ನವವೃಂದಾವನದಲ್ಲಿ ಉತ್ತರಾದಿಮಠದಿಂದ ಪೂರ್ವಾರಾಧನೆ
ಕನ್ನಡಪ್ರಭ ವಾರ್ತೆ ಗಂಗಾವತಿಶ್ರೀ ರಘುವರ್ಯ ತೀರ್ಥರು ಅನೇಕ ಪವಾಡಗಳನ್ನು ಮೆರೆದು ಭಕ್ತರನ್ನು ಉದ್ಧಾರ ಮಾಡಿದ್ದಾರೆ ಎಂದು ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮ ತೀರ್ಥರು ತಿಳಿಸಿದರು.
ತಾಲೂಕಿನ ಆನೆಗೊಂದಿ ಬಳಿಯ ನವವೃಂದಾವನ ನಡುಗಡ್ಡೆಯಲ್ಲಿ ಭಾನುವಾರ ಶ್ರೀ ರಘುವರ್ಯ ತೀರ್ಥರ ಪೂರ್ವಾರಾಧನೆ ಕಾರ್ಯಕ್ರಮ ನೆರವೇರಿಸಿ ಅನುಗ್ರಹ ಸಂದೇಶ ನೀಡಿದರು.ಶ್ರೀಮನ್ಮೂಲ ರಾಮದೇವರ ಪೆಟ್ಟಿಗೆಯ ಸಹಿತ ಸಂಚಾರದಲ್ಲಿದ್ದಾಗ ಇವರನ್ನು ದೋಚಲು ಕಳ್ಳರು ಬೆನ್ನು ಹತ್ತಿದ್ದಾಗ ಶ್ರೀಗಳು ತೋರಿದ ಪವಾಡ ಎಂಥವರನ್ನೂ ಬೆರಗುಗೊಳಿಸುತ್ತದೆ. ಶ್ರೀಗಳು ದೇವರ ಪೆಟ್ಟಿಗೆ ಹೊತ್ತು ತುಂಬಿ ಹರಿಯುತ್ತಿರುವ ಭೀಮಾ ನದಿಯೊಳಗೆ ಪ್ರವೇಶ ಮಾಡಿದರು. ಇವರ ದಾರಿ ಸುಗಮವಾಗಲೆಂದು ಸ್ವತಃ ಭೀಮಾನದಿ ಇಬ್ಭಾಗವಾಗಿ ಶ್ರೀ ರಘುವರ್ಯರಿಗೆ ದಾರಿ ಮಾಡಿಕೊಟ್ಟಿತ್ತು. ಇಂತಹ ಅನೇಕ ಪವಾಡಗಳು ಅವರ ಜೀವಿತಾವಧಿಯಲ್ಲಿ ನಡೆದಿವೆ ಎಂದರು.
ಇದಕ್ಕೂ ಮೊದಲು ಶ್ರೀಮನ್ಮೂಲ ಸೀತಾ ಸಮೇತ ಶ್ರೀ ಮೂಲರಾಮ, ಶ್ರೀ ದಿಗ್ವಿಜಯ ರಾಮ ದೇವರ ಸಂಸ್ಥಾನ ಪೂಜೆ ನೆರವೇರಿಸಿದರು. ಮಹಾನೈವೇದ್ಯ, ಮಹಾ ಮಂಗಳಾರತಿ, ಶ್ರೀ ರಘುವರ್ಯ ತೀರ್ಥರ ಮೂಲವೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ, ಹಸ್ತೋದಕ ಸಮರ್ಪಣೆ, ಮಂಗಳಾರತಿ ನೆರವೇರಿಸಿದರು.ಬೆಳಗ್ಗೆ ದಂಡೋದಕ ಸ್ನಾನ ಪೂರೈಸಿ, ಶಿಷ್ಯರಿಗೆ ಪಾಠ ಬೋಧನೆ ನೆರವೇರಿಸಿ ಭಕ್ತರಿಗೆ ತಪ್ತ ಮುದ್ರಾಧಾರಣೆ ಅನುಗ್ರಹ ಮಾಡಿದ ಶ್ರೀಗಳು ಭಿಕ್ಷಾ ಸ್ವೀಕಾರದ ನಂತರ ಫಲಮಂತ್ರಾಕ್ಷತೆ ಅನುಗ್ರಹಿಸಿದರು. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರಗಳಿಂದ ನೂರಾರು ಭಕ್ತರು ಪಾಲ್ಗೊಂಡಿದ್ದರು.
ಜೂ.24ರಂದು ಮಧ್ಯಾರಾಧನೆ:ಶ್ರೀ ರಘುವರ್ಯ ತೀರ್ಥರ ಮಧ್ಯಾರಾಧನೆ ಜೂ.24ರಂದು ಶ್ರೀ ಸತ್ಯಾತ್ಮ ತೀರ್ಥರ ನೇತೃತ್ವದಲ್ಲಿ ನಡೆಯಲಿದೆ. ಬೆಳಗ್ಗೆ ದಂಡೋದಕ ಸ್ನಾನ, ಸುಧಾ ಪಾಠ, ತಪ್ತ ಮುದ್ರಾ ಧಾರಣೆ, ಸಂಸ್ಥಾನ ಪೂಜೆ, ಶ್ರೀ ರಘುವರ್ಯರ ಮೂಲ ವೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ, ಅಲಂಕಾರ, ಹಸ್ತೋದಕ ಸಮರ್ಪಣೆ, ಮಂಗಳಾರತಿ, ಅನ್ನ ಸಂತರ್ಪಣೆ ಮೊದಲಾದ ಕಾರ್ಯಕ್ರಮ ನಡೆಯಲಿವೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.