ಭಕ್ತರ ಕಾಮಧೇನು ಲೋಕನಾಥ ಜಾತ್ರೋತ್ಸವ

KannadaprabhaNewsNetwork |  
Published : Feb 27, 2025, 12:32 AM IST
ಲೋಕಾಪುರ | Kannada Prabha

ಸಾರಾಂಶ

ಗ್ರಾಮದ ದಕ್ಷಿಣ ಭಾಗಕ್ಕೆ ಇರುವ ಲೋಕೇಶ್ವರ ದೇವಾಲಯದ ಮಹಾದ್ವಾರದ ಮೇಲಿರುವ ಧ್ಯಾನಮಯ ಶಿವನನ್ನು ನೋಡುವುದೇ ಒಂದು ಭಾಗ್ಯ.

ಶ್ರೀನಿವಾಸ ಬಬಲಾದಿ

ಕನ್ನಡಪ್ರಭ ವಾರ್ತೆ ಲೋಕಾಪುರ

ಶತಮಾನಗಳ ಹಿಂದೆ ಜೈನ ದೊರೆ ರಾಜಾ ಲೋಕಟೆ ತ್ರಿವಿಕ್ರಮನಾಗಿ ಆಳ್ವಿಕೆ ನಡೆಸಿ ತನ್ನ ದಿಗ್ವಿಜಯದ ಸವಿ ನೆನಪಿಗಾಗಿ ಬೆಟ್ಟದಂಚಿನ ಝರಿಯ ಅಡಿಯಲ್ಲಿ ಶಿವಲಿಂಗವೊಂದನ್ನು ಸ್ಥಾಪಿಸಿದ. ನಂತರ ಈ ಶಿವಲಿಂಗಕ್ಕೆ ಲೋಕಟೇಶ್ವರ ಎಂದು ನಾಮಕರಣ ಮಾಡಲಾಯಿತು. ಈಗ ಇದು ಲೋಕನಾಥ, ಲೋಕೇಶ್ವರ ಎಂದು ಸುಪ್ರಸಿದ್ಧವಾಗಿದೆ. ಜೊತೆಗೆ ಈ ಗ್ರಾಮಕ್ಕೆ ಇದ್ದ ಲೋಕಟಾಪುರ ಎಂಬ ಹೆಸರು ಈಗ ಲೋಕಾಪುರ ಎಂದು ಪ್ರಖ್ಯಾತಿ ಪಡೆದು ಉತ್ತರ ಕರ್ನಾಟಕದ ಪ್ರಮುಖ ಧಾರ್ಮಿಕ ಶಕ್ತಿ ಕೇಂದ್ರವಾಗಿದೆ.

ಇದು ಮುಧೋಳ ತಾಲೂಕಿನ ಲೋಕನಾಥನ ಜಾತ್ರೆಯ ಇತಿಹಾಸ. ರಾಜ ಮಹಾರಾಜರ ಗುಡ್ಡವಾಗಿ ಬೆಳೆದು ಕೇವಲ ಗ್ರಾಮಕ್ಕೆ ಸೀಮಿತವಾಗಿದ್ದ ಜಾತ್ರೆ ಇವತ್ತು ಲಕ್ಷಾಂತರ ಭಕ್ತರು ವಿವಿಧ ರಾಜ್ಯ, ಜಿಲ್ಲೆಗಳಿಂದ ಆಗಮಿಸುವ ಹಂತಕ್ಕೆ ತಲುಪಿ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕ್ರಾಂತಿಯ ಲೋಕಾಪುರದ ಲೋಕನಾಥ ಜಾತ್ರೆ ಎಂಬ ಖ್ಯಾತಿ ಹೊಂದಿದೆ.

