ನಗರಸಭೆ ಬಸ್ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ವಿಶೇಷ ವೇದಿಕೆ ನಿರ್ಮಿಸಿ ಅಲ್ಲಿ ಬೃಹತ್ ಕೇಕ್ ಕತ್ತರಿಸಿದ ನಂತರ ಅನ್ನ ಸಂತರ್ಪಣೆಯಲ್ಲಿ ಚಿಕನ್ ಬಿರಿಯಾನಿಯನ್ನು ಸಾರ್ವಜನಿಕರಿಗೆ ವಿತರಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಎಸ್.ರಕ್ಷಾ ರಾಮಯ್ಯರವರ ಹುಟ್ಟುಹಬ್ಬವನ್ನು ಭಾನುವಾರ ಜಿಲ್ಲಾ ಕಾಂಗ್ರೆಸ್ ಪಕ್ಷ ಮತ್ತು ಯುವ ಕಾಂಗ್ರೆಸ್ ಹಾಗೂ ರಕ್ಷಾ ರಾಮಯ್ಯರವರ ಅಭಿಮಾನಿಗಳ ವತಿಯಿಂದ ವಿವಿಧ ಸೇವಾ ಕಾರ್ಯಗಳನ್ನು ನಗರದಲ್ಲಿ ಹಮ್ಮಿಕೊಳ್ಳುವ ಮೂಲಕ ವೈಶಿಷ್ಟ್ಯ ಪೂರ್ಣವಾಗಿ ಆಚರಿಸಲಾಯಿತು.

ಬೆಳಗ್ಗೆ ನಗರದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆವರಣದಲ್ಲಿರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಎಂ.ಎಸ್.ರಕ್ಷಾ ರಾಮಯ್ಯರವರ ಹುಟ್ಟುಹಬ್ಬದ ಪ್ರಯುಕ್ತ ದೇವರಿಗೆ ವಿಶೇಷ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಿ, ಅವರ ಮುಂದಿನ ರಾಜಕೀಯ ಜೀವನದ ಏಳಿಗೆಗಾಗಿ ದೇವರಲ್ಲಿ ಪ್ರಾರ್ಥಿಸಿದರು.

ನಂತರ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಹಾಲು, ಬ್ರೆಡ್, ಹಣ್ಣು- ಹಂಪಲು ವಿತರಿಸಿದರು.

ನಗರಸಭೆ ಬಸ್ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ವಿಶೇಷ ವೇದಿಕೆ ನಿರ್ಮಿಸಿ ಅಲ್ಲಿ ಬೃಹತ್ ಕೇಕ್ ಕತ್ತರಿಸಿದ ನಂತರ ಅನ್ನ ಸಂತರ್ಪಣೆಯಲ್ಲಿ ಚಿಕನ್ ಬಿರಿಯಾನಿಯನ್ನು ಸಾರ್ವಜನಿಕರಿಗೆ ವಿತರಿಸಿದರು.

ಸುದ್ದಿಗಾರರೊಂದಿಗೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕುಬೇರ್ ಅಚ್ಚು ಮಾತನಾಡಿ, ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಎಸ್.ರಕ್ಷಾ ರಾಮಯ್ಯರವರು ಸಮಾಜದಲ್ಲಿ ಉತ್ತಮ ಸೇವಾ ಕಾರ್ಯದಲ್ಲಿ ತೊಡಗಿದ್ದು, ಶಿಕ್ಷಣ, ಆರೋಗ್ಯ, ಸಮಾಜ ಸೇವೆ ಮುಂತಾದ ವಿಭಾಗಗಳಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಮುಂದಿನ ಜೀವನದಲ್ಲಿ ದೇವರು ಮತ್ತಷ್ಟು ಸೇವೆ ಮಾಡುವ ಅವಕಾಶ ಕಲ್ಪಿಸಿ ಕೊಡಬೇಕು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರವೂ ಕ್ಷೇತ್ರದಲ್ಲಿ ಅವರ ಸೇವೆ ನಿಲ್ಲಲಿಲ್ಲ. ಕುಗ್ಗುವುದು ಅವರಲ್ಲಿಲ್ಲ, ಬದಲಾಗಿ ಸಮಾಜಕ್ಕೆ ಕೊಡುಗೆ ನೀಡುವುದೇ ಅವರ ಮುಖ್ಯ ಧ್ಯೇಯವಾಗಿದೆ. ಇನ್ನು ಪ್ರತಿ ವರ್ಷ ಅವರ ಹುಟ್ಟುಹಬ್ಬದ ಅಂಗವಾಗಿ ಯುವ ಕಾಂಗ್ರೆಸ್ ವತಿಯಿಂದ ವಿವಿಧ ಸೇವಾ ಕಾರ್ಯ ನಡೆಸುತ್ತಿದ್ದು, ಈ ವರ್ಷವೂ ಮುಂದುವರಿಸಲಾಗಿದೆ ಎಂದರು.

ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್.ಎಂ. ಜಗದೀಶ್, ಎನ್.ವಿ.ಶಂಕರ್, ಕೊಡೆಸ್ ವೆಂಕಟೇಶ್, ಡಿ.ವಿ.ಆರ್.ರಾಜೇಶ್, ಶಾಹಿದ್, ಮುದಾಸಿರ್ ದಾವೂದ್, ಅಲ್ಲು ಅನಿಲ್, ಶ್ರೀಧರ್, ಜೀವನ್ ಸ್ವರೂಪ್, ಆಸೀಫ್, ಮಂಜುನಾಥ್, ನಾಗರಾಜ್, ಸುಮಿತ್ರಮ್ಮ, ನಾರಾಯಣಮ್ಮ, ಮಂಗಳಪ್ರಕಾಶ್, ಶಾಂತಮ್ಮ, ರತ್ನಮ್ಮ, ನಿರ್ಮಲಮ್ಮ, ಲಕ್ಷ್ಮೀದೇವಿ, ರಾಧ, ಹನುಮಕ್ಕ ಸೇರಿ ಕಾಂಗ್ರೆಸ್ ಮುಖಂಡರು, ಮತ್ತಿತರರು ಇದ್ದರು.