ಕಾರ್ಯಕ್ರಮಕ್ಕೂ ಮೊದಲಿಗೆ ಘಂಟಾನಾದ, ಸುಪ್ರಭಾತ, ಗೋಪೂಜೆಯನ್ನು ಶ್ರೀಯೋಗಿನಾರೇಯಣ ಮಠದಲ್ಲಿ ನೆರವೇರಿಸಲಾಯಿತು. ನಂತರ ಗವಿ ಯಾಗ ಶಾಲೆಯಲ್ಲಿರುವ ಶ್ರೀಗಣಪತಿ, ಮಹಾಲಕ್ಷ್ಮೀ, ಯೋಗಾನರಸಿಂಹಸ್ವಾಮಿ ಹಾಗೂ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರ ವಿಗ್ರಹಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರೀರಾಮಕೋಟಿ ನಡೆಯುವ ಸ್ಥಳದಲ್ಲಿ ವಿಶೇಷ ವೇದಿಕೆಯನ್ನು ಹಾಕಲಾಗಿತ್ತು. ಆ ವೇದಿಕೆಯಲ್ಲಿ ಶ್ರೀಸೀತಾರಾಮರ ವಿಗ್ರಹಗಳನ್ನು, ಕೈವಾರ ತಾತಯ್ಯನವರ ಭಾವಚಿತ್ರಗಳನ್ನು ಹಾಗೂ ಮಧ್ಯದಲ್ಲಿ ದೀಪಸ್ತಂಭವನ್ನು ಇಡಲಾಗಿತ್ತು. ಧರ್ಮಾಧಿಕಾರಿ ದಂಪತಿ ದೀಪವನ್ನು ಬೆಳಗುವುದರ ಮೂಲಕ ರಾಮಕೋಟಿ ಜಪಯಜ್ಞಕ್ಕೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಮಾನವ ಜನ್ಮಕ್ಕೆ ಒಂದು ನಿರ್ದಿಷ್ಟ ಗುರಿಯಿದೆ. ಆ ಗುರಿಯ ಕಡೆಗೆ ಸಾಧನೆ ಇರಬೇಕು ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಅಭಿಪ್ರಾಯಪಟ್ಟರು.

ತಾಲೂಕಿನ ಶ್ರೀಕ್ಷೇತ್ರ ಕೈವಾರದ ಗವಿ ಬಳಿಯ ಪ್ರಕೃತಿ ಮಡಿಲಲ್ಲಿ ನೆಲೆಸಿರುವ ಯೋಗಾನರಸಿಂಹಸ್ವಾಮಿ ವೈಕುಂಠ ಯಾಗಶಾಲೆಯಲ್ಲಿ ಕೈವಾರ ತಾತಯ್ಯನವರ 300ನೇ ಜಯಂತಿಯ ಅಂಗವಾಗಿ ಆಯೋಜಿಸಲಾಗಿದ್ದ 14ನೇ ತಿಂಗಳ ಶ್ರೀರಾಮಭವತಾರಕ ಮಂತ್ರದ ಶ್ರೀರಾಮಕೋಟಿ ಜಪಯಜ್ಞವನ್ನು ಉದ್ಘಾಟಿಸಿ ಮಾತನಾಡಿ, ದೇಹಕ್ಕೆ ಆಹಾರ, ನೀರು ಹೇಗೆ ಮುಖ್ಯವೋ, ಹಾಗೆಯೇ ಮನಸ್ಸಿಗೆ ಭಕ್ತಿ ಬಹಳ ಮುಖ್ಯವಾದುದು. ಭಕ್ತಿತತ್ವದಲ್ಲಿ ಪರಮಾತ್ಮನಲ್ಲಿ ಸಮರ್ಪಣಾ ಭಾವವಿರಬೇಕು. ಭಕ್ತಿಯ ಮೂಲಕ ಜ್ಞಾನ ವೃದ್ಧಿಯಾಗುತ್ತದೆ. ಇಹ- ಪರ ಎರಡಕ್ಕೂ ಭಕ್ತಿ ಸೇತುವೆಯಾಗಿದೆ. ಭಕ್ತಿಯನ್ನು ಗುರುಗಳ ತತ್ವ ಚಿಂತನೆಯ ಮೂಲಕ ರೂಢಿಸಿಕೊಳ್ಳಬೇಕು. ಸಂತರು ಬದುಕಿನ ಸತ್ಯವನ್ನು ಕಂಡುಕೊಂಡವರು ಎಂದರು.

