ವಿಶೇಷ ವರದಿ
ಸಾಮಾನ್ಯವಾಗಿ ಮಳೆಗಾಲ ಬಂದರೆ ಸಸಿ ನಡೆಲು ಎಲ್ಲರೂ ಮುಂದಾಗುತ್ತಾರೆ. ಮಳೆಗಾಲದಲ್ಲಿ ಸಸಿ ನೆಟ್ಟರೇ ಯಾವುದೇ ನೀರಿನ ನಿರ್ವಹಣೆ ಇಲ್ಲದೇ ಸಸಿಗಳು ಸಹಜವಾಗಿ ಬೆಳವಣಿಗೆಯಾಗಲಿವೆ ಎಂಬುದು ಲೆಕ್ಕಾಚಾರ. ಅಂತೆಯೇ ಇದೀಗ ಮಳೆಗಾಲದ ಹಿನ್ನೆಲೆಯಲ್ಲಿ ಹೊಲಗಳ ಬದುವು ಹಾಗೂ ಖಾಲಿ ಜಾಗಗಳಲ್ಲಿ ತರಹೇವಾರಿ ಜಾತಿಯ ಸಸಿಗಳನ್ನು ನೆಡಲು ಜನರು ಮುಂದಾಗಿದ್ದಾರೆ.
ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರು ಬರಗಾಲದ ಹಿನ್ನೆಲೆಯಲ್ಲಿ ರೈತರು, ಸಾರ್ವಜನಿಕರು ಸಸಿಗಳನ್ನು ನೆಡಲು ಮುಂದಾಗಿರಲಿಲ್ಲ. ನೆಟ್ಟ ಕೆಲ ಸಸಿಗಳು ಸಹ ನೀರಿನ ಕೊರತೆಯಿಂದ ಬೆಳೆಯಲು ಸಾಧ್ಯವಾಗಿರಲಿಲ್ಲ. ಈ ಬಾರಿ ಮೇ ತಿಂಗಳ ಕೊನೆಗೆ ಮಳೆಯಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ರಿಯಾಯ್ತಿ ದರದಲ್ಲಿ ಒದಗಿಸುವ ಸಾಮಾನ್ಯ ಬೇವು, ಹೆಬ್ಬೇವು, ನೇರಳೆ, ಮಹಾಗನಿ, ಸಂಪಿಗೆ, ಮತ್ತಿ, ಹೊನ್ನೆ, ಸೀಸಂ, ಸಾಗವಾನಿ, ಕರಿಬೇವು, ಈಚಲು ಸೇರಿದಂತೆ ವಿವಿಧ ಸಸಿಗಳಿಗೆ ಡಿಮಾಂಡ್ ಬಂದಿದೆ. ಆದರೆ, ಸಾರ್ವಜನಿಕರು ಕೇಳಿದಷ್ಟು ಸಸಿಗಳನ್ನು ನೀಡಲು ಅರಣ್ಯ ಇಲಾಖೆಗೆ ಆಗುತ್ತಿಲ್ಲ. ಧಾರವಾಡದ ಅರಣ್ಯ ಇಲಾಖೆ ನರ್ಸರಿಯಲ್ಲಿ ಸಾರ್ವಜನಿಕರಿಗೆ ರಿಯಾಯ್ತಿ ದರದಲ್ಲಿ ನೀಡುವ ಎಲ್ಲ ಸಸಿಗಳು ಈಗಾಗಲೇ ಮಾರಾಟವಾಗಿದ್ದು, ಸಸಿ ಕೇಳಲು ಬರುವ ಜನರು ಖಾಲಿ ಕೈಯಲ್ಲಿ ಹೋಗುವಂತಾಗಿದೆ.ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ಕೇಂದ್ರಿಯ ನರ್ಸರಿ, ತಾಲೂಕಿನ ಹೊಲ್ತಿಕೋಟಿ ಹಾಗೂ ಹೊನ್ನಾಪುರದ ನರ್ಸರಿಗಳಲ್ಲಿ ಈ ವರ್ಷಕ್ಕಾಗಿ 45,000 ಸಸಿಗಳನ್ನು ಸಾರ್ವಜನಿಕರಿಗೆ ನೀಡಲು ಸಿದ್ಧಪಡಿಸಲಾಗಿತ್ತು. ಜೂನ್ ತಿಂಗಳ ಆರಂಭದಲ್ಲಿಯೇ ಅವುಗಳೆಲ್ಲ ಮಾರಾಟವಾಗಿವೆ. ಪ್ರಸ್ತುತ ಅರಣ್ಯಗಳಲ್ಲಿ ಹಾಗೂ ರಸ್ತೆ ಬದಿ ನೆಡಲು 60 ಸಾವಿರ ಸಸಿಗಳು ನರ್ಸರಿಗಳಲ್ಲಿದ್ದು, ಅವುಗಳನ್ನು ನೆಡಲು ಈಗಾಗಲೇ ಒಯ್ಯಲಾಗುತ್ತಿದೆ. ಸಂಘ-ಸಂಸ್ಥೆಗಳು, ಸರ್ಕಾರಿ ಇಲಾಖೆಗಳ ಮೂಲಕ ಈ ಸಸಿಗಳನ್ನು ವಿತರಣೆ ಮಾಡಿ ನೆಡಲು ಇಲಾಖೆ ಯೋಜಿಸಲಾಗಿದೆ.