ವರ್ಷಾಂತ್ಯಕ್ಕೆ ಕಾಳಿನದಿ ನೀರಾವರಿ ಯೋಜನೆ ಪೂರ್ಣ

KannadaprabhaNewsNetwork |  
Published : Sep 27, 2025, 12:01 AM IST
26ಎಚ್.ಎಲ್.ವೈ-1: ಹಳಿಯಾಳ ತಾಲೂಕ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಿರಿಯ ಶಾಸಕ ಆರ್.ವಿ.ದೇಶಪಾಂಡೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. | Kannada Prabha

ಸಾರಾಂಶ

ಮಹತ್ವಾಕಾಂಕ್ಷೆಯ ಕಾಳಿನದಿ ನೀರಾವರಿ ಯೋಜನೆ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಹಳಿಯಾಳ ಪಟ್ಟಣಕ್ಕೆ ದಿನದ ಇಪ್ಪತ್ತನಾಲ್ಕು ಗಂಟೆ ಕುಡಿಯುವ ನೀರು ಪೂರೈಸುವ ಅಮೃತ 2-0 ಯೋಜನೆಗಳು ವರ್ಷಾಂತ್ಯಕ್ಕೆ ಪೂರ್ಣವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಳಿಯಾಳ: ಮಹತ್ವಾಕಾಂಕ್ಷೆಯ ಕಾಳಿನದಿ ನೀರಾವರಿ ಯೋಜನೆ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಹಳಿಯಾಳ ಪಟ್ಟಣಕ್ಕೆ ದಿನದ ಇಪ್ಪತ್ತನಾಲ್ಕು ಗಂಟೆ ಕುಡಿಯುವ ನೀರು ಪೂರೈಸುವ ಅಮೃತ 2-0 ಯೋಜನೆಗಳ ಕಾರ್ಯಾರಂಭಕ್ಕೆ ಅಂತೂ ಮಹೂರ್ತ ಫಿಕ್ಸ್ ಆಗಿದ್ದು, ಈ ವರ್ಷಾಂತ್ಯದಲ್ಲಿ ಅಥವಾ ನೂತನ ವರ್ಷದ ಆರಂಭಕ್ಕೆ ಯೋಜನೆಗಳು ಕಾಯಾರಂಭಿಸಲಿವೆ ಎಂಬ ಸಿಹಿಸುದ್ದಿಯನ್ನು ಯೋಜನೆಯ ಮೇಲ್ವಿಚಾರಣೆ ನಡೆಸುವ ಅಧಿಕಾರಿಗಳು ನೀಡಿದ್ದಾರೆ.

ಶುಕ್ರವಾರ ತಾಪಂ ಸಭಾಭವನದಲ್ಲಿ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅಧ್ಯಕ್ಷತೆಯಲ್ಲಿ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಕಾಳಿನದಿ ನೀರಾವರಿ ಯೋಜನೆ ಹಾಗೂ ಕುಡಿಯುವ ನೀರಿನ ಯೋಜನೆ ಆರಂಭಗೊಳ್ಳುವ ಸಿಹಿಸುದ್ದಿ ಕೇಳುತ್ತಿದ್ದಂತೆಯೇ ಸಭೆಯಲ್ಲಿದ್ದ ಜನಪ್ರತಿನಿಧಿಗಳು, ಕಾರ್ಯಕರ್ತರು ಮತ್ತು ಅಧಿಕಾರಿಗಳ ಮುಖದಲ್ಲಿ ಮಂದಹಾಸ ಮೂಡಿತು.

2026 ಜನವರಿಗೆ ರೆಡಿ: ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಗತಿಯನ್ನು ಮಂಡಿಸಿದ ಜಿಪಂ ಎಇಇ ಸತೀಶ್ ಆರ್., ₹116 ಕೋಟಿ ವೆಚ್ಚದ ಈ ಯೋಜನೆಯಲ್ಲಿ 113 ಗ್ರಾಮಗಳಿಗೆ ದಾಂಡೇಲಿಯ ಕಾಳಿನದಿಯಿಂದ ಕುಡಿಯುವ ನೀರು ಪೂರೈಸಲಾಗುವುದು. ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ದಸರಾ ಹಬ್ಬವಾದ ಆನಂತರ ಹಂತ ಹಂತವಾಗಿ ಆಯ್ದ ಗ್ರಾಮಗಳಿಗೆ ಪ್ರಾಯೋಗಿಕವಾಗಿ ನೀರು ಪೂರೈಕೆ ಆರಂಭಿಸಿ, ಮುಂದಿನ ಜನವರಿ 2026ಕ್ಕೆ ಯೋಜನೆ ಲೋಕಾರ್ಪಣೆಗೆ ಸಜ್ಜುಗೊಳಿಸಲಾಗುವುದು ಎಂದರು.

ಅಮೃತ-2 ಯೋಜನೆ: ಹಳಿಯಾಳ ಪಟ್ಟಣಕ್ಕೆ ದಾಂಡೇಲಿ ಕಾಳಿನದಿಯಿಂದ ಸದ್ಯ ಪೂರೈಕೆಯಾಗುವ ಕುಡಿಯುವ ನೀರಿನ ಯೋಜನೆಯನ್ನು ಅಭಿವೃದ್ಧಿಪಡಿಸಲು 2-0 ಅಮೃತ ಯೋಜನೆಯಡಿಯಲ್ಲಿ ₹59.31 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿ ತೀವ್ರಗತಿಯಲ್ಲಿ ನಡೆದಿದೆ. ಮುಂದಿನ ಜನವರಿಯಲ್ಲಿ ಹಳಿಯಾಳ ಪಟ್ಟಣಕ್ಕೆ ನೀರು ಪೂರೈಕೆ ಆರಂಭಿಸಲಾಗುವುದು ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಲಾಖೆಯ ಎಇಇ ರಶೀದ ರಿತ್ತಿ ತಿಳಿಸಿದರು.

