ಹುಬ್ಬಳ್ಳಿ:
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡಿಲ್ಲ. ಯೋಜನೆ ಅನುಷ್ಠಾನ ಕುರಿತಾಗಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ. ಈ ಭಾಗದ ರೈತರು ನಿರಂತರ ಹೋರಾಟ ನಡೆಸುತ್ತಿದ್ದು, ಪರಿಸರ ಇಲಾಖೆಯಿಂದ ಅನುಮತಿ ದೊರೆತ ತಕ್ಷಣವೇ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲಿದೆ ಎಂದರು.
ಕರ್ನಾಟಕಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಮಹದಾಯಿ ನ್ಯಾಯಾಧಿಕರಣ 3.09 ಟಿಎಂಸಿ ನೀರು ಪೂರೈಕೆಗೆ ಹಸಿರು ನಿಶಾನೆ ತೋರಿತ್ತು. ಆದರೆ, ನ್ಯಾಯಾಧಿಕರಣದ ಈ ಆದೇಶದ ವಿರುದ್ಧ ಗೋವಾ ಸರ್ಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಯೋಜನೆಯ ಜಾರಿಗೆ ಅನುಮತಿ ನೀಡದಂತೆ ತಕರಾರು ಅರ್ಜಿ ಸಲ್ಲಿಸಿದೆ ಎಂದು ಹೇಳಿದರು.ಅಂತಾರಾಜ್ಯ ನದಿ ನೀರು ಹಂಚಿಕೆಯ ಸಂಬಂಧ ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿದೆ. ಗೋವಾ ಸರ್ಕಾರ ಸಲ್ಲಿಸಿರುವ ತಕರಾರು ಅರ್ಜಿಗೆ ಕರ್ನಾಟಕದ ಪರವಾಗಿ ಕಾನೂನು ಸಚಿವ ಎಚ್.ಕೆ. ಪಾಟೀಲ ಅವರ ಸಂಬಂಧಿ ಮೋಹನ ಕಾತರಕಿ ಅವರೇ ವಾದ ಮಂಡಿಸುತ್ತಿದ್ದಾರೆ. ಹೀಗಾಗಿ ಎಚ್.ಕೆ. ಪಾಟೀಲ ಅವರೇ ಮುತುವರ್ಜಿ ವಹಿಸಿ ತೀರ್ಪು ಕರ್ನಾಟಕದ ಪರವಾಗಿ ಬರುವಂತೆ ನೋಡಿಕೊಳ್ಳಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ, ಮೇಯರ್ ಜ್ಯೋತಿ ಪಾಟೀಲ್, ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮುಖಂಡರಾದ ಶಿವು ಮೆಣಸಿನಕಾಯಿ, ಮಹೇಂದ್ರ ಕೌತಾಳ, ವಸಂತ ನಾಡಜೋಶಿ, ರಾಜು ಕೋರ್ಯಾಣಮಠ ಇದ್ದರು.