದ ಸೌಂದರ್ಯ ಒಟ್ಟಾಗಿ ಮೂಡಿಬಂದ ಈ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಮೈಸೂರುನಗರದ ಕಲಾಮಂದಿರದ ಕಿರುರಂಗಮಂದಿರದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ನಿರಂತರ ರಂಗ ಉತ್ಸವ ಯಶಸ್ವಿಯಾಗಿ ಸಾಗುತ್ತಿದ್ದು, ಮೂರನೇ ದಿನವಾದ ಶುಕ್ರವಾರ ಸಂಜೆ ದೇವಾನಂದ ವರಪ್ರಸಾದ್ ಹಾಗೂ ನಿರಂತರದ ಗೆಳೆಯರಿಂದ ಶ್ರೀನಿವಾಸ್ ಭಟ್ ಚೀನಿ ಅವರ ಸಂಗೀತ ನಿರ್ದೇಶನದ ರಂಗಗೀತೆಗಳ ಕಾರ್ಯಕ್ರಮ ನಡೆಯಿತು.ರಂಗಭೂಮಿಯ ಸಂವೇದನೆ ಮತ್ತು ಸಂಗೀತದ ಸೌಂದರ್ಯ ಒಟ್ಟಾಗಿ ಮೂಡಿಬಂದ ಈ ಕಾರ್ಯಕ್ರಮ ಸಂಗೀತಾಸಕ್ತರ ಮನಸೂರೆಗೊಳಿಸಿತು. ಹಿರಿಯ ಸಾಹಿತಿ ರಾಜಪ್ಪ ದಳವಾಯಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ನಿರಂತರದ ಗೆಳೆಯರು ಕಳೆದ ಮೂರು ದಶಕಗಳಿಂದ ಕಾಲೇಜು ದಿನಗಳಿಂದಲೇ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ನಿರಂತರವಾಗಿ ಸಾಗಿಬಂದಿದ್ದಾರೆ ಎಂದು ಪ್ರಶಂಸಿಸಿದರು.ಕಲೆ, ಸಾಹಿತ್ಯ ಮತ್ತು ರಂಗಭೂಮಿಯ ಪೋಷಣೆ ನಿರಂತರವಾಗಿ ನಡೆಯಬೇಕು ಎಂಬ ನಂಬಿಕೆಯೇ ಈ ರಂಗೋತ್ಸವಗಳ ಹಿಂದಿರುವ ಉದ್ದೇಶ ಎಂದು ಹೇಳಿದರು.ಬೇರೆ ಬೇರೆ ಊರುಗಳು, ಜಿಲ್ಲೆಗಳು ಹಾಗೂ ನಗರಗಳಲ್ಲಿ ಪ್ರದರ್ಶಿತವಾದ ಸಾಮಾಜಿಕ ಕಳಕಳಿಯ ನಾಟಕಗಳು ಮತ್ತು ಜನಪದ ಪ್ರಕಾರಗಳನ್ನು ಈ ರಂಗೋತ್ಸವದಲ್ಲಿ ನಿರಂತರವಾಗಿ ಪರಿಚಯಿಸುತ್ತಾ ಬಂದಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.ತಾವು ನಿರಂತರದ ಅನೇಕ ನಾಟಕಗಳು ಹಾಗೂ ಉತ್ಸವಗಳನ್ನು ನೋಡಿಕೊಂಡು ಬಂದಿದ್ದೇನೆ. ಚಿದಂಬರರಾವ್ ಜಂಬೆ ನಿರ್ದೇಶನದಲ್ಲಿ ನಿರಂತರದ ತಂಡ ಅಭಿನಯಿಸಿದ್ದ ‘ಟಿ ಹೌಸ್’ ನಾಟಕ ಪ್ರಯೋಗವನ್ನು ಸ್ಮರಿಸುತ್ತಾ, ಅದು ಇನ್ನೂ ಕಣ್ಣು ಕಟ್ಟಿದಂತಿದೆ ಎಂದು ಹೇಳಿದರು.ಮಳೆ ನೀರಿನ ಕೊಯ್ಲು, ಅಂಬೇಡ್ಕರ್ ಪಾರ್ಕ್ಗಳ ನಿರ್ಮಾಣ, ಚಾಮಲಾಪುರ ಹೋರಾಟ, ಸಾಕ್ಷರತಾ ಆಂದೋಲನ ಸೇರಿದಂತೆ ನಿರಂತರದ ಸಾಮಾಜಿಕ ಕಾರ್ಯಗಳು ಬಹುಮುಖವಾಗಿವೆ ಎಂದು ಅವರು ವಿವರಿಸಿದರು.ಹೊಸ ಸಂಚಲನ ಮೂಡಿಸಿದ ಕೂಡಲಸಂಗಮ ನೃತ್ಯ ರೂಪಕವು ಗಾಯಕ ಸಿ. ಅಶ್ವಥ್ ಅವರಿಗೆ ದೊಡ್ಡ ಗೌರವ ತಂದುಕೊಟ್ಟಿದೆ ಎಂದೂ ಅವರು ಪ್ರಸ್ತಾಪಿಸಿದರು.ರಹಮತ್ ತರೀಕೆರೆ ಅವರ ಕೃತಿಯನ್ನು ಆಧಾರವಾಗಿ ತೆಗೆದುಕೊಂಡು ರೂಪುಗೊಂಡ ನಾಟಕವೇ ‘ಪ್ರತಿ ಗಂಧರ್ವ’ ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ದಾವಣಗೆರೆಯ ವೃತ್ತಿ ರಂಗಭೂಮಿ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ, ಪ್ರೊ. ಕಾಳಚನ್ನೇಗೌಡ, ಡಾ. ರೇಖಾ, ಪ್ರಸಾದ್ ಕುಂದೂರು, ಪ್ರೊ.ಎಚ್.ಎಸ್. ಉಮೇಶ್, ರವೀಶ್, ನಿರಂತರದ ಶ್ರೀನಿವಾಸ್ ಪಾಹಲಳ್ಳಿ ಮೊದಲಾದವರು ಇದ್ದರು.ಕಾರ್ಯಕ್ರಮದ ನಂತರ, ಸಾಹಿತಿ ರಾಜಪ್ಪ ದಳವಾಯಿ ಅವರ ರಚನೆಯ ‘ಪ್ರತಿ ಗಂಧರ್ವ’ ನಾಟಕವನ್ನು ವೃತ್ತಿ ರಂಗಭೂಮಿ ರಂಗಾಯಣ, ದಾವಣಗೆರೆ ತಂಡದಿಂದ ಪ್ರದರ್ಶಿಸಲ್ಪಟ್ಟಿತು. ಮಾಲತೇಶ್ ಬಡಿಗೇರ ಅವರ ನಿರ್ದೇಶನ ಹಾಗೂ ರವಿ ಮೂರೂರು ಅವರ ಸಂಗೀತ ನಿರ್ದೇಶನದಲ್ಲಿ ನಾಟಕವು ಪ್ರೇಕ್ಷಕರ ಮನದಲ್ಲಿ ಆಳವಾದ ಪರಿಣಾಮ ಬೀರಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಎಂ.ಚಂದ್ರಪ್ಪರಿಂದ ಸರ್ಕಾರಿ ಗುಡ್ಡ ಕಬಳಿಕೆ
ಇಂದು ಸ್ತುತಿ ಶಂಕರ- ಸ್ತೋತ್ರ ಮಹಾ ಸಮರ್ಪಣೆ