ಹುಬ್ಬಳ್ಳಿ: ಉತ್ತರ ಕರ್ನಾಟಕದ ಬಹುವರ್ಷದ ಬೇಡಿಕೆಯಾಗಿರುವ ಕಳಸಾ- ಬಂಡೂರಿ ಯೋಜನೆಗಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿ ತನ್ನ ಬದ್ಧತೆ ಮೆರೆದಿದೆ. ಕೇಂದ್ರದಿಂದ ಅನುಮತಿ ಕೊಡಿಸುವ ಮೂಲಕ ಯೋಜನೆ ಬಗ್ಗೆ ತನ್ನ ಬದ್ಧತೆ ಎಷ್ಟಿದೆ ಎಂಬುದನ್ನು ಬಿಜೆಪಿಯವರು ಸಾಬೀತು ಪಡಿಸಲಿ ಎಂದು ವಿಧಾನ ಪರಿಷತ್ ಸರ್ಕಾರದ ಮುಖ್ಯಸಚೇತಕ ಸಲೀಂಅಹ್ಮದ ಸವಾಲೆಸೆದಿದ್ದಾರೆ.
ರಾಜ್ಯ ಬಿಜೆಪಿಗರಿಗೆ ನಾಚಿಕೆಯಾಗಬೇಕು. ಬರೀ ಇಲ್ಲಸಲ್ಲದ ಭರವಸೆ ನೀಡಿ ಜಾರಿಗೊಳ್ಳುವುದಲ್ಲ. ಯೋಜನೆ ಹಾಗೂ ಉತ್ತರ ಕರ್ನಾಟಕದ ಜನತೆಯ ಬಗ್ಗೆ ನಿಜವಾದ ಕಾಳಜಿ ಇದ್ದರೆ ತಕ್ಷಣವೇ ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸಬೇಕು. ಈ ಮೂಲಕ ತಮ್ಮ ಬದ್ಧತೆ ಪ್ರದರ್ಶಿಸಲಿ ಎಂದು ಸವಾಲೆಸೆದಿದ್ದಾರೆ.
ಯೋಜನೆ ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ಬದ್ಧವಾಗಿದೆ. ಭೂಸ್ವಾಧೀನಕ್ಕೂ ಅಧಿಸೂಚನೆ ಹೊರಡಿಸಿದೆ. ಇನ್ನಾದರೂ ಇಲ್ಲಸಲ್ಲದ ಹೇಳಿಕೆ ನೀಡುತ್ತಾ ಜನರ ದಾರಿ ತಪ್ಪಿಸುವ ಬದಲು ಅನುಮತಿ ಕೊಡಿಸಲು ಕೇಂದ್ರ ಸಚಿವರು ಪ್ರಯತ್ನಿಸಬೇಕು. ಜತೆಗೆ ಕೇಂದ್ರ ಸರ್ಕಾರವೂ ರಾಜ್ಯದ ನ್ಯಾಯಯುತ ಬೇಡಿಕೆ ಈಡೇರಿಸುವ ಮೂಲಕ ಯೋಜನೆ ತನ್ನ ಬದ್ಧತೆ ಪ್ರದರ್ಶಿಸಬೇಕು ಎಂದು ಸಲೀಂ ಒತ್ತಾಯಿಸಿದ್ದಾರೆ.