ಕಮಲಹಾಸನ್‌ ಸಣ್ಣತನದ ನಡವಳಿಕೆ: ನಟ ಚೇತನ್ ಕುಮಾರ್ ಅಹಿಂಸಾ

KannadaprabhaNewsNetwork |  
Published : May 30, 2025, 12:12 AM IST
29ಎಚ್‌ವಿಆರ್4- | Kannada Prabha

ಸಾರಾಂಶ

ಕಮಲ ಹಾಸನ್ ಅವರು ಒಳ್ಳೆಯ ಪ್ರತಿಭಾವಂತ ನಟರಾಗಿದ್ದು, ನನಗೆ ಅವರ ಮೇಲೆ ಗೌರವವಿದೆ. ಇವತ್ತಿನ ದಿನ ನಾವೆಲ್ಲ ಹೇಳುವುದು ಸತ್ಯವಾಗಿರಬೇಕು. ಸುಳ್ಳು, ಸತ್ಯ ಎಂದು ಗೊತ್ತಾದ ಮೇಲೆ ಸರಿಪಡಿಸಿಕೊಳ್ಳುವ ವಿನಯ ಇರಬೇಕು. ಆದರೆ ಆ ವಿನಯ ಕಮಲಹಾಸನ್ ಅವರಲ್ಲಿ ಕಾಣುತ್ತಿಲ್ಲ ಎಂದು ನಟ ಚೇತನ್ ಕುಮಾರ್ ಅಹಿಂಸಾ ತಿಳಿಸಿದರು.

ಹಾವೇರಿ: ತಮಿಳಿನಿಂದ ಕನ್ನಡ ಹುಟ್ಟಿದೆ ಎನ್ನುವುದು ಶುದ್ಧ ಸುಳ್ಳು. ಕನ್ನಡ ಮತ್ತು ತಮಿಳು ದ್ರಾವಿಡ ಭಾಷೆಗಳು. ತಮಿಳು ಎನ್ನುವುದು ತಾಯಿ ಅಥವಾ ತಂದೆ ಎನ್ನುವುದನ್ನು ನಾವು ಒಪ್ಪಲ್ಲ. ಅದು ಸತ್ಯ ಎಂದು ಗೊತ್ತಾದರೂ ನಟರಾದ ಕಮಲ ಹಾಸನ್ ಮೊಂಡುತನ ತೋರಿಸಿದ್ದು, ಅವರ ಸಣ್ಣತನದ ನಡವಳಿಕೆ ಎಂದು ನಟ ಚೇತನ್ ಕುಮಾರ್ ಅಹಿಂಸಾ ಟೀಕಿಸಿದರು.ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಮಲ ಹಾಸನ್ ಅವರು ಒಳ್ಳೆಯ ಪ್ರತಿಭಾವಂತ ನಟರಾಗಿದ್ದು, ನನಗೆ ಅವರ ಮೇಲೆ ಗೌರವವಿದೆ. ಇವತ್ತಿನ ದಿನ ನಾವೆಲ್ಲ ಹೇಳುವುದು ಸತ್ಯವಾಗಿರಬೇಕು. ಸುಳ್ಳು, ಸತ್ಯ ಎಂದು ಗೊತ್ತಾದ ಮೇಲೆ ಸರಿಪಡಿಸಿಕೊಳ್ಳುವ ವಿನಯ ಇರಬೇಕು. ಆದರೆ ಆ ವಿನಯ ಕಮಲಹಾಸನ್ ಅವರಲ್ಲಿ ಕಾಣುತ್ತಿಲ್ಲ ಎಂದರು.ಸುಳ್ಳಿನ ವಿಚಾರದಲ್ಲಿ ಅವರು ಮೆರೆಯಲು ನೋಡುತ್ತಿದ್ದಾರೆ. ಅದನ್ನು ಒಪ್ಪಲ್ಲ. ಇದು ಕನ್ನಡ ಮತ್ತು ತಮಿಳಿನ ಪ್ರಶ್ನೆಯಲ್ಲ. ಸುಳ್ಳು ಮತ್ತು ಸತ್ಯದ ಪ್ರಶ್ನೆಯಾಗಿದೆ. ತಮಿಳುನಾಡಿನ ಕೆಲ ರಾಜಕಾರಣಿಗಳ ಮಾತುಗಳನ್ನು ಸಹ ಕೇಳಿದ್ದೇನೆ. ತೋಲ್ ತಿರುಮಾವಲವನ್ ಅವರು ರಾಬರ್ಟ್ ಕಾಲ್ಡ್ವೆಲ್ ವಿಚಾರ ಪ್ರಸ್ತಾಪಿಸಿದ್ದಾರೆ. 1856ರಲ್ಲಿ ಲಿಂಗ್ವಿಷ್ಟಿಕ್ ತಮಿಳು ಕನ್ನಡ ತಾಯಿ ಎನ್ನುವುದು ಹೇಳಿದ್ದಾರೆ ಎಂದು ಪ್ರಸ್ತಾಪಿಸಿದ್ದಾರೆ. ಅದೇ ರಾಬರ್ಟ್ 170 ವರ್ಷದ ಹಿಂದೆ ಬಿಳಿಜನಾಂದವರು ಮತ್ತು ಮೇಲ್ಜಾತಿಯವರೂ ನಮ್ಮ ದ್ರಾವಿಡರಿಗಿಂತ ಶ್ರೇಷ್ಠ ಎಂದಿದ್ದಾರೆ. ಅದನ್ನು ನೀವು ಒಪ್ಪಿಕೊಳ್ಳುವಿರಾ ಎಂದು ಪ್ರಶ್ನಿಸಿದರು. ತೆಲುಗು ಸಾಹಿತ್ಯ ಕನ್ನಡಕ್ಕಿಂತ ಕಡಿಮೆಯಿದೆ ಎನ್ನುವ ಕಾರಣಕ್ಕೆ ಮೂರ್ಖತನ ಮಾತು ಹೇಳಿದರೆ ಅರ್ಥವಿಲ್ಲ. ಈ ವಿಚಾರ ಕರ್ನಾಟಕದ ಜನತೆಗೆ ಭಾವನಾತ್ಮಕವಾಗಿ ನೋವಾಗಿದೆ. ಆದರೂ ನೀವು ಕ್ಷಮೆಯಾಚಿಸಲ್ಲ ಅಂದರೆ ಅದು ಒಳ್ಳೆಯತನವಲ್ಲ. ಕಮಲಹಾಸನ್ ಲಿಂಗ್ವಿಷ್ಟಿಕ್ ಸ್ಟಡೀಸ್ ಓದಿಲ್ಲ, ಅಪ್ಲೇಟ್ ಆಗಿಲ್ಲ. ಭಾಷೆ ವಿಚಾರ ಅವರಿಗೆ ಗೊತ್ತಿಲ್ಲ. ಗೊತ್ತಿಲ್ಲದಿದ್ದರೂ ಕ್ಷಮೆಯಾಚಿಸಲ್ಲ ಅಂದರೆ ಅದು ಅವರ ಸಣ್ಣತನ. ಸಹೋದರ- ಸಹೋದರಿ ಭಾಷೆ ಕನ್ನಡ ಮತ್ತು ತಮಿಳು. ಯಾವುದೇ ಕಾರಣಕ್ಕೂ ತಾಯಿ ಮತ್ತು ಮಕ್ಕಳ ಸಂಬಂಧಕ್ಕೆ ಹೋಲಿಕೆ ಮಾಡಿದ್ದು ತಪ್ಪು ಎಂದು ಚೇತನ್ ಹೇಳಿದರು.ಕಮಲಹಾಸನ್ ಕ್ಷಮೆ ಯಾಚನೆಗೆ ಆಗ್ರಹ

