6 ತಿಂಗಳಾದರೂ ಶುರುವಾಗದ ಕಲ್ಯಾಣದುರ್ಗ ರಸ್ತೆ ಕಾಮಗಾರಿ

KannadaprabhaNewsNetwork |  
Published : May 06, 2026, 02:15 AM IST
ಬಳ್ಳಾರಿಯಿಂದ ಆಂಧ್ರದ ಕಲ್ಯಾಣದುರ್ಗಕ್ಕೆ ಸಂಪರ್ಕ ಕಲ್ಪಿಸುವ ದಾರಿ ಸಂಪೂರ್ಣ ಹಾಳಾಗಿದ್ದು ಪ್ರಯಾಣಿಕರು ಅನಿವಾರ್ಯವಾಗಿ ಇದೇ ದಾರಿಯಲ್ಲಿ ಓಡಾಡುವಂತಾಗಿದೆ.  | Kannada Prabha

ಸಾರಾಂಶ

ಬೇರೆ ವಿಧಿಯಿಲ್ಲದೇ ಹಲಕುಂದಿ ಇರ್ದೆಹಾಳು, ನೇಮಕಲ್, ಬೆಂಕಿಕೊಟ್ಟಾಲ್ ಮೂಲಕ ಬೊಮ್ಮನಹಾಳು ಕಡೆಗೆ ಸಾಗಬೇಕಾಗಿದೆ.

ಬಳ್ಳಾರಿ: ಬಳ್ಳಾರಿಯಿಂದ ಆಂಧ್ರಪ್ರದೇಶದ ಕಲ್ಯಾಣ ದುರ್ಗಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಬರೋಬ್ಬರಿ ಆರು ತಿಂಗಳು ಕಳೆದಿವೆ. ಆದರೆ, ಈವರೆಗೆ ಕೆಲಸ ಶುರುವಾಗದೇ ಪ್ರಯಾಣಿಕರು ನಿತ್ಯ ಪರದಾಟುವ ಸ್ಥಿತಿ ನಿರ್ಮಾಣವಾಗಿದೆ.

ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಬಳ್ಳಾರಿಯಿಂದ ಬೊಮ್ಮನಹಾಳು, ಕಣೇಕಲ್ ಕ್ರಾಸ್, ಕಲ್ಯಾಣದುರ್ಗ, ಪಾವಗಡ, ಮಡಕಶಿರ, ತುಮಕೂರು ಮಾರ್ಗವಾಗಿ ಬೆಂಗಳೂರು ಕಡೆಗೆ ತೆರಳಬೇಕಾದ ಪ್ರಯಾಣಿಕರು ರಸ್ತೆಯಿಲ್ಲದೇ ಒದ್ದಾಡುವಂತಾಗಿದೆ.

ಬೇರೆ ವಿಧಿಯಿಲ್ಲದೇ ಹಲಕುಂದಿ ಇರ್ದೆಹಾಳು, ನೇಮಕಲ್, ಬೆಂಕಿಕೊಟ್ಟಾಲ್ ಮೂಲಕ ಬೊಮ್ಮನಹಾಳು ಕಡೆಗೆ ಸಾಗಬೇಕಾಗಿದೆ. ಈ ದಾರಿಯಲ್ಲಿ ಸಾಗುವ ಪ್ರಯಾಣಿಕರು ಸುಮಾರು 15 ರಿಂದ 16 ಕಿ.ಮೀ. ಹೆಚ್ಚುವರಿ ಪ್ರಯಾಣ ಮಾಡಬೇಕಾಗಿದೆ. ಬರೀ 6 ಕಿ.ಮೀ. ರಸ್ತೆ ಅಭಿವೃದ್ಧಿ ಕೆಲಸ ಮಾಡಲು ವಿನಾಕಾರಣ ಇಲಾಖೆ ದಿನ ಕಳೆಯುತ್ತಿದ್ದು, ಜನರ ಪರದಾಟ ಮುಂದುವರಿದಿದೆ.

