ಕನ್ನಡಪ್ರಭ ವಾರ್ತೆ ಯಾದಗಿರಿ
ಭೂಮಿಯ ಮೇಲಿರುವ ಸಕಲ ಜೀವಾತ್ಮರನ್ನು ಕಾಪಾಡುವ ರಾಘವೇಂದ್ರ ಸ್ವಾಮೀಜಿ ಭಕ್ತರ ಪಾಲಿನ ಕಲ್ಪವೃಕ್ಷ ಎಂದು ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮೀಜಿ ಮಠದ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಹೇಳಿದರು.ನಗರದ ಹೊಸಳ್ಳಿ ಹತ್ತಿರದ ಶ್ರೀಯಾಜ್ಞವಲ್ಕ್ಯ ಬಡಾವಣೆಯಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮೂಲ ರಾಮದೇವರ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು. ಯಾದಗಿರಿ ನಗರದ ಗುರುಸಾರ್ವಭೌರ ಮಠದಲ್ಲಿ ಮಂತ್ರಾಲಯದ ಮೃತ್ತಿಕೆಯೊಂದಿಗೆ ಕಟ್ಟಲ್ಪಟ್ಟ ಮೂಲ ರಾಮದೇವರ ಮಹಾ ಪೂಜೆ ಆಗುತ್ತಿರುವುದು ಇಲ್ಲಿನ ಜನತೆಯ ಸೌಭಾಗ್ಯವೇ ಸರಿ. ಕೂಸು ಅತ್ತಾಗ ಹೇಗೆ ತನ್ನ ತಾಯಿ ತನ್ನ ಕಂದನಿಗೆ ಹಾಲುಣಿಸಿ ನಗಿಸುತ್ತಾಳೋ, ಹಾಗೆಯೇ ಭಗವಂತ ತನ್ನ ಸದ್ಭಕ್ತರನ್ನು ಸದಾ ಕಾಯುತ್ತಾರೆ ಎಂದರು.
ಶ್ರೀಗಳು ಪ್ರಪ್ರಥಮ ಬಾರಿಗೆ ಯಾದಗಿರಿ ನಗರಕ್ಕೆ ಆಗಮಿಸಿದ್ದ ಹಿನ್ನೆಲೆ ಅದ್ಧೂರಿ ಶೋಭಾಯಾತ್ರೆ ಏರ್ಪಡಿಸಲಾಗಿತ್ತು. ಮಂಗಳವಾರ ಬೆಳಗ್ಗೆ ಆರಂಭವಾದ ಶೋಭಾಯಾತ್ರೆ ಹೊಸಳ್ಳಿ ಕ್ರಾಸ್ ಸಮೀಪದ ಶ್ರೀ ಕೃಷ್ಣ ಮಂದಿರದಿಂದ ಶ್ರೀಯಾಜ್ಞವಲ್ಕ್ಯ ಬಡಾವಣೆಯಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠದವರೆಗೆ ಸಾಗಿತು. ದಾರಿಯುದ್ದಕ್ಕೂ ವಿಪ್ರ ಬಾಂಧವರಿಂದ ಕುಂಭಮೇಳ, ಭಜನೆ, ಬಾಜಾ-ಭಜಂತ್ರಿಯ ಸದ್ದು ಜೋರಾಗಿತ್ತು.ನಂತರ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸಾಮೂಹಿಕ ಪಾದಪೂಜೆ, ಮುದ್ರಾಧಾರಣೆ, ಫಲಮಂತ್ರಾಕ್ಷತೆ ಹಾಗೂ ಶ್ರೀಗಳ ತುಲಾಭಾರ, ಮೂಲ ರಾಮದೇವರಿಗೆ ಪೂಜೆ ನಡೆಯಿತು. ನಂತರ ತೀರ್ಥ ಪ್ರಸಾದ ಜರುಗಿತು. ಗುರುರಾಜ್ ಸೇವಾ ಟ್ರಸ್ಟ್ ಅಧ್ಯಕ್ಷ ಸುರೇಶ ದೇಶಪಾಂಡೆ ಹಾಗೂ ಸಮಿತಿಯ ಸದಸ್ಯರಾದ ವೆಂಕಟೇಶ ಪುರೋಹಿತ, ಪ್ರಶಾಂತ ದೇಶಮುಖ, ವಿಜಯಕುಮಾರ ತಾತಾಳಗೇರಿ ಹಾಗೂ ನಗರದ ಪ್ರಮುಖರಾದ ಮಹೇಂದ್ರ ಅಳ್ಳಳ್ಳಿ, ಅಂಬಯ್ಯ ಶಾಬಾದಿ ಸೇರಿದಂತೆ ಅನೇಕರಿದ್ದರು.
ಅಯೋಧ್ಯೆ ನಗರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಲಾದ ಜ.22 ಐತಿಹಾಸಿಕ ದಿನವಾಗಿದ್ದು ಇಡೀ ಜಗತ್ತು ಸಂಭ್ರಮಿಸಿದೆ. ದೇಶದಲ್ಲಿ ಶ್ರೀರಾಮನ ಪುನರಾಗಮನವಾಗಿದ್ದು ಭಕ್ತರು ಪುನೀತರಾಗುತ್ತಿದ್ದಾರೆ. ಬರುವ ದಿನಗಳಲ್ಲಿ ಈ ನಾಡು ರಾಮ ರಾಜ್ಯವಾಗಿ ಪರಿವರ್ತನೆಯಾಗಲಿದೆ.ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರು, ಪೀಠಾಧಿಪತಿಗಳು, ಶ್ರೀರಾಘವೇಂದ್ರ ಮಠ, ಮಂತ್ರಾಲಯ.