ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಸ್ವಾತಂತ್ರೋತ್ಸವಕ್ಕೆ ಸಿಕ್ಕಷ್ಟೇ ಪ್ರಾಮುಖ್ಯತೆ ಕಲ್ಯಾಣ ಕರ್ನಾಟಕ ಉತ್ಸವವಕ್ಕೆ ಸಿಗಬೇಕು. ಕಲ್ಯಾಣ ಕರ್ನಾಟಕ ಉತ್ಸವವು ಸ್ವಾತಂತ್ರೋತ್ಸವದ ರೀತಿಯಲ್ಲಿಯೇ ವಿಜೃಂಭಣೆಯಿಂದ ಆಚರಣೆ ಆಗಬೇಕು ಎಂದು ಶಾಸಕ ಶರಣು ಸಲಗರ ಹೇಳಿದರು.ತಾಲೂಕು ಆಡಳಿತದಿಂದ ನಗರದ ಥೇರ್ ಮೈದಾನದ ಸಭಾ ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಲ್ಯಾಣ ಕರ್ನಾಟಕ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ಘೋಷಣೆ ಮಾಡಿರುವುದು ಸಂತೋಷ ತಂದಿದೆ ಈ ಭಾಗದ ಅಭಿವೃದ್ಧಿ ಆಗಲಿ, ಬಡವರ, ರೈತರ ಕಲ್ಯಾಣವಾಗಲಿ ಎಂದರು.
ನೂತನ ಅನುಭವ ಮಂಟಪ ನಿರ್ಮಾಣವಾಗುತ್ತಿದೆ. ವಿಶ್ವದ ಜನ ಕಲ್ಯಾಣದತ್ತ ನೋಡಲಿದ್ದಾರೆ. ಅನುಭವ ಮಂಟಪದ ಜತೆಗೆ ಬಸವಕಲ್ಯಾಣ ನಗರದ ಸಮಗ್ರ ಅಭಿವೃದ್ಧಿ ಆಗಬೇಕು ಎಂದರು.ತಾಲೂಕಿನಲ್ಲಿ ವ್ಯಾಪಕ ಮಳೆ ಸುರಿದು ಬೆಳೆ ಹಾನಿಯಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಅಧಿಕಾರಿಗಳು ತಳ ಮಟ್ಟದಲ್ಲಿ ಹೋಗಿ ಕೆಲಸ ಮಾಡುವ ಮೂಲಕ ರೈತರ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಧ್ವಜಾರೋಹಣ ನೆರವೇರಿಸಿದ ಸಹಾಯಕ ಆಯುಕ್ತ ಮುಕುಲ ಜೈನ್ ಮಾತನಾಡಿ, ಕಲ್ಯಾಣ ಕರ್ನಾಟಕ ಉತ್ಸವದ ಮಹತ್ವ ತಿಳಿಸಿ, ಸ್ವಾತತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ದೇಶ ಭಕ್ತರನ್ನು ಮಹಾತ್ಮರನ್ನು ಸ್ಮರಿಸಬೇಕು. ಹಕ್ಕಿನ ಜತೆಗೆ ಪ್ರತಿಯೊಬ್ಬರು ಕರ್ತವ್ಯಗಳನ್ನು ಅರಿತುಕೊಳ್ಳಬೇಕು. ಅದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಹುಲಸೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ದಿಲೀಪಕುಮಾರ ಪತಂಗೆ ವಿಶೇಷ ಉಪನ್ಯಾಸ ನೀಡಿದರು.ನಗರಸಭೆ ಅಧ್ಯಕ್ಷ ಎಂ.ಡಿ.ಸಗೀರೋದ್ದಿನ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ದಿಲೀಪಕುಮಾರ ಉತ್ತಮ, ತಾಪಂ ಅಧಿಕಾರಿ ರಮೇಶ ಸುಲ್ಪಿ, ಬಿಇಒ ಸಿದ್ದವೀರಯ್ಯ ರುದನೂರ, ಸಿಪಿಐ ಅಲಿಸಾಬ, ಎಇಇ ಶಿವರಾಜ ಪಲ್ಲೇರಿ ಉಪಸ್ಥಿತರಿದ್ದರು.
ತಹಸೀಲ್ದಾರ್ ಡಾ.ದತ್ತಾತ್ರೆಯ ಜೆ. ಗಾದಾ ಸ್ವಾಗತಿಸಿದರು. ಶಿವಕುಮಾರ ಜಡಗೆ ನಿರೂಪಿಸಿದರು. ಗಿರಿಧರ ಧನ್ನೂರೆ ವಂದಿಸಿದರು. ಇದಕ್ಕೂ ಮುನ್ನ ನಗರದ ಐತಿಹಾಸಿಕ ಕೋಟೆಯಿಂದ ಮುಖ್ಯ ರಸ್ತೆಯ ಮೂಲಕ ಮೇರವಣಿಗೆ ನಡೆಯಿತು.