ಸಂಪೂರ್ಣ ಹಾಳಾಗಿದ್ದ ಕಲ್ಯಾಣದುರ್ಗ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ ( ಕೆಎಂಇಆರ್‌ಸಿ) ಅನುದಾನದಡಿ ₹27 ಕೋಟಿ ನಿಗದಿಗೊಳಿಸಿ, 2025 ಅಕ್ಟೋಬರ್‌ನಲ್ಲಿ ಅಧಿಸೂಚನೆ ಹೊರಡಿಸಿ ನವೆಂಬರ್‌ನಲ್ಲಿ ಭೂಮಿಪೂಜೆ ನೆರವೇರಿಸಲಾಯಿತು. ₹27 ಕೋಟಿಯಲ್ಲಿ 6 ಕಿ.ಮೀ. ರಸ್ತೆಯ ಪೈಕಿ 5 ಕಿ.ಮೀ 10 ಮೀಟರ್ ಅಗಲ ರಸ್ತೆ ನಿರ್ಮಾಣ, 1 ಕಿ.ಮೀ ಬಳ್ಳಾರಿ ಹೊರ ವಲಯದ ಅಂದ್ರಾಳು ಪೆಟ್ರೋಲ್ ಬಂಕ್‌ನಿಂದ ಬೈಪಾಸ್ ರಸ್ತೆವರೆಗೆ 20 ಮೀಟರ್ ರಸ್ತೆ ಅಗಲೀಕರಣ ಕೆಲಸವಾಗಬೇಕಿತ್ತು. ಜೊತೆಗೆ ಚರಂಡಿ, ನೀರು ಸಂಪರ್ಕ, ಡಿವೈಡರ್‌ಗಳನ್ನು ನಿರ್ಮಿಸಬೇಕಿತ್ತು. ಇದಕ್ಕೆ 11 ತಿಂಗಳ ಕಾಲ ಸಮಯ ನಿಗದಿಗೊಳಿಸಲಾಗಿತ್ತು. ಆದರೆ, ಈವರೆಗೆ ರಸ್ತೆ ಕಾಮಗಾರಿ ಚಾಲನೆಯೇ ಸಿಕ್ಕಿಲ್ಲ. ಈ ಕುರಿತು ಪ್ರತಿಕ್ರಿಯಿಸುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಈ ಹಿಂದೆ ನಾವು ಕಾಂಕ್ರಿಟ್ ರಸ್ತೆಯನ್ನು ನಿರ್ಮಿಸುವ ಉದ್ದೇಶ ಹೊಂದಿದ್ದೆವು. ಇದಕ್ಕಾಗಿ ಅಗತ್ಯ ಸಿದ್ಧತೆಯನ್ನು ಮಾಡಿಕೊಂಡಿದ್ದೆವು. ಆದರೆ, ಇತ್ತೀಚೆಗೆ ಬಳ್ಳಾರಿಗೆ ಭೇಟಿ ನೀಡಿದ್ದ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಆಮ್ಲನ್ ಆದಿತ್ಯ ಬಿಸ್ವಾಸ್ ಅವರು ಕಾಂಕ್ರಿಟ್ ರಸ್ತೆ ಬದಲಿಗೆ, ಡಾಂಬರ್ ರಸ್ತೆಯನ್ನೇ ನಿರ್ಮಿಸುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ವಿಳಂಬವಾಗಿದೆ. ಶೀಘ್ರದಲ್ಲಿಯೇ ಕೆಲಸ ಶುರುಗೊಳಿಸಲಾಗುವುದು ಎಂದು ತಿಳಿಸಿದರು. ಅಧಿಕಾರಿಗಳ ಕಾಲಹರಣದಿಂದಾಗಿಯೇ ಈ ರಸ್ತೆಯಲ್ಲಿ ನಿತ್ಯ ಓಡಾಡುವ ಪ್ರಯಾಣಿಕರು ಒದ್ದಾಟ ಅನುಭವಿಸುವಂತಾಗಿದ್ದು, ಜಿಲ್ಲಾಡಳಿತ ಗಮನ ಹರಿಸಬೇಕು. ಪ್ರಯಾಣಿಕರಿಗೆ ಸಮಸ್ಯೆಯಾಗದಂತೆ ಕೆಲಸಕ್ಕೆ ವೇಗ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬಳ್ಳಾರಿ-ಕಲ್ಯಾಣದುರ್ಗ ರಸ್ತೆ ಸಂಪೂರ್ಣ ಹಾಳಾಗಿದ್ದು ಪ್ರಯಾಣಿಕರು ನಿತ್ಯ ಪರದಾಡುತ್ತಿದ್ದಾರೆ. ಅನೇಕರು ಗೊತ್ತಿಲ್ಲದೇ ಈ ರಸ್ತೆಗೆ ಬಂದರೆ ನರಕಯಾತನೆ ಅನುಭವಿಸಬೇಕು. ರಣ ಬಿಸಿಲಿನಲ್ಲಿ 6 ಕಿ.ಮೀ. ದಾಟುವ ಹೊತ್ತಿಗೆ ಹೈರಾಣಾಗುತ್ತಾರೆ ಎನ್ನುತ್ತಾರೆ ಎತ್ತಿನಬೂದಿಹಾಳು ನಿವಾಸಿ ರಾಜೇಂದ್ರಕುಮಾರ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಂಚ ರಾಜ್ಯ ಚುನಾವಣೆ ಫಲಿತಾಂಶ ಪಟ್ಟಣದಲ್ಲಿ ಬಿಜೆಪಿ ಸಂಭ್ರಮ
ಉಪಚುನಾವಣೆ ಗೆಲುವು: ಜನರ ವಿಶ್ವಾಸ ಮತ್ತೆ ಸಾಬೀತು