ಕಾರ್ಯಕ್ರಮಕ್ಕೂ ಮೊದಲಿಗೆ ಘಂಟಾನಾದ, ಸುಪ್ರಭಾತ, ಗೋಪೂಜೆಯನ್ನು ಶ್ರೀಯೋಗಿನಾರೇಯಣ ಮಠದಲ್ಲಿ ನೆರವೇರಿಸಲಾಯಿತು. ನಂತರ ಗವಿ ಯಾಗ ಶಾಲೆಯಲ್ಲಿರುವ ಶ್ರೀಗಣಪತಿ, ಮಹಾಲಕ್ಷ್ಮೀ, ಯೋಗಾನರಸಿಂಹಸ್ವಾಮಿ ಹಾಗೂ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರ ವಿಗ್ರಹಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರೀರಾಮಕೋಟಿ ನಡೆಯುವ ಸ್ಥಳದಲ್ಲಿ ವಿಶೇಷ ವೇದಿಕೆಯನ್ನು ಹಾಕಲಾಗಿತ್ತು. ಆ ವೇದಿಕೆಯಲ್ಲಿ ಶ್ರೀಸೀತಾರಾಮರ ವಿಗ್ರಹಗಳನ್ನು, ಕೈವಾರ ತಾತಯ್ಯನವರ ಭಾವಚಿತ್ರಗಳನ್ನು ಹಾಗೂ ಮಧ್ಯದಲ್ಲಿ ದೀಪಸ್ತಂಭವನ್ನು ಇಡಲಾಗಿತ್ತು. ಧರ್ಮಾಧಿಕಾರಿ ದಂಪತಿ ದೀಪವನ್ನು ಬೆಳಗುವುದರ ಮೂಲಕ ರಾಮಕೋಟಿ ಜಪಯಜ್ಞಕ್ಕೆ ಚಾಲನೆ ನೀಡಿದರು.

ರಾಮಕೋಟಿ ಜಪಯಜ್ಞವನ್ನು ಅಖಂಡ 24 ಗಂಟೆಗಳ ಕಾಲ ನಿರಂತರವಾಗಿ ಮಾಡಲಾಯಿತು. ಶ್ರೀಯೋಗಾನರಸಿಂಹಸ್ವಾಮಿ ತಂಡ, ಶ್ರೀಅಮರನಾರೇಯಣಸ್ವಾಮಿ ತಂಡ, ಶ್ರೀಮಹಾಲಕ್ಷ್ಮೀ ತಂಡಗಳೆಂದು ಮೂರು ತಂಡಗಳನ್ನು ಮಾಡಲಾಗಿತ್ತು. ಒಂದು ಗಂಟೆಗೆ ಒಂದು ತಂಡವು ‘ರಾಮ ರಾಮ ಮುಕುಂದ ಮಾಧವ ರಾಮ, ಸದ್ಗುರು ಕೇಶವಾ, ರಾಮ ದಶರಥ ತನಯ ದೇವಾ ರಾಮಶ್ರೀ ನಾರೇಯಣ’ ಎಂಬ ಶ್ರೀರಾಮಭವತಾರಕ ಮಂತ್ರವನ್ನು ಪಠಿಸುತ್ತಾ, ತಾಳ ಹಾಕುತ್ತಾ, ಶ್ರೀರಾಮರ ವೇದಿಕೆಯ ಸುತ್ತಲೂ ಹೆಜ್ಜೆ ಹಾಕುತ್ತಾ ಭಕ್ತಿಯಿಂದ ಪಠಿಸುತ್ತಿದ್ದರು.

ಭಕ್ತ ನಾರಾಯಣಗೌಡರು ಪ್ರಾಸ್ತಾವಿಕವಾಗಿ ಮಾತನಾಡಿದರು. ಭಜನೆ ಭಕ್ತರಾದ ಬಯ್ಯಾರೆಡ್ಡಿ ಹಾಗೂ ಚಿನ್ನಪ್ಪರೆಡ್ಡಿ ಪ್ರಾರ್ಥಿಸಿದರು. ದೂರ ಪ್ರಾಂತ್ಯಗಳಿಂದ ಬಂದಿದ್ದ ಭಕ್ತರು ದೈವ ನಾಮಸ್ಮರಣೆಯನ್ನು ಮಾಡಿ ಪುನೀತರಾದರು. ಬೆಳಗಿನ ಜಾವ ನಾಮಸ್ಮರಣೆಯನ್ನು ಮಹಾಮಂಗಳಾರತಿಯೊಂದಿಗೆ ಸಮಾಪ್ತಿಗೊಳಿಸಲಾಯಿತು.

ಶ್ರೀಯೋಗಿನಾರೇಯಣ ಮಠದ ಉಪಾಧ್ಯಕ್ಷರಾದ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ್, ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕ ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್, ಸದಸ್ಯ ಕೆ.ನರಸಿಂಹಪ್ಪ ಹಾಗೂ ವಿವಿಧ ಭಾಗಗಳಿಂದ ಬಂದ ಭಕ್ತರು ಭಾಗವಹಿಸಿದ್ದರು.