ರಾಣಿಬೆನ್ನೂರು: ಕನ್ನಡ ಭಾಷೆಯ ಕುರಿತು ತಮಿಳು ನಟ ಕಮಲಹಾಸನ್ ನೀಡಿರುವ ಹೇಳಿಕೆ ಖಂಡಿಸಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ಉಪತಹಸೀಲ್ದಾರ್ ಕೆ. ಶಾಮ ಗೊರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಜಾಧವ ಮಾತನಾಡಿ, ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎಂದು ತಮಿಳು ನಟ ಕಮಲಹಾಸನ್ ನೀಡಿರುವ ಹೇಳಿಕೆ ಖಂಡನೀಯ. ಅವರು ಕೂಡಲೇ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದು ಸಮಸ್ತ ಕನ್ನಡಿಗರ ಕ್ಷಮೇ ಕೇಳಬೇಕು. ಇಲ್ಲವಾದಲ್ಲಿ ಜೂ. 6ರಂದು ರಾಜ್ಯದಲ್ಲಿ ತೆರೆಗೆ ಬರಲಿರುವ ಕಮಲಹಾಸನ್ ಅಭಿನಯದ ಥಗ್ ಲೈಫ್ ಚಿತ್ರ ಬಿಡುಗಡೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

ತಾಲೂಕು ಅಧ್ಯಕ್ಷ ಚಂದ್ರಪ್ಪ ಬಣಕಾರ ಮಾತನಾಡಿ, ಕಮಲಹಾಸನ್ ಒಬ್ಬ ನಟನಾಗಿ ಇಂತಹ ಮಾತು ಆಡಬಾರದು. ಇದು ಅವರ ವ್ಯಕ್ತಿತ್ವಕ್ಕೆ ಶೋಭೆಯಲ್ಲ. ಅವರು ಬಹಿರಂಗವಾಗಿ ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲವಾದರೆ ಯಾವುದೇ ಕಾರಣಕ್ಕೂ ಈ ಹೋರಾಟ ನಿಲ್ಲುವುದಿಲ್ಲ ಎಂದರು.

ರಾಜ್ಯ ಸಂಚಾಲಕ ಮಲ್ಲಿಕಾರ್ಜುನ ಸಾವಕ್ಕಳವರ, ಪರಶುರಾಮ ಕುರುವತ್ತಿ ರಿಯಾಜ್ ದೊಡ್ಡಮನಿ, ಮೃತುಂಜಯ ಕರಿಯಜ್ಜಿ, ಗೋಪಿ ಕುಂದಾಪುರ, ಶೋಭಾ ಮುದೇನೂರ, ಮರಡೆಪ್ಪ ಚಳಗೇರಿ, ಅಬ್ದುಲ್ ಎನ್.ಕೆ., ನಿಂಗಪ್ಪ, ಹೊನ್ನಪ್ಪ, ಮಾರುತಿ ಮಳಿಯಮ್ಮನವರ, ದಿವಾಕರ್, ರೇಖಾ ಬನ್ನಿಕೊಪ್ಪ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