ಗ್ರಾಮದ ದಕ್ಷಿಣ ಭಾಗಕ್ಕೆ ಇರುವ ಲೋಕೇಶ್ವರ ದೇವಾಲಯದ ಮಹಾದ್ವಾರದ ಮೇಲಿರುವ ಧ್ಯಾನಮಯ ಶಿವನನ್ನು ನೋಡುವುದೇ ಒಂದು ಭಾಗ್ಯ. ಸಂಪೂರ್ಣ ಶಿಲೆಯಿಂದ ಕೂಡಿದ ಗರ್ಭಗುಡಿ, ಸುಂದರ ಗೋಪುರ, ದೇವಸ್ಥಾನದ ಗೋಡೆಯು ಹೊರ ಭಾಗದಲ್ಲಿ ರೇಣುಕಾಚಾರ್ಯ ಶ್ರೀ, ವೀರಭದ್ರೇಶ್ವರ ಸ್ವಾಮಿ, ಶಿವಪಾರ್ವತಿ ನಂದಿ ಆವರಣದಲ್ಲಿ ಬನ್ನಿ ಮಹಾಂಕಾಳಿ, ಅಕ್ಕಮಹಾದೇವಿ, ನಾಗದೇವತೆ, ಅಯ್ಯಪ್ಪಸ್ವಾಮಿ, ಗಣೇಶನ ದರ್ಶನ ದೊರೆಯುತ್ತದೆ.

ಪ್ರಾರಂಭದಲ್ಲಿ ಈ ಲೋಕನಾಥನ ರಥೋತ್ಸವಕ್ಕೆ ಆಗಿನ ಶಾಸಕ ಚನ್ನಬಸಪ್ಪ ಅಂಬಲಿ, ಜಾನಪದ ಸಾಹಿತಿ, ಗಾನಗಾರುಡಿಗ, ದಿ.ಬಾಳಪ್ಪ ಹುಕ್ಕೇರಿ, ಶಾಸಕ ಎಂ.ಪಿ.ಪಾಟೀಲ, ಶಿಕ್ಷಣಾಧಿಕಾರಿ ಪಾಟೀಲರು ಹಾಗೂ ನಾಡಿನಾದ್ಯಂತ ಆಗಮಿಸಿದ್ದ ಹಲವಾರು ಶ್ರೀಗಳ ಸಮ್ಮುಖದಲ್ಲಿ ಚಾಲನೆ ನೀಡಲಾಗಿತ್ತು.

ಲೋಕೇಶ್ವರ ನಿತ್ಯ ಪೂಜೆ:

ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಲೋಕೇಶ್ವರನಿಗೆ ಪೂಜೆ, ಪ್ರತಿ ಸೋಮವಾರ ವಿಶೇಷ ಅಂಬಲಿ, ಅಮವಾಸ್ಯೆಯಂದು ಅನ್ನ ದಾಸೋಹ, ಸಂಜೆ ಪಲ್ಲಕ್ಕಿ ಉತ್ಸವ ಜರಗುತ್ತದೆ. ಪುರವಂತರ ಸೇವೆ, ಶ್ರಾವಣ ತಿಂಗಳಲ್ಲಿ ಪೂರ್ಣ ರುದ್ರಾಭಿಷೇಕ, ಬುತ್ತಿಪೂಜೆ, ಪಲ್ಲಕ್ಕಿ ಉತ್ಸವ, ನಂದಿಕೋಲು, ಪುರವಂತರು, ಸಂಬಾಳದವರು ಕರಡಿಮಜಲು, ವಾದ್ಯಗಳೊಂದಿಗೆ ಮೆರವಣೆಗೆ, ಹರಕೆ ಹೊತ್ತ ಭಕ್ತರು ಬತ್ತಿ, ಎಲೆ, ಅಕಿ ಪೂಜೆ ಸಲ್ಲಿಸುವರು. ಶಿವರಾತ್ರಿ ದಿನ ಜಾಗರಣೆ ಮತ್ತು ಮರುದಿನ ರಥೋತ್ಸವ ಅಮವಾಸ್ಯೆ ಜರುಗಲಿದೆ.

