ವ್ಯಸನಿಗಳಾಗುವುದು ತಪ್ಪಿಸಲು ಯೋಗ ಸಹಕಾರಿ

KannadaprabhaNewsNetwork |  
Published : Jun 22, 2025, 11:47 PM IST
4 | Kannada Prabha

ಸಾರಾಂಶ

ಸಾಮಾಜಿಕ ಜಾಲತಾಣ, ಮೊಬೈಲ್‌ ಮತ್ತಿತರ ಗೀಳಿನಿಂದಾಗಿ ಏಕಾಗ್ರತೆ ಕಳೆದುಕೊಳ್ಳುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಮೈಸೂರು

ಇತ್ತೀಚಿನ ಯುವಕರಲ್ಲಿ ಏಕಾಗ್ರತೆ ಕೊರತೆ ಕಾಡುತ್ತಿದೆ. ಪಾಶ್ಚಾತ್ಯ ಸಂಸ್ಕೃತಿಯ ದಾಸರಾಗಿ, ವ್ಯಸನಿಗಳಾಗುತ್ತಿರುವ ಆಧುನಿಕ ಜನಾಂಗವನ್ನು ಸರಿದಾರಿಗೆ ತರುವಲ್ಲಿ ಯೋಗ ನೆರವಾಗಲಿದೆ ಎಂದು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಕುಲಪತಿ ಡಾ.ಬಿ.ಸಿ. ಭಗವಾನ್‌ ಹೇಳಿದರು.

ನಗರದ ಕಲಾಮಂದಿರದಲ್ಲಿ ಭಾನುವಾರ ಕರ್ನಾಟಕ ಯೋಗ ಶಿಕ್ಷಕರ ಒಕ್ಕೂಟವು ಆಯೋಜಿಸಿದ್ದ ರಾಜ್ಯಮಟ್ಟದ ದ್ವಿತೀಯ ಯೋಗ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

1990ರ ನಂತರ ಜನಿಸಿದ ಪೀಳಿಗೆಯಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಮೇಲೆ ಬಹಳ ಆಸಕ್ತಿ ಇರುವಂತೆ ತೋರುತ್ತಿದೆ. ಅಂತೆಯೇ ಸಾಮಾಜಿಕ ಜಾಲತಾಣ, ಮೊಬೈಲ್‌ ಮತ್ತಿತರ ಗೀಳಿನಿಂದಾಗಿ ಏಕಾಗ್ರತೆ ಕಳೆದುಕೊಳ್ಳುತ್ತಿದ್ದಾರೆ. ಸಂಯಮವನ್ನು ಕಳೆದುಕೊಳ್ಳುತ್ತಿದ್ದಾರೆ. ಶೇ. 25 ರಷ್ಟು ಯುವಕರು ತಂಬಾಕು ಮತ್ತಿತರ ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರನ್ನು ಸರಿದಾರಿಗೆ ತರಲು ಅವರಿಗೆ ಯೋಗವನ್ನು ಪರಿಚಯಿಸಬೇಕು ಎಂದರು.

ಯೋಗ ಇಂದು ಪ್ರಪಂಚದಾದ್ಯಂತ ಹರಡಿದೆ. ನಮ್ಮ ಬದಲಾದ ಜೀವನ ಶೈಲಿ, ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದ್ದು, 40- 50 ವರ್ಷದಿಂದ ಯೋಗದ ಬೆಳವಣಿಗೆ ವಿಸ್ತಾರವಾಗಿದೆ. 1830 ರಲ್ಲಿ ಮೆಕಾಲೆ ಬ್ರಿಟಿಷ್‌ ಪಾರ್ಲಿಮೆಂಟ್ ನಲ್ಲಿ ಹೇಳಿದ್ದು ಭಾರತವನ್ನು ಗೆಲ್ಲಬೇಕಾದರೆ ಅವರ ಸಂಸ್ಕೃತಿ ಮತ್ತು ಶಿಕ್ಷಣ ಪದ್ಧತಿ ಒಡೆಯಬೇಕು ಎಂದಿದ್ದ. ಆದರೆ ಭಾರತೀಯ ಸಂಸ್ಕೃತಿ ಎಷ್ಟು ಆಳವಾಗಿತ್ತು ಎಂದರೆ ನಮ್ಮ ಶಿಕ್ಷಣ ಪದ್ಧತಿಯನ್ನಷ್ಟೇ ಬದಲಿಸಲು ಸಾಧ್ಯವಾಯಿತು. ಸಂಸ್ಕೃತಿಯನ್ನು ನಾಶ ಮಾಡಲು ಆಗಲಿಲ್ಲ. ಆದರೆ ಈಗಿನ ಪೀಳಿಗೆ ಪಾಶ್ಚಾತ್ಯ ಸಂಸ್ಕೃತಿಯ ಗೀಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿ ಎಂದರು.

