ಈ ವರ್ಷ ಅತಿಯಾದ ಮಳೆ ಸಾಧ್ಯತೆ ಹಿನ್ನೆಲೆ ಮುಂಜಾಗ್ರತಾ ಕ್ರಮ ವಹಿಸಿ: ಟಿ.ಡಿ.ರಾಜೇಗೌಡ

KannadaprabhaNewsNetwork |  
Published : May 27, 2025, 02:16 AM IST
ನರಸಿಂಹರಾಜಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅಧ್ಯಕ್ಷತೆಯಲ್ಲಿ ಅತಿವೃಷ್ಠಿ ಬಗ್ಗೆ ಮುಂಜಾಗ್ರತಾ ಸಭೆ ನಡೆಯಿತು.ಸಭೆಯಲ್ಲಿ  ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದ,ತಾ.ಪಂಚಾಯಿತಿ ಇ.ಓ.ನವೀನ್ ಕುಮಾರ್, ತಹಶೀಲ್ದಾರ್ ತನುಜ ಟಿ.ಸವದತ್ತಿ, ಪಿ.ಸಿ.ಎ.ಆರ್.ಡಿ.ಬ್ಯಾಂಕಿನ ಅಧ್ಯಕ್ಷ ಕೆ.ಎಂ.ಸುಂದರೇಶ್ ಇದ್ದರು. | Kannada Prabha

ಸಾರಾಂಶ

ನರಸಿಂಹರಾಜಪುರ, ಈ ವರ್ಷ ಮೇ ತಿಂಗಳಲ್ಲೇ ಹೆಚ್ಚು ಮಳೆ ಬರುತ್ತಿದ್ದು ಹವಾಮಾನ ಇಲಾಖೆ ಪ್ರಕಾರ ಕಳೆದ ಸಾಲಿಗಿಂತ ಈ ವರ್ಷ ಅತಿ ಹೆಚ್ಚು ಮಳೆ ಯಾಗುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಶಾಸಕ ಟಿ.ಡಿ. ರಾಜೇಗೌಡ ಸೂಚನೆ ನೀಡಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪ್ರಕೃತಿ ವಿಕೋಪದ ಬಗ್ಗೆ ಮುಂಜಾಗ್ರತೆ ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಈ ವರ್ಷ ಮೇ ತಿಂಗಳಲ್ಲೇ ಹೆಚ್ಚು ಮಳೆ ಬರುತ್ತಿದ್ದು ಹವಾಮಾನ ಇಲಾಖೆ ಪ್ರಕಾರ ಕಳೆದ ಸಾಲಿಗಿಂತ ಈ ವರ್ಷ ಅತಿ ಹೆಚ್ಚು ಮಳೆ ಯಾಗುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಶಾಸಕ ಟಿ.ಡಿ. ರಾಜೇಗೌಡ ಸೂಚನೆ ನೀಡಿದರು.

ಸೋಮವಾರ ತಾಲೂಕು ಪಂಚಾಯಿತಿ ಸಾಮಾರ್ಥ್ಯ ಸೌಧದಲ್ಲಿ ನಡೆದ ಪ್ರಕೃತಿ ವಿಕೋಪದ ಬಗ್ಗೆ ಮುಂಜಾಗ್ರತೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೇ ತಿಂಗಳಲ್ಲಿ ಇಷ್ಟು ಮಳೆ ಹಿಂದಿನ ಯಾವ ವರ್ಷದಲ್ಲೂ ಬಂದಿರಲಿಲ್ಲ.ಈ ವರ್ಷ ನಿರೀಕ್ಷೆ ಮೀರಿ ಮಳೆ ಸುರಿಯುತ್ತಿದೆ. ನಾನು ಶೃಂಗೇರಿ ಕ್ಷೇತ್ರದ 3 ತಾಲೂಕುಗಳಲ್ಲೂ ಪ್ರತಿ ವರ್ಷ ಪ್ರಕೃತಿ ವಿಕೋಪದ ಬಗ್ಗೆ ಮುಂಜಾಗ್ರತಾ ಸಭೆ ಕರೆದಿದ್ದೇನೆ. ಈಗಾಗಲೇ ಜಿಲ್ಲಾಧಿಕಾರಿ ವೀಡಿಯೋ ಕಾನ್ಫರೆನ್ಸ್ ಮೂಲಕ ತಾಲೂಕಿನ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.

