ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ನಲ್ಲಿ ಈ ಬಾರಿ ಕಲಬುರಗಿಯ ತೊಗರಿ ಬೇಳೆಯ ಘಮ ಪಸರಿಸಿದೆ. ಪ್ರಧಾನಿಯವರು ಭಾನುವಾರದ ತಮ್ಮ 139ನೇ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಕಲಬುರಗಿಯ ತೊಗರಿ ಬೇಳೆ ಮಾಲ್ಡೀವ್ಸ್ ದೇಶಕ್ಕೆ ರಫ್ತಾಗುತ್ತಿರುವ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದರು. ಮೋದಿಯವರ ಈ ಮೆಚ್ಚುಗೆ ಮಾತುಗಳು ತೊಗರಿ ಕಣಜ ಕಲಬುರಗಿಯಲ್ಲಿ ದಶಕಗಳಿಂದ ತೊಗರಿ ಬೇಸಾಯ ಮಾಡಿಕೊಂಡು ಬರುತ್ತಿರುವ ತೊಗರಿ ರೈತರನ್ನು ಹೆಮ್ಮೆಯಿಂದ ಬೀಗುವಂತ ಮಾಡಿದೆ.
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿ.ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ನಲ್ಲಿ ಈ ಬಾರಿ ಕಲಬುರಗಿಯ ತೊಗರಿ ಬೇಳೆಯ ಘಮ ಪಸರಿಸಿದೆ. ಪ್ರಧಾನಿಯವರು ಭಾನುವಾರದ ತಮ್ಮ 139ನೇ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಕಲಬುರಗಿಯ ತೊಗರಿ ಬೇಳೆ ಮಾಲ್ಡೀವ್ಸ್ ದೇಶಕ್ಕೆ ರಫ್ತಾಗುತ್ತಿರುವ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದರು. ಮೋದಿಯವರ ಈ ಮೆಚ್ಚುಗೆ ಮಾತುಗಳು ತೊಗರಿ ಕಣಜ ಕಲಬುರಗಿಯಲ್ಲಿ ದಶಕಗಳಿಂದ ತೊಗರಿ ಬೇಸಾಯ ಮಾಡಿಕೊಂಡು ಬರುತ್ತಿರುವ ತೊಗರಿ ರೈತರನ್ನು ಹೆಮ್ಮೆಯಿಂದ ಬೀಗುವಂತ ಮಾಡಿದೆ.ಭಾನುವಾರ ಪ್ರಸಾರವಾದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಹೇಗೆ ಒದಗುತ್ತದೆ ಎಂಬುದಕ್ಕೆ ಕಲಬುರಗಿಯ ತೊಗರಿ ಬೇಳೆ ಮಾಲ್ಡೀವ್ಸ್ ರಫ್ತಾಗಿರುವುದೇ ಉದಾಹರಣೆ ಎಂದರು.ಹಬ್ಬಗಳ ಸೀಸನ್ನಲ್ಲಿ ದೇಶದ ಜನರು ''''''''ವೋಕಲ್ ಫಾರ್ ಲೋಕಲ್'''''''' (ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ) ಅಭಿಯಾನಕ್ಕೆ ಹೆಚ್ಚಿನ ಬೆಂಬಲ ನೀಡುತ್ತಿದ್ದಾರೆ. ಈ ದೇಶಿ ಪ್ರೇಮದಿಂದಾಗಿ ಭಾರತದ ಸ್ಥಳೀಯ ಉತ್ಪನ್ನಗಳು ಇಂದು ಜಗತ್ತಿನಾದ್ಯಂತ ಹೊಸ ಮಾರುಕಟ್ಟೆಗಳನ್ನು ಕಂಡುಕೊಳ್ಳುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದರು.