ದೊಡ್ಡಬಳ್ಳಾಪುರ: ಕನ್ನಡ ಸಾಹಿತ್ಯ ಮತ್ತು ಸಂಶೋಧನೆಗೆ ನಾಡೋಜ ಕಮಲಾ ಹಂಪನಾ ಅವರ ಕೊಡುಗೆ ಅನನ್ಯವಾಗಿದೆ. ಸ್ತ್ರೀ ಸಂವೇದನೆಗೆ ಸಂಬಂಧಿಸಿದ ಸಂಶೋಧನೆ, ಜೈನ ಸಾಹಿತ್ಯ ಅವರ ವಿಶೇಷ ಅಧ್ಯಯನ ಕ್ಷೇತ್ರವಾಗಿತ್ತು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ.ಗೋವಿಂದರಾಜು ತಿಳಿಸಿದರು.
ಹಳೆಗನ್ನಡ ಸಾಹಿತ್ಯದ ಸಮಗ್ರ ಅಧ್ಯಯನದಿಂದಾಗಿ ಮಹತ್ವದ ಕನ್ನಡ ಕಾವ್ಯಗಳನ್ನು ಸಂಗ್ರಹಿಸಿಕೊಟ್ಟರು. ಸ್ತ್ರೀವಾದಿ ನೆಲೆಯಲ್ಲಿ ವಿಮರ್ಶೆಯೊಂದಿಗೆ, ಮಹಿಳೆಯರನ್ನು ಕುರಿತ ವೈಚಾರಿಕ ಬರಹಗಳೊಂದಿಗೆ ಕನ್ನಡ ಮಹಿಳಾ ಸಾಹಿತ್ಯವನ್ನು ವಿಸ್ತರಿಸಿದರು. ಕಮಲಾಹಂಪನಾ ಅವರ ಕನ್ನಡ ಸಾಹಿತ್ಯ ಸಂಶೋಧನೆ ಮತ್ತು ಚಿಂತನೆಗಳಿಗೆ ಅವರಿಗೆ ಕಲಿಸಿದ ದೊಡ್ಡ ಗುರುಪರಂಪರೆ ಪ್ರೇರಣೆ ಮತ್ತು ಸ್ಫೂರ್ತಿಯಾಗಿತ್ತು ಎಂದು ಹೇಳಿದರು.
ವಿಶ್ವವಿದ್ಯಾಲಯ ಅಧ್ಯಯನ ಪೀಠಗಳ ಅಧ್ಯಕ್ಷರು ಮತ್ತು ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಕಮಲಾಪ್ರಿಯ ಕಾವ್ಯನಾಮದ ಮೂಲಕ ಹಲವು ಸೃಜನಶೀಲ ಕೃತಿಗಳನ್ನು ಬರೆದ ಕಮಲಾಹಂಪನಾ, ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚನೆ ಮಾಡಿದರು. ಕಥಾಸಂಕಲನಗಳು, ವಚನ ಸಂಕಲನಗಳು, ವಿಮರ್ಶಾ ಕೃತಿಗಳು, ಸಂಶೋಧನಾ ಗ್ರಂಥಗಳು, ಅನುವಾದಗಳು, ನಾಟಕ ರೂಪಕಗಳು, ಕಾದಂಬರಿ ರಚಿಸಿದರು. ಕಮಲಾ ಹಂಪನಾ ಅವರ ಸಾಧನೆಯನ್ನು ಗುರುತಿಸಿ ಹಲವು ಪ್ರಶಸ್ತಿಗಳು ಮತ್ತು ಗೌರವಗಳು ಸಂದಿವೆ. ಮೂಡುಬಿದಿರೆಯಲ್ಲಿ ನಡೆದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಎಂದರು.ಕನ್ನಡ ಜಾಗೃತ ಪರಿಷತ್ತಿನ ಅಧ್ಯಕ್ಷ ಕೆ.ವೆಂಕಟೇಶ್ ಮಾತನಾಡಿ, ಜೈನಧರ್ಮವು ಪ್ರತಿಪಾದಿಸಿದ ಜೀವನ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಜೈನ ಧರ್ಮದಲ್ಲಿ ಸತ್ಯ, ನೀತಿ, ಉತ್ತಮ ನಡವಳಿಕೆಗಳಿಗೆ ಹೆಚ್ಚಿನ ಪ್ರಧಾನ್ಯತೆ ಇದೆ. ಕಮಲಾಹಂಪನಾ ಅವರು ಜೈನ ಧರ್ಮ ಮತ್ತು ಸಾಹಿತ್ಯವನ್ನು ಗಂಭೀರವಾಗಿ ಅಧ್ಯಯನ ಮಾಡಿದವರು. ಕಮಲಾ ಹಂಪನಾ ಅವರ ಕನ್ನಡ ಸಾಹಿತ್ಯದ ಗಂಭೀರವಾದ ಅಧ್ಯಯನ ಮತ್ತು ಸಂಶೋಧನೆಯನ್ನು ಕನ್ನಡಿಗರು ಗೌರವಿಸಬೇಕಾಗಿದೆ ಎಂದರು.
23ಕೆಡಿಬಿಪಿ1-
ದೊಡ್ಡಬಳ್ಳಾಪುರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತಿನ ಸಹಯೋಗದಲ್ಲಿ ನಾಡೋಜ ಡಾ.ಕಮಲಾ ಹಂಪನಾ ನುಡಿನಮನ ಕಾರ್ಯಕ್ರಮ ನಡೆಯಿತು.