ಜಯಪುರ ಸಮೀಪದಲ್ಲಿ ಆಟೋದ ಮೇಲೆ ಮರ ಬಿದ್ದು ಒಬ್ಬರು ಮೃತಪಟ್ಟಿದ್ದಾರೆ. ಈ ವರ್ಷ ಹಿಂದಿನ ಎಲ್ಲಾ ವರ್ಷಗಳಿಗಿಂತ ಹೆಚ್ಚು ಸಿದ್ಧತೆ ಮಾಡಿಕೊಳ್ಳಬೇಕು. ಮುಖ್ಯವಾಗಿ ಕಂದಾಯ ಇಲಾಖೆ, ಪಪಂ, ಆರೋಗ್ಯ ಇಲಾಖೆ, ಪೊಲೀಸ್, ಮೆಸ್ಕಾಂ,ಅಗ್ನಿ ಶಾಮಕ ದಳ ಜಾಗ್ರತೆ ವಹಿಸಬೇಕು. ನಿಮ್ಮ ಇಲಾಖೆ ದೂರವಾಣಿ ಸಂಖ್ಯೆ ಕಳಿಸಬೇಕು ಎಂದು ಸೂಚಿಸಿದರು.

ಅಗ್ನಿಶಾಮಕ ದಳದವರು ಅಗತ್ಯವಿರುವ ಬೋಟು,ಲೈಫ್‌ ಜಾಕೆಟ್ ಸೇರಿದಂತೆ ಎಲ್ಲಾ ಸಲಕರಣೆಗಳನ್ನು ಸಿದ್ಧತೆ ಮಾಡಿ ಕೊಂಡಿರಬೇಕು. ಪೊಲೀಸ್ ಇಲಾಖೆ ಸಭೆ ಕರೆಯಲು ಡಿವೈ.ಎಸ್.ಪಿ ಗೆ ಸೂಚಿಸಿದ್ದೇನೆ .ರಸ್ತೆಗಳಲ್ಲಿ ಚರಂಡಿ ನೀರು ಸರಿಯಾಗಿ ಹರಿಯುತ್ತಿಲ್ಲ ಎಂಬ ದೂರು ಬಂದಿದೆ. ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ವಿಭಾಗದವರು ಜೆಸಿಬಿ ಬಳಸಿ ಚರಂಡಿ ಕಸ ತೆಗೆದು ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು ಎಂದು ಸೂಚಿಸಿದರು. ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಪಿಡಿ ಇಲ್ಲದ ಸೇತುವೆಗಳಿಗೆ ಕೈಪಿಡಿ ಹಾಕಬೇಕು ಎಂದು ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಗೆ ಸೂಚಿಸಿದರು. ಈ ವರ್ಷ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಜಂಗಲ್ ಹಾಗೂ ಚರಂಡಿ ಕ್ಲೀನ್ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕು ಪಂಚಾಯಿತಿ ಇಒ ನವೀನ್ ಕುಮಾರ್ ಮಾತನಾಡಿ, ಕಳೆದ ವರ್ಷ ಗುರುತಿಸಲಾಗಿದ್ದ ತಾಲೂಕಿನ 22 ಅತಿವೃಷ್ಟಿ ಪ್ರದೇಶದ ಗ್ರಾಮಗಳನ್ನು ಈ ವರ್ಷವೂ ಗುರುತಿಸಲಾಗಿದೆ. ಮುತ್ತಿನಕೊಪ್ಪ ಗ್ರಾಪಂ ನ ಬೈರಾಪುರ, ಕೆ.ಕಣಬೂರು, ಕಡಹಿನಬೈಲು ಗ್ರಾಮ ಪಂಚಾಯಿತಿಯ ವಿಠಲ, ಸೂಸಲವಾನಿ, ಕಡಹಿನಬೈಲು,ರಾವೂರು, ಲಿಂಗಾಪುರ, ಸಾರ್ಯ, ಹೊನ್ನೇಕೊಡಿಗೆ, ಬಾಳೆಹೊನ್ನೂರು,ಶೇಡಗಾರು, ಮಲ್ಲಂದೂರು, ಮೇಗರಮಕ್ಕಿ, ಆಡುವಳ್ಳಿ, ಕರ್ಕೇಶ್ವರ, ಮೇಲ್ಪಾಲ್, ಮಾಗುಂಡಿ, ದಾವಣ, ಸಂಕ್ಸೆಯನ್ನು ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಿದ್ದೇವೆ. ಆಯಾ ವ್ಯಾಪ್ತಿಯಲ್ಲಿ ಸಮುದಾಯ ಭವನ, ಶಾಲೆಗಳನ್ನು ಕಾಯ್ದಿರಿಸಿದ್ದೇವೆ. ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬರನ್ನು ನೋಡಲ್ ಅಧಿಕಾರಿಯನ್ನು ನೇಮಿಸಿದ್ದೇವೆ. 12 ಮುಳುಗು ತಜ್ಞರನ್ನು ಸಂಪರ್ಕಿಸಿದ್ದೇವೆ.12 ಕಲ್ಯಾಣ ಮಂಟಪ, ಸಮುದಾಯ ಭವನವನ್ನು ಕಾದಿರಿಸಿದ್ದೇವೆ. ಹಿಟಾಚಿ, ಜೆಸಿಬಿ ಹೊಂದಿರುವ ಗುತ್ತಿಗೆದಾರರನ್ನು ಸಂಪರ್ಕಿಸಿದ್ದು ಅಗತ್ಯಬಿದ್ದರೆ ನೀಡಬೇಕು ಎಂದು ತಿಳಿಸಿದ್ದೇವೆ ಎಂದು ವಿವರಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದ ಮಾತನಾಡಿ, ಅತಿವೃಷ್ಠಿ ಸಂದರ್ಭದಲ್ಲಿ ಪಪಂ ವ್ಯಾಪ್ತಿಯಲ್ಲಿ ಅನಧಿಕೃತ ಮನೆ ಬಿದ್ದರೆ ಅದಕ್ಕೂ ಪರಿಹಾರ ನೀಡಬೇಕು. ಪಟ್ಟಣದ ವ್ಯಾಪ್ತಿಯಲ್ಲಿ ಮೆಸ್ಕಾಂ ಇಲಾಖೆ ಸರಿಯಾದ ಕ್ರಮದಲ್ಲಿ ಜಂಗಲ್ ಕ್ಲಿಯರ್ ಮಾಡುತ್ತಿಲ್ಲ ಎಂದರು.

