ಕನ್ನಡಪ್ರಭ ವಾರ್ತೆ, ತುಮಕೂರು
ಕಳೆದ ಎರಡು-ಮೂರು ದಿನಗಳಿಂದ ಥಂಡಿ, ಚಳಿ ದುಪ್ಪಟವಾಗಿದ್ದು, ಸೂರ್ಯನ ರಶ್ಮಿ ಭೂಮಿಗೆ ತಾಗದಷ್ಟರ ಮಟ್ಟಿಗೆ ನಿನ್ನೆ ಬೆಳಿಗ್ಗೆ 6 ಗಂಟೆಯಿಂದಲೇ ದಟ್ಟ ಮಂಜು ಆವರಿಸಿತ್ತು. ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಕ್ಕಪಕ್ಕದ ಮನೆಗಳು ಕಾಣದಷ್ಟರ ಮಟ್ಟಿಗೆ ಮಂಜು ದಟ್ಟವಾಗಿ ಆವೃತವಾಗಿತ್ತು.
ಇನ್ನು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರಸ್ತೆಗಳಲ್ಲಿ ದಟ್ಟ ಮಂಜು ಆವರಿಸಿದ್ದರಿಂದ ಬೆಳಿಗ್ಗೆ 8.30 ಗಂಟೆಯಾದರೂ ರಸ್ತೆಯಲ್ಲಿ ಎದುರಿಗೆ ಬರುವ ವಾಹನಗಳು ಚಾಲಕರಿಗೆ ಕಾಣದಂತಾಗಿತ್ತು. ಇದರಿಂದಾಗಿ ವಾಹನಗಳ ಸುಗಮವಾಗಿ ಚಲಿಸಲಾಗದೆ ಚಾಲಕರು ಪರದಾಡುವಂತಾಗಿತ್ತು. ಬಸ್, ಲಾರಿ, ಕಾರುಗಳು ಹೆಡ್‌ಲೈಟ್ ಹಾಕಿಕೊಂಡು ಚಲಿಸಿದರೂ ಸಹ ರಸ್ತೆಯಲ್ಲಿ ಬೆಳಕು ಕಾಣದಂತಾಗಿತ್ತು.ಕೆಎಸ್ಸಾರ್ಟಿಸಿ ಬಸ್, ಖಾಸಗಿ ಬಸ್ ಚಾಲಕರನ್ನು ಹೊರತುಪಡಿಸಿದರೆ ಸರಕು ಸಾಗಣೆ, ಲಾರಿ ಚಾಲಕರು ಮೈನಡುಗಿಸುವ ಚಳಿ, ದಟ್ಟ ಮಂಜಿನಿಂದಾಗಿ ತಮ್ಮ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ ಚಹಾ ಅಂಗಡಿಗಳಿಗೆ ತೆರಳಿ ಟೀ ಕುಡಿಯುತ್ತಿದ್ದ ಕಂಡು ಬಂತು.
ಬೆಳಿಗ್ಗೆ 8.50 ರ ನಂತರ ಸೂರ್ಯನ ಕಿರಣಗಳು ಪ್ರಜ್ವಲಿಸಿದಂತೆ ದಟ್ಟವಾಗಿ ಆವರಿಸಿದ್ದ ಮಂಜು ನಿಧಾನವಾಗಿ ಕಡಿಮೆಯಾಯಿತು.