ನವೆಂಬರ್‌ನಿಂದ ಕಾಳಿ ನೀರಾವರಿ ಯೋಜನೆ: ಕಾಳಿನದಿ ನೀರಾವರಿ ಯೋಜನೆಯ ಪ್ರಗತಿಯನ್ನು ಮಂಡಿಸಿದ ಕೆಎನ್‌ಎನ್‌ಎಲ್‌ ಇಲಾಖೆಯ ಅಧಿಕಾರಿ, ₹ 220 ಕೋಟಿ ವೆಚ್ಚದ ಈ ಯೋಜನೆಯಡಿ 46 ಕೆರೆಗಳನ್ನು, 19 ಬಾಂದಾರುಗಳನ್ನು ತುಂಬಿಸಿ 7 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತದೆ. ಯೋಜನೆಯ ಸಿಂಹಪಾಲು ಕಾಮಗಾರಿ ಮುಕ್ತಾಯಗೊಂಡಿದ್ದು, ಈ ವರ್ಷದ ನವೆಂಬರ್ ತಿಂಗಳಿನಲ್ಲಿ ನೀರಾವರಿ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗುವುದು ಎಂದು ತಿಳಿಸಿದರು.

ಅರಣ್ಯ ಇಲಾಖೆ ಸಹಕರಿಸಲಿ: ಶಾಸಕ ಆರ್.ವಿ. ದೇಶಪಾಂಡೆ ಮಾಡನಾಡಿ, ಅಭಿವೃದ್ಧಿಪರ ಯೋಜನೆಗಳಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಸಹಕರಿಸಬೇಕು, ಒಂದು ಇಂಚು ಅತಿಕ್ರಮಣ ಮಾಡಲು ಬಿಡಬೇಡಿ, ಅದಕ್ಕೆ ನನ್ನ ಪೂರ್ಣ ಬೆಂಬಲವಿದೆ, ನಾನು ಸಹ ಅತಿಕ್ರಮಣದಾರರನ್ನು ರಕ್ಷಿಸಲಾರೆನು. ಅಭಿವೃದ್ಧಿ ಕಾರ್ಯಗಳಿಗೆ ಪರಿಸರದ ಹೆಸರಿನಲ್ಲಿ ಸತಾಯಿಸಿದರೆ ಸುಮ್ಮನಿರಲಾರೆ ಎಂದರು.

ಸ್ಥಿತಿವಂತರು ಲಾಭ ಪಡೆಯಬಾರದು: ತಹಸೀಲ್ದಾರ್‌ ಫಿರೋಜಷಾ ಅವರು ತಾಲೂಕನಲ್ಲಿ 87 ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಆಗಿ ಪರಿವರ್ತಿಸಲಾಗಿದೆ ಎಂದು ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ದೇಶಪಾಂಡೆ, ಬಡವರ ಪರವಾಗಿರುವ ಯೋಜನೆ ಲಾಭವನ್ನು ಸ್ಥಿತಿವಂತರು ಪಡೆಯಬಾರದು ಎಂದು ಮನವಿ ಮಾಡಿದರು. ವಸತಿ ಯೋಜನೆಗಾಗಿ ಇನ್ನೂವರೆಗೂ ಅರ್ಜಿಗಳು ಬರುತ್ತಿವೆ ಎಂದರೆ ಏನರ್ಥ? 70 ವರ್ಷಗಳಿಂದ ಸರ್ಕಾರ ಏನೂ ಮಾಡಿಲ್ಲ ಎಂದಾಯಿತು. ಅಧಿಕಾರಿಗಳು ಸಹ ಫಲಾನುಭವಿಗಳ ಆಯ್ಕೆಯನ್ನು ಸರಿಯಾಗಿ ಮಾಡಬೇಕು ಎಂದರು.

ತಾಲೂಕಿನಲ್ಲಿ ಕಬ್ಬಿನ ಇಳುವರಿ ಪ್ರಮಾಣದಲ್ಲಿ ಕುಸಿತವಾಗಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ದೇಶಪಾಂಡೆ, ಕಬ್ಬಿನ ಬೇಸಾಯದಲ್ಲಿ ಆಧುನಿಕ ಪದ್ಧತಿ ಅಳವಡಿಸಲು ತರಬೇತಿ ನೀಡುವಂತೆ ಸೂಚಿಸಿದರು.

ತಾಪಂ ಆಡಳಿತಾಧಿಕಾರಿ, ಚಿಕ್ಕ ನೀರಾವರಿ ಇಲಾಖೆ ಮುಖ್ಯ ಎಂಜಿನಿಯರ್‌ ನಾಗರಾಜ ಹಾಗೂ ಕೆಡಿಪಿ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

PREV

Recommended Stories

ಹತ್ತು ವರ್ಷವಾದ್ರೂ ನೇಕಾರರ ಮನೆಗಳಿಗಿಲ್ಲ ಮುಕ್ತಿ
ಭೀಮಾನದಿ ನೀರಿನ ಹರಿವು ಮತ್ತೆ ಏರಿಕೆ