ಹುಬ್ಬಳ್ಳಿ: ರಾಜಕಾಲುವೆ ಮೇಲಿದ್ದ ಇಲ್ಲಿನ ಕಮರಿಪೇಟೆ ಠಾಣೆಯನ್ನು ಕೊನೆಗೂ ಸ್ಥಳಾಂತರ ಮಾಡಲಾಗಿದೆ. ಇಲ್ಲಿನ ಭಾರತ್ ಸರ್ಕಲ್ ಬಳಿ ಇರುವ ನೂತನ ಕಟ್ಟಡಕ್ಕೆ ಠಾಣೆಯನ್ನು ಸೋಮವಾರ ಸ್ಥಳಾಂತರ ಮಾಡಿ ಲೋಕಾರ್ಪಣೆ ಮಾಡಲಾಗಿದೆ.
ಸ್ಥಳಾಂತರ ಮಾಡಿದ ಕಟ್ಟಡದಲ್ಲಿ ಪೊಲೀಸ್ ಠಾಣೆಯ ಉದ್ಘಾಟನೆಯನ್ನು ಶಾಸಕ ಪ್ರಸಾದ ಅಬ್ಬಯ್ಯ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಠಾಣೆಯನ್ನು ಸ್ಥಳಾಂತರಿಸುವ ಸಂಭವಿಸಬಹುದಾದ ಮಳೆ ಅವಾಂತರವನ್ನು ನಿಯಂತ್ರಣ ಮಾಡಿದಂತಾಗಿದೆ. ಕಮರಿಪೇಟೆ ಪೊಲೀಸ್‌ಠಾಣೆಯನ್ನು ಸ್ಥಳಾಂತರಿಸಲಾಗಿದೆ. ಇದಕ್ಕೆ ಹೊಂದಿಕೊಂಡೇ ಇರುವ ಪಾಲಿಕೆ ಸ್ವತ್ತುಗಳ ಲೀಸ್ ಅವಧಿಯೂ ಮುಕ್ತಾಯವಾಗಿದ್ದು, ಕೂಡಲೇ ಸ್ವತ್ತುಗಳನ್ನು ಪಾಲಿಕೆ ಸುಪರ್ಧಿಗೆ ಪಡೆದು ಪೊಲೀಸ್‌ಠಾಣೆ ಉನ್ನತಿಕರಣಕ್ಕೆ ಕ್ರಮ ವಹಿಸಲಾಗುವುದು ಎಂದು ಶಾಸಕರು ಹೇಳಿದರು.
ನೂತನ ಠಾಣೆಯಲ್ಲಿ ಪೂಜೆ ಮಾಡುವ ಮೂಲಕ ಸ್ಥಳಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಸೈಬರ್ ಠಾಣೆ ಎಸಿಪಿ ಶಿವರಾಜ್ ಕಟಕಬಾವಿ, ಕಮರಿಪೇಟೆ ಇನ್ಸಪೆಕ್ಟರ್ ಮಹಾಂತೇಶ ಹೂಲಿ, ಪಾಲಿಕೆ ಅಧೀಕ್ಷಕ ಅಭಿಯಂತರ ವಿಜಯ್‌ಕುಮಾರ್, ಘನತಾಜ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಸಂತೋಷ ಯರಂಗಳ್ಳಿ ಸೇರಿದಂತೆ ಅನೇಕರಿದ್ದರು.