ಬೆಳೆ ಹಾನಿ ತಂಡದ ಮುಂದೆ ಕಮಲಾಪುರ ತಾಲೂಕು ರೈತರು ಅಳಲು
ಕನ್ನಡಪ್ರಭ ವಾರ್ತೆ ಕಲಬುರಗಿ/ಕಮಲಾಪುರ
ಕಳೆದ ಆಗಸ್ಟ್, ಸೆಪ್ಟೆಂಬರ್ ನಲ್ಲಿ ಭೀಕರ ಮಳೆಯಿಂದ ಜಿಲ್ಲೆಯಲ್ಲಿ ಬೆಳೆಗಳ ಹಾನಿಗಳ ಅಧ್ಯಯನಕ್ಕೆ ಆಗಮಿಸಿರುವ ಕೇಂದ್ರ ತಂಡವು ಮಂಗಳವಾರ ಜಿಲ್ಲೆಯ ಕಮಲಾಪುರ ತಾಲೂಕಿನ ಕಿಣ್ಣಿ ಸಡಕ್, ಡೊಂಗರಗಾಂವ್, ಭೀಮನಾಳ, ಕಮಲಾಪೂರ ಗ್ರಾಮಗಳಿಗೆ ಭೇಟಿ ನೀಡಿ ನೆರೆಯಿಂದ ಹಾನಿಯಾದ ಬೆಳೆ, ರಸ್ತೆ, ಸೇತುವೆ ಹಾನಿ ವೀಕ್ಷಣೆ ಮಾಡಿತು.ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಹೈದ್ರಾಬಾದಿನ ಎಣ್ಣೆ ಬೀಜ ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ.ಪೊನ್ನುಸ್ವಾಮಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯದ ಅಧೀನ ಕಾರ್ಯದರ್ಶಿ ಜಯಶ್ರೀ ಕಕ್ಕರ್ ಅವರು ಬೆಳೆ ಹಾನಿ, ಮೂಲಸೌಕರ್ಯ ಹಾನಿ ವೀಕ್ಷಿಸಿ ರೈತರ ಅಳಲು ಆಲಿಸಿದರು.
ಡೊಂಗರಗಾಂವ್ ಗ್ರಾಮದ ಸರ್ವೇ ನಂ. 20/3ರಲ್ಲಿ 4.32 ಎಕರೆ ಪ್ರದೇಶದಲ್ಲಿ ತೊಗರಿ ಬೆಳೆದು ಬೆಳೆ ಹಾನಿಗೊಳಗಾಗಿರುವ ರೈತ ಅಭಿಷೇಕ್ ಅವರ ಹಾಳಾದ ತೊಗರಿ ಬೆಳೆ ವೀಕ್ಷಿಸಿದರು. ಎಕರೆ 30 ಸಾವಿರ ಖರ್ಚು ಮಾಡಿ ತೊಗರಿ ಬೆಳೆದಿದ್ದು, ವಿಪರೀತ ಮಳೆಯಿಂದ ಎಲ್ಲವು ಹಾಳಾಗಿದೆ. ಬಿತ್ತಿದ 5-6 ಕೆ.ಜಿ. ಬಾರದ ಸ್ಥಿತಿಯಲ್ಲಿದೆ ಎಂದು ರೈತ ಗೋಳಾಡಿದ.ಡೊಂಗರಗಾಂವ್ ರೈತ ಸಂಜಯ್ ವಡ್ಡನಕೆರಾ, ಸಾಹೇಬರೇ ಈಗಾಗಲೇ ಅತಿವೃಷ್ಠಿಯಿಂದ ಸಂಪೂರ್ಣ ಬೆಳೆ ಹಾನಿಯಾಗಿದ್ದು, ವರ್ಷವಿಡಿ ಬೆವರು ಸುರಿಸಿ ಕಷ್ಟಪಟ್ಟು ದುಡಿದು ಸಾಲ ಸೂಲ ಮಾಡಿ ಲಾಗೋಡಿ ಮಾಡಿ ಕಷ್ಟದಲ್ಲಿದ್ದೇವೆ. ಸರ್ಕಾರ 1ಹೆಕ್ಟರ್ ಗೆ ಐದಾರು ಸಾವಿರ ಪರಿಹಾರ ನೀಡಿದೆ ಅದರಿಂದ ಏನೂ ಆಗೋದಿಲ್ಲ, ಇನ್ಸೂರೆನ್ಸ್ ಮಾಡಿಸಿದ್ದೇವೆ ಅದನ್ನಾದರೂ ಬೇಗನೆ ಬಿಡುಗಡೆ ಮಾಡಿಸ್ರಿ ಎಂದು ಗೋಳಾಡಿದ.
