ಚಿಕ್ಕಮಗಳೂರುಕ್ರೈಸ್ತ ಸಮುದಾಯದ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ಮೂಲಕ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ಜಿಲ್ಲಾ ಮಟ್ಟದ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮತ್ತು ಜಾಗೃತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕ್ರೈಸ್ತ ಸಮುದಾಯದ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ಮೂಲಕ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.ನಗರದ ಸ್ಪೂರ್ತಿ ಸದನದಲ್ಲಿ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಡತನದಿಂದ ಹೊರಬರಲು ಶಿಕ್ಷಣವೇ ಪ್ರಮುಖ ಸಾಧನ. ಸರ್ಕಾರದ ಸೌಲಭ್ಯ ಬಳಸಿಕೊಂಡು ಮಕ್ಕ ಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ತಾವು ಮಧ್ಯಮ ವರ್ಗದ ರೈತ ಕುಟುಂಬದಿಂದ ಬಂದಿದ್ದು, ಸರ್ಕಾರಿ ಶಾಲೆಯಲ್ಲಿ ಕಲಿತಿದ್ದೇನೆ. ಶಿಕ್ಷಣದಿಂದ ಶಿಸ್ತು, ಮೌಲ್ಯ ಹಾಗೂ ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಸಾಧ್ಯ ಎಂದರು.ಚಿಕ್ಕಮಗಳೂರಿನ ಹೋಲಿಕ್ರಾಸ್ ಆಸ್ಪತ್ರೆ ಹಾಗೂ ಸ್ಯಾನ್ ಜೋ ಶಾಲೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿವೆ. ಧರ್ಮಭೇದವಿಲ್ಲದೆ ಬಡವರಿಗೆ ನೆರವಾಗುತ್ತಿರುವ ಕ್ರೈಸ್ತ ಮಿಷನರಿಗಳ ಸೇವೆ ಶ್ಲಾಘನೀಯ. ವಿವಿಧ ದೇಶಗಳಿಗೆ ಭೇಟಿ ನೀಡಿದಾಗ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವುದನ್ನು ಗಮನಿಸಿದ್ದೇನೆ ಎಂದರು.ಭಾರತ ವಿವಿಧ ಧರ್ಮ, ಭಾಷೆ ಮತ್ತು ಸಂಸ್ಕೃತಿಗಳನ್ನು ಒಳಗೊಂಡ ಜಾತ್ಯತೀತ ರಾಷ್ಟ್ರ. ಪ್ರತಿಯೊಬ್ಬರೂ ತಮ್ಮ ಧರ್ಮ ವನ್ನು ಗೌರವಿಸುವ ಜತೆಗೆ ಇತರ ಧರ್ಮಗಳನ್ನೂ ಗೌರವಿಸಬೇಕು. ಧರ್ಮಗಳ ನಡುವೆ ದ್ವೇಷ ಬಿತ್ತದೆ ದೇಶದ ಏಕತೆ ಮತ್ತು ಸಾಮರಸ್ಯ ಕಾಪಾಡಬೇಕು ಎಂದು ಹೇಳಿದರು.ಪಂಚ ಗ್ಯಾರಂಟಿ ಯೋಜನೆಗಳು ಜಾತಿ, ಧರ್ಮದ ಭೇದವಿಲ್ಲದೆ ಅರ್ಹರಿಗೆ ತಲುಪುತ್ತಿವೆ. ತಮ್ಮ ಕ್ಷೇತ್ರದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ₹430 ಕೋಟಿ ವಿತರಿಸಲಾಗಿದೆ. ಅನ್ನಭಾಗ್ಯದಿಂದ ಆಹಾರ ಭದ್ರತೆ, ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಾಗೂ ಗೃಹಜ್ಯೋತಿಯಿಂದ ನಿಗದಿತ ಮಿತಿಯೊಳಗೆ ಉಚಿತ ವಿದ್ಯುತ್ ಸೌಲಭ್ಯ ದೊರೆಯುತ್ತಿದೆ ಎಂದರು. ನಿಗಮದ ಮೂಲಕ ಸಾಲ, ಸಹಾಯಧನ, ಚರ್ಚ್ಗಳ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ವಿದೇಶಿ ಶಿಕ್ಷಣಕ್ಕೂ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.ಬಿಷಪ್ ಡಾ. ಬಿ. ಅಂತೋನಿ ಸ್ವಾಮಿ ಮಾತನಾಡಿ ಸಮುದಾಯದ ಬೇಡಿಕೆ ಪರಿಗಣಿಸಿ ಶೀಘ್ರ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಕಳೆದ 3-4 ವರ್ಷಗಳಿಂದ ನಿಗಮ ಸಮುದಾಯದ ಅಭಿವೃದ್ಧಿಗೆ ನೆರವಾಗುತ್ತಿದ್ದು, ಅಧ್ಯಕ್ಷ ಪ್ರೊ. ಎಸ್. ಜಾಫೆಟ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಂತೋನಿ ಮಾರಿಯಾ ಇಮ್ಯಾನುಯೆಲ್ ಅವರ ಕಾರ್ಯ ಶ್ಲಾಘಿಸಿದರು. ಅರ್ಹರಿಗೆ ಸೌಲಭ್ಯ ತಲುಪಿಸುವ ಮೂಲಕ ಜನಸೇವೆ ಇನ್ನಷ್ಟು ಪರಿಣಾಮಕಾರಿಯಾಗಲಿ ಎಂದರು.ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ, ನಿಗಮದ ಅಧ್ಯಕ್ಷ ಪ್ರೊ. ಎಸ್. ಜಾಫೆಟ್, ವ್ಯವಸ್ಥಾಪಕ ನಿರ್ದೇಶಕ ಅಂತೋನಿ ಮಾರಿಯಾ ಇಮ್ಯಾನುಯೆಲ್, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ, ಸಿಡಿಎ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ಡಿಎಪಿಪಿ ಮುಖ್ಯ ಸಭಾಪಾಲಕ ಕೆ.ಕೆ. ವರ್ಗೀಸ್, ಸಂತ ಆಂದ್ರೇಯ ಚರ್ಚ್ನ ಜಾರ್ಜ್ ವಿನೋದ್ ಕುಮಾರ್ ಸೇರಿದಂತೆ ಧರ್ಮಗುರುಗಳು, ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.