ಎಂ.ನರಸಿಂಹಮೂರ್ತಿ
ಕೊಳೆಗೇರಿ ನಿವಾಸಿಗಳು, ದಿನಗೂಲಿ ಕಾರ್ಮಿಕರು ಹಾಗೂ ದುರ್ಬಲ ವರ್ಗದವರಿಗೆ ಸುಲಭವಾಗಿ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವ ‘ನಮ್ಮ ಕ್ಲಿನಿಕ್’ನ ಪರಿಕಲ್ಪನೆ ಹಳ್ಳ ಹಿಡಿದಂತಿದೆ.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಸುಮಾರು 12 ನಮ್ಮ ಕ್ಲಿನಿಕ್‌ಗಳಲ್ಲಿ ವೈದ್ಯರು, ಸಿಬ್ಬಂದಿ ವರ್ಗದವರಿಗೆ ಸಂಬಳ ಸರಿಯಾಗಿ ನೀಡುತ್ತಿಲ್ಲ ಹಾಗೂ ಖಾಸಗಿ ಕಟ್ಟಡಗಳಲ್ಲಿರುವ ಕ್ಲಿನಿಕ್‌ಗಳಿಗೆ ಮೂರ್ನಾಲ್ಕು ತಿಂಗಳಿನಿಂದ ಬಾಡಿಗೆ ನೀಡದೆ ಸತಾಯಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.ಸುಲಭವಾಗಿ ವೈದ್ಯಕೀಯ ಸೇವೆ ದೊರಕಿಸಬೇಕು ಎನ್ನುವ ದೃಷ್ಟಿಯಿಂದ ಹಿಂದಿನ ಬಿಜೆಪಿ ಸರ್ಕಾರ ಗಟ್ಟಿಯಾದ ತಳಹದಿಯಿಲ್ಲದೆ ಚುನಾವಣಾ ಸಮಯದಲ್ಲಿ ಆರಂಭಿಸಿದ ‘ನಮ್ಮ ಕ್ಲಿನಿಕ್’ ಯೋಜನೆಯನ್ನು ಚುನಾವಣೆಯ ನಂತರ ಚುಕ್ಕಾಣಿ ಹಿಡಿದ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಲಪಡಿಸುವ ಗೋಜಿಗೆ ಹೋಗಲಿಲ್ಲ. ಹಾಗೆಯೇ ಮುಂದುವರೆಸಿಕೊಂಡು ಹೋಗುವ ಮನಸ್ಸು ಮಾಡಿದಂತಿಲ್ಲ.
ಕಡಿಮೆ ವೇತನ ನಿಗದಿಪಡಿಸಿರುವ ಕಾರಣ ಹಲವೆಡೆ ಸಿಬ್ಬಂದಿ ಕೊರತೆ ಕಾಡುತ್ತಿದೆ. ಮಧುಮೇಹ, ಮೂತ್ರ ಪರೀಕ್ಷೆ, ಡೆಂಘಿ ಮತ್ತು ಮಲೇರಿಯಾ ತಪಾಸಣೆ ಹಾಗೂ ರಕ್ತ ಪರೀಕ್ಷೆ ಸೇರಿ 14 ಉಚಿತ ಡಯಾಗ್ನೋಸ್ಟಿಕ್ ಸೇವೆಗಳ ವರದಿ ವಿಳಂಬದಿಂದಾಗಿ ಚಿಕಿತ್ಸಾ ವಿಧಾನಗಳು ಹಲವು ದಿನಗಳವರೆಗೆ ನಡೆಯುವ ಕಾರಣ ರೋಗಿಗಳು ಪರದಾಡುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಆರೋಗ್ಯ ಸೇವೆಗಳಿಗಾಗಿ ಜನ ಪರದಾಡುವ ಸ್ಥಿತಿಯನ್ನು ಸರ್ಕಾರ ಸೃಷ್ಟಿಸಬಾರದು. ಬಡವರು, ಜನಸಾಮಾನ್ಯರ ಆರೋಗ್ಯದ ವಿಷಯದಲ್ಲಿ ಸರ್ಕಾರ ಉದಾಸೀನದಿಂದ ನಡೆದುಕೊಳ್ಳಬಾರದು. ವೈದ್ಯರು ಹಾಗೂ ಸಿಬ್ಬಂದಿಗೆ ನಿಗದಿಪಡಿಸಿರುವ ಸಂಬಳವನ್ನು ಸರಿಯಾಗಿ ನೀಡಬೇಕು. ಯಾವುದೇ ಸರ್ಕಾರದ ಯೋಜನೆಯಾದರೂ ಜನಸ್ನೇಹಿಯಾಗಿದ್ದರೆ ಉತ್ತೇಜನ ನೀಡಬೇಕು ಎಂದು ಸ್ಥಳೀಯ ನಿವಾಸಿ ನಾಗರಾಜ್ ಸರ್ಕಾರಕ್ಕೆ ಆಗ್ರಹಿಸಿದರು.ನಿಷ್ಕ್ರಿಯ ಬ್ಯಾಂಕ್ ಖಾತೆಗಳನ್ನು ಸಕ್ರಿಯಗೊಳಿಸುವ ಮೂಲಕ ಸಮಸ್ಯೆ ಬಗೆಹರಿಸಲಾಗಿದೆ. ಈ ತಿಂಗಳಿನಿಂದ ಎಲ್ಲಾ ಸಿಬ್ಬಂದಿಯ ಸಂಬಳ ಸರಿಯಾದ ಸಮಯಕ್ಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಖಾಸಗಿ ಕಟ್ಟಡಗಳಲ್ಲಿರುವ ಕ್ಲಿನಿಕ್‌ಗಳಿಗೆ ಉಳಿಕೆ ಸಹಿತ ಬಾಡಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ.
-ಅರುಣ್ ಸಿಂಹ, ಕಾಳೇನ ಅಗ್ರಹಾರದ ನಮ್ಮ ಕ್ಲಿನಿಕ್ ಕಟ್ಟಡ ಮಾಲೀಕ