ರೈತ ಪ್ರಶಾಂತ ದೋಶೆಟ್ಟಿ ಮಾತನಾಡಿ ಬೀಜ, ಗೊಬ್ಬರ, ಬಿತ್ತನೆ ಆಳಿನ ಕೂಲಿ, ಕಳೆಕಸ ತೆಗೆಯಲು ಒಟ್ಟಾರೆ ಈ ಬಾರಿ ಎಕರೆಗೆ₹ 30 ಸಾವಿರ ಖರ್ಚಾಗಿದೆ. ಬೆಳೆ ನಷ್ಟದಿಂದ ವರ್ಷದ ಶ್ರಮ ಮತ್ತು ಹಣ ಎರಡೂ ವ್ಯರ್ಥ. ಕಳೆದ 3ವರ್ಷದಿಂದ ಬರ ಪರಿಸ್ಥಿತಿಯಿಂದ ಬೆಳೆ ಹಾನಿಯಾಗುತ್ತಿದೆ ಎಂದು ಗೋಳಾಡಿದ. ಭೀಮನಳ ಗ್ರಾಮಸ್ಥರು ಮಳೆಯಿಂದ ಸಂಪೂರ್ಣ ರಸ್ತೆ ಕೊಚ್ಚಿಕೊಂಡು ಹೋಗಿದ್ದು, ಈ ರಸ್ತೆಯಲ್ಲಿ ನಿತ್ಯ ಓಡಾಡುವ ಬೈಕ್ ಸವಾರರು ಬಿದ್ದು ಗಾಯಗೊಂಡಿರುವ ಸಾಕಷ್ಟು ಉದಾಹರಣೆಗಳಿವೆ. ಕೂಡಲೇ ರಸ್ತೆ ದುರಸ್ತಿ ಮಾಡಿಕೊಡಬೇಕೆಂದು ಆಗ್ರಹಿಸಿದರು.ಬೆಳೆ ಹಾನಿ ವೀಕ್ಷಣೆ: ಕಮಲಾಪೂರ ಗ್ರಾಮದ ಸರ್ವೆ ನಂ. 323ರಲ್ಲಿ ಮಹಾದೇವಪ್ಪ ಬಸವಣಪ್ಪ ಸವರಿಗೆ ಸೇರಿದ 6.19 ಎಕರೆಯಲ್ಲಿ ಬೆಳೆದ ತೊಗರಿ ಬೆಳೆ ಹಾನಿ ಸಹ ತಂಡ ವೀಕ್ಷಿಸಿತು. ರೈತ ಪ್ರಶಾಂತ ಮಾತನಾಡಿ, ಮೂರಕ್ಕಿಂತ ಹೆಚ್ಚಿನ ಎಕರೆ ಮಳೆಗೆ ಬೆಳೆ ಹಾಳಾಗಿದೆ. ಎಕರೆಗೆ 25-30 ಸಾವಿರ ಖರ್ಚು ಮಾಡಿವೆ. ಮಳೆ ಎಲ್ಲವನ್ನು ಕೊಚ್ಚಿಕೊಂಡು ಹೋಗಿದೆ. ನಂತರ ಕುಸಬಿ ಬೆಳೆದಿದ್ದು, ವ್ಯಾಪಕ ಮಳೆಯಿಂದ ಇಳುವರಿ ಕುರಿತು ಅನುಮಾನ ವ್ಯಕ್ತಪಡಿಸಿದರು.ಜಿಪಂ ಸಿಇಒ ಭಂವರ್ ಸಿಂಗ್ ಮೀನಾ, ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಂದಾರ, ತಹಸೀಲ್ದಾರ್ ಮೊಹಮ್ಮದ್ ಮೋಹಸೀನ್, ಕೃಷಿ ಉಪನಿರ್ದೇಶಕಿ ಅನುಸೂಯಾ ಹೂಗಾರ, ಸಹಾಯಕ ಕೃಷಿ ನಿರ್ದೇಶಕ ಡಾ.ಅರುಣಕುಮಾರ ಮೂಲಿಮನಿ ಇದ್ದರು.
.....ಕೋಟ್... ವಾಡಿಕೆಗಿಂತ ಹೆಚ್ಚಿನ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿವೆ. ಇದಲ್ಲದೆ ಶಾಲೆ, ಅರೋಗ್ಯ ಕೇಂದ್ರ, ಅಂಗನವಾಡಿ, ರಸ್ತೆ, ಸೇತುವೆದಂತಹ ಮೂಲಸೌಕರ್ಯ ಸಹ ಹಾನಿಗೊಳಗಾಗಿವೆ. ಈಗಾಗಲೇ ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಪರಿಹಾರ ಒದಗಿಸಿದೆ. ಮುಖ್ಯಮಂತ್ರಿಗಳು ಈ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ರಾಜ್ಯ ಸರ್ಕಾರದಿಂದ ಪರಿಹಾರ ಘೋಷಿಸಿದ್ದು, ಅದರಂತೆ ಪರಿಹಾರ ಸಹ ಪಾವತಿಸಿದೆ. -ಬಿ.ಫೌಜಿಯಾ ತರನ್ನುಮ್, ಜಿಲ್ಲಾಧಿಕಾರಿ. ಕಲಬುರಗಿ---------------
....ಕೋಟ್....ಕಮಲಾಪೂರ ತಾಲೂಕಿನಲ್ಲಿ 7,892 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತಿದ್ದು, ಇದರಲ್ಲಿ ಶೇ.80ರಷ್ಟು ಬೆಳೆ ಹಾನಿಯಾಗಿದೆ. ಮಣ್ಣಿನಲ್ಲಿ ಇನ್ನೂ ತೇವಾಂಶ ಇದ್ದು, ಎರಡನೇ ಬೆಳೆ ಬೆಳೆಯುವಂತಿಲ್ಲ. ತೀರಾ ಕೆಟ್ಟ ಸ್ಥಿತಿಯಲ್ಲಿ ರೈತಾಪಿ ವರ್ಗವಿದೆ.
-ಸಮದ್ ಪಟೇಲ್, ಜಂಟಿ ಕೃಷಿ ನಿರ್ದೇಶಕ, ಕಲಬುರಗಿ--
ಫೋಟೋ- ಕಮಲಾಪುರ 1 ಮತ್ತು ಕಮಲಾಪುರ 2ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಿಣ್ಣಿ ಸಡಕ್, ಡೊಂಗರಗಾಂವ್, ಭೀಮನಾಳ, ಕಮಲಾಪೂರ ಗ್ರಾಮಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ನೆರೆಯಿಂದ ಹಾನಿಯಾದ ಬೆಳೆ, ರಸ್ತೆ, ಸೇತುವೆ ಹಾನಿ ವೀಕ್ಷಿಸಿತು.