ಜಾತ್ರೆ ನಿಮಿತ್ತ ನಡೆಯುವ ಕಾರ್ಯಕ್ರಮಗಳು:

ಫೆ.೨೭ರಿಂದ ಮಾ.೩ರವರೆಗೆ ಬರುವ ಸಕಲ ಭಕ್ತಾದಿಗಳಿಗೆ ಅನ್ನ ಪ್ರಸಾದ, ಫೆ.೨೮ರಂದು ತೆರೆಬಂಡಿ, ಚಕ್ಕಡಿ ಸ್ಪರ್ಧೆ, ಮಾ.೧ರಂದು ಸುತಬಂಡಿ ಸ್ಪರ್ಧೆ, ಮಾ.೨ರಂದು ನಿಮಿಷದ ಚಕ್ಕಡಿ ಸ್ಪರ್ಧೆ, ಮಾ.೩ರಂದು ರಂಗೋಲಿ ಸ್ಪರ್ಧೆ ನಡೆಯಲಿವೆ.

ಈ ವರ್ಷದ ಶ್ರೀ ಲೋಕೇಶ್ವರ ಜಾತ್ರೆ ದಿನಾಂಕ 27.02.2025 ರಂದು ಸಂಜೆ ಮಹಾರಥೋತ್ಸವ ನೇರವೇರುತ್ತದೆ. ಲೋಕಾಪುರ ದೇಸಗತ್ತಿ ಮನೆತನ, ಜಾತ್ರಾ ಕಮಿಟಿ ಅಧ್ಯಕ್ಷ ಕಿರಣರಾವ ದೇಸಾಯಿ ಹಾಗೂ ಲೋಕಣ್ಣ ಉದಪುಡಿ ನೇತ್ರತ್ವದಲ್ಲಿ ಹಾಗೂ ಲೋಕಾಪುರ ಸುತ್ತಮುತ್ತಲಿನ ಗ್ರಾಮಗಳ ಭಕ್ತರು, ತನುಮನ ಧನ ಅರ್ಪಿಸಿ ಶ್ರೀ ಲೋಕೇಶ್ವರ ಜಾತ್ರೆಯನ್ನು ಪ್ರತಿವರ್ಷ ಬಹು ವಿಜೃಂಭಣೆಯಿಂದ ನಡೆಸಿಕೊಂಡು ಬಂದಿರುವುದು ತಂಬಾ ವಿಶೇಷತೆಯಿಂದ ಕೂಡಿದೆ.

ದಿನಾಂಕ 13-03-2025 ರಂದು ಕಳಸ ಇಳಿಸುವುದರೊಂದಿಗೆ ಜಾತ್ರೆ ಮುಕ್ತಾಯವಾಗುತ್ತದೆ. ಈ ಲೋಕದೊಳಗ ಲೋಕಾಪುರಂತಹ ಊರಿಲ್ಲ ಲೋಕೇಶ್ವರಂತಹ ದೇವರಿಲ್ಲ, ಲೋಕದಾಗಿಲ್ಲದ ಮೂರ ಕತ್ತರಿ ಊರ ಲೋಕಾಪುರ ಐತಿ ಹುಷಾರ ತಮ್ಮ ಲೋಕಾಪುರ ಮತ್ತು ಸುತ್ತಮತ್ತಲಿನ ಜನತೆಯ ಆರಾಧ್ಯ ದೈವ ಶ್ರೀ ಲೋಕೇಶ್ವರ ಜಾತ್ರೆಯನ್ನು ನೋಡಲು ಎರಡು ಕಣ್ಣು ಸಾಲದು. ಶ್ರೀ ಲೋಕೇಶ್ವರನ ಕೃಪಾರ್ಶಿವಾದ ಎಲ್ಲರಿಗೂ ದೊರೆತು ಮಳೆ, ಬೆಳೆ, ಕಾಲಕಾಲಕ್ಕೆ ನೇರವೇರಿ, ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸಲಿ ಎಂದು ಆಶಿಸುವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!