ನಮ್ಮ ರಾಜೀವ್‌ಗಾಂಧಿ ಆರೋಗ್ಯ ವಿವಿ ಆವರಣವನ್ನು ಮಾಧಕ ವಸ್ತು ಮುಕ್ತ ವಲಯವನ್ನಾಗಿ ಘೋಷಿಸಿದ್ದೇವೆ. ಅಂತೆಯೇ ಇತರ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು. ಸಾಂಕ್ರಾಮಿಕವಲ್ಲದ ರೋಗಗಳ ನಿಯಂತ್ರಣ ಮತ್ತು ಗುಣಪಡಿಸಲು ಇಂದು ಯೋಗ ನೆರವಾಗಿದೆ. ಈ ಬಗ್ಗೆ ಸಾಕಷ್ಟು ಸಂಶೋಧನೆಗಳೂ ನಡೆದಿದ್ದು, ಹೃದ್ರೋಗ ಮಧುಮೇಹ, ಅಧಿಕ ರಕ್ತದೊತ್ತಡ, ಹಾರ್ಮೋನುಗಳ ವ್ಯತ್ಯಸ, ಕಿಡ್ನಿ ಸಮಸ್ಯೆ ಮುಂತಾದವುಗಳಿಗೆ ಯೋಗ ಒಂದೇ ಪರಿಹಾರ ಎಂಬುದು ಸಂಶೋಧನೆಗಳಿಂದ ಕಂಡುಬಂದಿದೆ. ಯೋಗದಿಂದ ಕೇವಲ ರೋಗ ನಿಯಂತ್ರಣ ಮಾತ್ರವಲ್ಲದೆ, ನಿವಾರಣೆಯೂ ಆಗುತ್ತದೆ. ಉತ್ತಮ ಉಸಿರಾಟ ಕ್ರಿಯೆ ಮತ್ತು ರಕ್ತಪರಿಚಲನೆಗೆ ದಾರಿಯಾಗುತ್ತದೆ ಎಂದು ಅವರು ಹೇಳಿದರು.

ಈ ರಾಜ್ಯಮಟ್ಟದ ಸಮ್ಮೇಳನದಲ್ಲಿ ಯೋಗದ ಬಗ್ಗೆ ಸಾಕಷ್ಟು ಚರ್ಚೆ ನಡೆಯಲಿದೆ. ಇಲ್ಲಿನ ಪ್ರಮುಖ ತೀರ್ಮಾನಗಳನ್ನು ನಮ್ಮ ವಿವಿಗೆ ಕಳುಹಿಸಿಕೊಟ್ಟರೆ ಅವುಗಳನ್ನು ಅಳವಡಿಸಿಕೊಳ್ಳುವುದಾಗಿ ಅವರು ತಿಳಿಸಿದರು.

ವೇದ ವಿಜ್ಞಾನ ಗುರುಕುಲಂನ ಅಧ್ಯಕ್ಷ ಪ್ರೊ. ರಾಮಚಂದ್ರ ಜಿ. ಭಟ್‌ಕೋಟೆಮನೆ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಯೋಗ ಸಾಧಕ ಡಾ.ಬಿ.ಎನ್‌.ಎಸ್‌. ಅಯ್ಯಂಗಾರ್‌, ಯೋಗ ಸಮ್ಮೇಳನ ಸಮಿತಿ ಕಾರ್ಯಾಧ್ಯಕ್ಷ ಡಾ.ಎಸ್‌.ಪಿ. ಯೋಗಣ್ಣ, ಕವೀಶ್‌ ಗೌಡ, ಭಾರತೀಯ ಯೋಗ ಧಾಮದ ಸಂಸ್ಥಾಪಕ ಡಾ.ಕೆ.ಎಲ್‌. ಶಂಕರನಾರಾಯಣ ಜೋಯಿಸ್‌, ಎನ್‌. ಅನಂತ, ಎ. ಹರ್ಷವರ್ಧನ, ಮಡ್ಡಿಕೆರೆ ಗೋಪಾಲ್, ಡಾ.ಕೆ. ಲೀಲಾಪ್ರಕಾಶ್‌ ಮೊದಲಾದವರು ಇದ್ದರು.-- ಬಾಕ್ಸ್-- --ಮೈಸೂರು ಯೋಗದ ರಾಜಧಾನಿ--ಶಾಸಕ ದರ್ಶನ್‌ ಧ್ರುವನಾರಾಯಣ್‌ ಮಾತನಾಡಿ, ಮೈಸೂರು ಈಗ ಯೋಗದ ರಾಜಧಾನಿಯಾಗಿದೆ. ಇಂದಿನ ಯುವಕರು ಮೊಬೈಲ್‌, ಟ್ಯಾಬ್‌ ಬಳಕೆಯಲ್ಲಿ ತೊಡಗುವುದು ಹೆಚ್ಚಾಗಿದೆ. ಇದು ‌ಮುಂದಿನ ದಿನಗಳಲ್ಲಿ ಸಮಸ್ಯೆಯಾಗಿದೆ. ಮಕ್ಕಳಿಗೆ ದೈಹಿಕ ಶಿಕ್ಷಣ ನೀಡಬೇಕು. ಯೋಗದ ಉಪಯೋಗವನ್ನು ತಿಳಿಸಿಕೊಡಬೇಕು. ನಾವು ಶಿಕ್ಷಣಕ್ಕೆ ನೀಡುವಷ್ಟೇ ಆದ್ಯತೆಯನ್ನು ಕ್ರೀಡೆ ಮತ್ತು ಯೋಗಕ್ಕೆ ನೀಡಬೇಕು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿ.20ರಿಂದ ಕರಾವಳಿ ಉತ್ಸವ: 6 ಬೀಚ್‍ಗಳಲ್ಲಿ ಕಾರ್ಯಕ್ರಮ
ರೈತರಿಗೆ ಭರವಸೆ ಮೂಡಿಸಿದ ಚಳಿ: ತೋಟಗಾರಿಕೆಗೆ ಅನುಕೂಲ