*ಮಾಲ್ಡೀವ್ಸ್ ತಲುಪಿದ ಕಲಬುರಗಿ ತೊಗರಿ ಬೇಳೆ: ಕರ್ನಾಟಕದ ಹೆಮ್ಮೆಯ, ಭೌಗೋಳಿಕ ಸೂಚ್ಯಂಕ ಮಾನ್ಯತೆ ಹೊಂದಿರುವ ಕಲಬುರಗಿಯ ಪ್ರಸಿದ್ಧ ತೊಗರಿ ಬೇಳೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಲ್ಡೀವ್ಸ್ ದೇಶಕ್ಕೆ ರಫ್ತಾಗುತ್ತಿದೆ. ಈಗಾಗಲೇ 1 ಮೆಟ್ರಿಕ್ ಟನ್ ಬೇಳೆ ಮಾಲ್ಡೀವ್ಸ್ ಸೇರಿರುವುದು ಸ್ಥಳೀಯ ಉತ್ಪನ್ನಗಳಿಗೆ ಹೇಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ತೆರೆದುಕೊಳ್ಳುತ್ತಿದೆ ಎಂಬುದಕ್ಕೆ ಕನ್ನಡಿ ಎಂದು ಮೋದಿ ಶ್ಲಾಘಿಸಿದ್ದಾರೆ.*ರೈತರಿಗೆ ಹೊಸ ಅವಕಾಶ: ಇಂತಹ ಜಾಗತಿಕ ಬೇಡಿಕೆಯಿಂದಾಗಿ ಭಾರತದ ಸ್ಥಳೀಯ ರೈತರಿಗೆ ಮತ್ತು ದೇಶಿ ಉತ್ಪಾದಕರಿಗೆ ಹೊಸ ವ್ಯಾಪಾರ ಹಾಗೂ ಆರ್ಥಿಕ ಮಾರುಕಟ್ಟೆಯ ಅವಕಾಶಗಳು ಮುಕ್ತವಾಗಿವೆ ಎಂದೂ ನರೇಂದ್ರ ಮೋದಿ ತಮ್ಮ ಮನದಾಳದ ಮಾತಿನಲ್ಲಿ ತಿಳಿಸಿದ್ದಾರೆ.ಇದು ಕಲಬುರಗಿಯ ರೈತರಿಗೆ ಹೆಮ್ಮೆಯ ಕ್ಷಣ, ‘ವೋಕಲ್ ಫಾರ್ ಲೋಕಲ್’ ಅಭಿಯಾನದ ಮೂಲಕ ಸ್ಥಳೀಯ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯನ್ನು ತಲುಪುತ್ತಿವೆ. ಇದರಿಂದ ರೈತರಿಗೂ ಹೆಚ್ಚಿನ ಅನುಕೂಲವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ತಮ್ಮ ಮನ್ ಕಿ ಬಾತ್ ಭಾಷಣದಲ್ಲಿ ಕಲಬುರಗಿ ರೊಟ್ಟಿಗಳ ಬಗ್ಗೆ ಪ್ರಸ್ತಾಪಿಸಿದ್ದರು. ಮಹಿಳಾ ಉದ್ಯಮ ಶೀಲತೆ ಕಲಬುರಗಿ ಭಾಗದಲ್ಲಿ ಜೋಳದ ರೊಟ್ಟಿಯೊಂದಿಗೆ ಅರಳುತ್ತಿರುವ ಬಗೆಯನ್ನೂ ಮುಕ್ತ ಕಂಠದಿಂದ ಶ್ಲಾಘಿಸಿದ್ದನ್ನು ಸ್ಮರಿಸಬಹುದು.*ಮಾರುಕಟ್ಟೆಯಲ್ಲಿ ಧಾರಣೆ ಗಗನಕ್ಕೆ: ತೊಗರಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ರಫ್ತಾಗುತ್ತಿರುವ ಈ ಸಂದರ್ಭದಲ್ಲಿ ಸ್ಥಳೀಯವಾಗಿ ತೊಗರಿ ಕಣಜ ಕಲಬುರಗಿಯಲ್ಲೇ ತೊಗರಿ ಬೇಳೆ ಬೆಲೆ ಗಗನಕ್ಕೇರಿದೆ. ಸದ್ಯ ಉತ್ಕೃಷ್ಟ ಗುಣಮಟ್ಟದ (ಪಟಕಾ) ತೊಗರಿ ಬೇಳೆ ಬೆಲೆ ಕೆಜಿಗೆ 160 ರು ಇದೆ. ಕ್ವಿಂಟಾಲ್ ತೊಗರಿ ಬೇಳೆ ಸದ್ಯದ ಮಾರುಕಟ್ಟೆಯಲ್ಲಿ 16 ಸಾವಿರ ರುಪಾಯಿ ಬೆಲೆಗೆ ಮಾರಾಟವಾಗುತ್ತಿದೆ.
ಈ ಬಾರಿ ಬರಗಾಲದ ಕರಿ ನೆರಳು ಆವರಿಸಿರೋದರಿಂದ ತೊಗರಿ ಕಣಜದಲ್ಲಿ ಶೇ.60ರಷ್ಟು ತೊಗರಿ ಹಾಳಾಗಿದೆ. ತೊಗರಿ ಫಸಲು ಇಳುವರಿ ಕೈ ಕೊಟ್ಟಿದ್ದರಿಂದಲೂ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ತೊಗರಿ ಲಗ್ಗೆ ಇಟ್ಟಿದ್ದರಿಂದಲೂ ಸ್ಥಳೀಯವಾಗಿ ತೊಗರಿ ಬೇಳೆ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ.