ಸಭೆಯಲ್ಲಿ ತಹಸೀಲ್ದಾರ್ ತನುಜಾ .ಟಿ. ಸವದತ್ತಿ, ಪಿಸಿಎಆರ್.ಡಿ ಬ್ಯಾಂಕಿನ ನಿರ್ದೇಶಕ ಕೆ.ಎಂ.ಸುಂದರೇಶ್, ಕೆಡಿಪಿ ಸದಸ್ಯರಾದ ಕೆ.ವಿ.ಸಾಜು, ಮಾಳೂರು ದಿಣ್ಣೆ ರಮೇಶ್, ಸಮೀರ ನಹೀಂ, ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್ ಕುಮಾರ್, ತಾ.ಬಗರ್ ಹುಕಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಎಸ್.ಸುಬ್ರಮಣ್ಯ, ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಪಿಡಿಒ ಗಳು, ಗ್ರಾಮ ಪಂಚಾಯಿತಿ ಸದಸ್ಯರು ಭಾಗವಹಿಸಿದ್ದರು.

--ಕೋಟ್ --

ರಸ್ತೆ ಬದಿ ವಾಲಿದ ಒಣಗಿದ ಮರ, ಶಾಲೆ, ಮನೆಗಳ ಮೇಲೆ ವಾಲಿದ ಮರಗಳನ್ನು ತೆಗೆಯುವಂತೆ ಸಂಬಂಧಪಟ್ಟವರು ಅರಣ್ಯ ಇಲಾಖೆಗೆ ಅರ್ಜಿ ನೀಡಬೇಕು. ಇಲಾಖೆಯವರು ಮೇಲಾಧಿಕಾರಿಗಳ ಸೂಚನೆಗೆ ಕಾಯದೆ, ಕಾನೂನು ಪುಸ್ತಕ ನೋಡುತ್ತಾ ಮರ ತೆಗೆಯದೆ ಇದ್ದರೆ ಯಾವುದಾದರೂ ಅನಾಹುತವಾದರೆ ಅರಣ್ಯ ಇಲಾಖೆ ಅಧಿಕಾರಿಗಳನ್ನೇ ಹೊಣೆ ಮಾಡಿ ಅವರ ಮೇಲೆ ಕೇಸು ದಾಖಲಿಸಲು ಶಿಪಾರಸು ಮಾಡುತ್ತೇನೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

- ಟಿ.ಡಿ.ರಾಜೇಗೌಡ, ಶಾಸಕ

-- ಬಾಕ್ಸ್ --

ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್

ಅತಿವೃಷ್ಠಿ, ಅನಾವೃಷ್ಠಿ, ಕೋವಿಡ್ ಸಭೆಗಳು ಅತಿ ಮಹತ್ವವಾದ ಸಭೆಯಾಗಿದೆ. ಆದರೂ, ಇಂದಿನ ಅತಿವೃಷ್ಠಿ ಮುಂಜಾಗ್ರತಾ ಸಭೆಗೆ ಕೆಲವು ಅಧಿಕಾರಿಗಳು ಗೈರಾಗಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು. ಗೈರು ಹಾಜರಾದ ಅಧಿಕಾರಿಗಳಿಗೆ ತಕ್ಷಣ ನೋಟೀಸ್ ಜಾರಿಗೆ ಮಾಡುವಂತೆ ತಾಲೂಕು ಪಂಚಾಯಿತಿ ಇ.ಓಗೆ ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