ಕನ್ನಡಪ್ರಭ ವಾರ್ತೆ ಕಲಬುರಗಿ
ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಸೆ. 17 ರ ಸಂಪುಟ ಸಭೆ ನಮ್ಮ ಬದ್ಧತೆಯ ದ್ಯೋತಕವಾಗಿದೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷರು, ಜೇವರ್ಗಿ ಶಾಸಕರಾದ ಡಾ. ಅಜಯ್ ಧರ್ಮಸಿಂಗ್ ಹೇಳಿದ್ದಾರೆ.ಸೆ.17ರ ಸಂಪುಟ ಸಭೆಯ ಪೂರ್ವಸಿದ್ಧತೆಯ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡು, ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಕಲ್ಯಾಣ ನಾಡಲ್ಲಿರುವ 7 ಜಿಲ್ಲೆಗಳು, 41 ತಾಲೂಕುಗಳ ಸರ್ವತೋಮುಖ ಪ್ರಗತಿಗೆ ಸಿದ್ದರಾಮಯ್ಯ ಸರ್ಕಾರ ಬದ್ಧ, ಅದಕ್ಕಾಗಿಯೇ ಈ ಬಾರಿ ಕೆಕೆಆರ್‌ಡಿಬಿ 5 ಸಾವಿರ ಕೋಟಿ ರು. ಕ್ರಿಯಾ ಯೋಜನೆ ರೂಪಿಸಿ ಪ್ರಗತಿಗೆ ಮುಂದಾಗಿದ್ದೇವೆ ಎಂದರು.
ಕಲಂ 371 ಜೆ ಅನುಷ್ಠಾನಗೊಂಡು ದಶಕ ಕಳೆದ ಸಂಭ್ರಮದಲ್ಲಿ ನಾವಿದ್ದೇವೆ. ದಿ. ಧರಂಸಿಂಗ್, ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ, ಇನ್ನೂ ಅನೇಕ ಮಹನೀಯರ ಶ್ರಮದಿಂದ ಈ ಸಂವಿಧಾನದ ವಿಶೇಷ ಕಲಂ ನಮಗೆ ದೊರಕಿದೆ. ಇದರಿಂದಾಗಿ ವೃತ್ತಿ ಶಿಕ್ಷಣ, ಉದ್ಯೋಗ, ಅಭಿವೃದ್ಧಿಗೆ ಅವಕಾಶವಾಗಿದೆ. ಇಂತಹ ಅವಕಾಶ ಇನ್ನೂ ವಿಸ್ತಾರಗೊಳ್ಳುತ್ತ ಸಾಗಬೇಕಿದೆ. ಅದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.ಸೆ. 17 ವಿಮೋಚನೆ ದಿನ, ಕಲಂ 371 ಜೆ ಅನುಚ್ಚೇದ ಅನುಷ್ಠಾನಗೊಂಡ ದಿನ. ಇವೆರಡರ ಸಂಭ್ರಮ, ಸಂತಸ ಮನೆ ಮಾಡಿದೆ. ಕೆಕೆಆರ್‌ಡಿಬಿ ಈ ಸಂದರ್ಭವನ್ನು ಸಂಭ್ರಮದಿಂದ ಆಚರಿಸಲಿದೆ. ಕಲ್ಯಾಣದ 7 ಜಿಲ್ಲೆಗಳಲ್ಲಿ ಸಂಭ್ರಮ ಮನೆ ಮಾಡುವಂತೆ ಅಗತ್ಯ ಕ್ರಮಗಳನ್ನು, ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಸಂವಿಧಾನದ ಕಲಂ 371 ಜೆ ಜಾರಿಗೆ ಬಂದು ಹತ್ತು ವರ್ಷಗಳು ಆದ ಈ ಸಂದರ್ಭದಲ್ಲಿ ಕಲಬುರಗಿ ಯಲ್ಲಿ ಸೆಪ್ಟೆಂಬರ್ 17 ರಂದು ನಡೆಯಲಿರುವ ದಶಮಾನೋತ್ಸವ ಏರ್ಪಡಿಸಲಾಗಿದೆ ಹಾಗೂ ಹತ್ತು ವರ್ಷಗಳ ನಂತರ ನಡೆಯುತ್ತಿರುವ ಸಚಿವ ಸಂಪುಟ ಸಭೆ ನಡೆಸಲಾಗುತ್ತಿದ್ದು ಕಲ್ಯಾಣ ನಾಡಿನ ಬಗ್ಗೆ ಕಾಂಗ್ರೆಸ್‌ಗೆ ಇರುವ ಕಳಕಳಿಗೆ ಇದು ಕನ್ನಡಿ ಎಂದು ಡಾ. ಅಜಯ್ ಸಿಂಗ್ ಹೇಳಿದರು.