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಜೋಳದ ರೊಟ್ಟಿ ಬಗ್ಗೆ ಮನ್ ಕೀ ಬಾತ್ನಲ್ಲಿ ಪ್ರಸ್ತಾಪಿಸಿದ ಕೆಲವೇ ಗಂಟೆಗಳಲ್ಲಿ ಕಲಬುರಗಿ ರೊಟ್ಟಿ ಉತ್ಪಾದಕರ ಸಹಕಾರ ಸಂಘವು ಅಮೆಜಾನ್ ಮೂಲಕ 60 ಕ್ಕೂ ಹೆಚ್ಚು ಆರ್ಡರ್ಗಳನ್ನು ಪಡೆದುಕೊಂಡಿತ್ತು. ಇದೀಗ ತೊಗರಿ ಬೇಳೆಯ ರಫ್ತಿನ ಕುರಿತಂತೆ ಮೋದಿ ಮೆಚ್ಚುಗೆ ಮಾತನ್ನಾಡಿದ್ದಾರೆ. ಹೀಗಾಗಿ ಸಹಜವಾಗಿಯೇ ಕಲಬುರಗಿಯ ಗುಣಮಟ್ಟದ ತೊಗರಿ ಬೇಳೆಗೆ ಬೇಡಿಕೆ ಹೆಚ್ಚಲಿದೆ ಎಂದು ರೈತರು, ವರ್ತಕರು ಹೇಳುತ್ತಿದ್ದಾರೆ.
ವಿದೇಶಕ್ಕೆ ರಫ್ತು: ಶೇ.30ಕ್ಕೂ ಅಧಿಕ ಲಾಭ: ಸೆ. 24ರಂದು ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) ವತಿಯಿಂದ ಒಂದು ಮೆಟ್ರಿಕ್ ಟನ್ ಕಲಬುರಗಿ ತೊಗರಿಬೇಳೆಯ ರಫ್ತು ಸರಕನ್ನು ಮಾಲ್ಡೀವ್ಸ್ಗೆ ಕಳುಹಿಸಿರುವ ಬಗ್ಗೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ ಗಮನ ಸೆಳೆದಿದ್ದನ್ನು ಸ್ಮರಿಸಬಹುದು. ಜಿಐ ಮಾನ್ಯತೆ ಪಡೆದ ಕಲಬುರಗಿ ತೊಗರಿಬೇಳೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ರಫ್ತು ಮಹತ್ವದ ಹೆಜ್ಜೆಯಾಗಿತ್ತು. ಭಾರತದ ಜಿಐ ಮಾನ್ಯತೆ ಪಡೆದ ಕೃಷಿ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ವಿಸ್ತರಿಸುವುದರ ಜತೆಗೆ, ರೈತ ಉತ್ಪಾದಕ ಸಂಸ್ಥೆಗಳ ನೇತೃತ್ವದ ಬ್ರ್ಯಾಂಡ್ಗಳ ಕೃಷಿ ಉತ್ಪನ್ನ ರಫ್ತಿನಲ್ಲಿನ ಪಾಲ್ಗೊಳ್ಳುವಿಕೆಯನ್ನು ಬಲಪಡಿಸುವ ಉದ್ದೇಶವೂ ಇದಾಗಿತ್ತು.ಸದ್ಯ ಮಾರುಕಟ್ಟೆಯಲ್ಲಿ ತೊಗರಿಬೇಳೆಯ ಬೆಲೆ ಕೆಜಿಗೆ 60 ರು.ಇದ್ದು, ರಫ್ತು ಆಧಾರಿತ ಮಾರಾಟ ವ್ಯವಸ್ಥೆಯ ಮೂಲಕ ರೈತರಿಗೆ ಕೆಜಿಗೆ 82 ರು. ದೊರೆತಿದೆ. ಇದರಿಂದ ರೈತರಿಗೆ ಶೇ.30ಕ್ಕೂ ಹೆಚ್ಚು ಲಾಭ ದೊರೆತಿದೆ ಎಂದು ಎಪಿಇಡಿಎ ತಿಳಿಸಿದೆ. ಈ ಉಪಕ್ರಮದ ಮೂಲಕ ರೈತ ಉತ್ಪಾದಕ ಸಂಸ್ಥೆಗಳು ರಫ್ತು ಆಧಾರಿತ ಮೌಲ್ಯ ಸರಪಳಿಯಲ್ಲಿ ನೇರವಾಗಿ ಪಾಲ್ಗೊಳ್ಳಲು ಅವಕಾಶ ದೊರಕಿರುವುದರ ಜತೆಗೆ ಉತ್ಪಾದಕರನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯೊಂದಿಗೆ ಸಂಪರ್ಕಿಸಲು ಸಹಕಾರಿಯಾಗಲಿದೆ. ಸಂಘಟಿತ ರಫ್ತು ವ್ಯವಸ್ಥೆಗಳ ಮೂಲಕ ರೈತರಿಗೆ ಮಾರುಕಟ್ಟೆ ಪ್ರವೇಶ ಮತ್ತು ಉತ್ಪನ್ನದ ಮೌಲ್ಯಕ್ಕೆ ತಕ್ಕ ಪ್ರತಿಫಲ ದೊರಕಿಸುವ ಸಾಧ್ಯತೆಯನ್ನು ಈ ಕ್ರಮ ತೋರಿಸಿಕೊಟ್ಟಿದೆ ಎಂದು ಎಪಿಇಡಿಎ ಹೇಳಿದ್ದನ್ನು ಸ್ಮರಿಸಬಹುದಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.