16ರಿಂದ 26ರ ವರೆಗೆ ರಾಜ್ಯಮಟ್ಟದ ತರಬೇತಿ ಶಿಬಿರ

KannadaprabhaNewsNetwork |  
Published : Sep 14, 2026, 02:45 AM IST
ಕಡ್ಡಾಯ | Kannada Prabha

ಸಾರಾಂಶ

ಕರಾವಳಿಯ ಸಾಂಪ್ರದಾಯಿಕ ಜನಪದ ಕ್ರೀಡೆ ಕಂಬಳಕ್ಕೆ ಗುಣಮಟ್ಟದ ಓಟಗಾರರನ್ನು ರೂಪಿಸುವ ಉದ್ದೇಶದಿಂದ ರಾಜ್ಯ ಕಂಬಳ ಅಸೋಸಿಯೇಷನ್ ಹಾಗೂ ರಾಜ್ಯ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಸೆ. 16ರಿಂದ 26ರ ವರೆಗೆ ಮಿಲ್ಯಾರು ಕಂಬಳ ಕ್ರೀಡಾಂಗಣದಲ್ಲಿ 10 ದಿನಗಳ ರಾಜ್ಯಮಟ್ಟದ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.

ಕಾರ್ಕಳ: ಕರಾವಳಿಯ ಸಾಂಪ್ರದಾಯಿಕ ಜನಪದ ಕ್ರೀಡೆ ಕಂಬಳಕ್ಕೆ ಗುಣಮಟ್ಟದ ಓಟಗಾರರನ್ನು ರೂಪಿಸುವ ಉದ್ದೇಶದಿಂದ ರಾಜ್ಯ ಕಂಬಳ ಅಸೋಸಿಯೇಷನ್ ಹಾಗೂ ರಾಜ್ಯ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಸೆ. 16ರಿಂದ 26ರ ವರೆಗೆ ಮಿಲ್ಯಾರು ಕಂಬಳ ಕ್ರೀಡಾಂಗಣದಲ್ಲಿ 10 ದಿನಗಳ ರಾಜ್ಯಮಟ್ಟದ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.

ಈ ಶಿಬಿರಕ್ಕಾಗಿ 18 ರಿಂದ 25 ವರ್ಷ ವಯಸ್ಸಿನ 215ಕ್ಕೂ ಅಧಿಕ ಯುವಕರು ಹೆಸರು ನೋಂದಾಯಿಸಿದ್ದು, ಆಯ್ಕೆಯಾದ 120 ಮಂದಿಯನ್ನು ತಲಾ 60 ಯುವಕರಂತೆ ಎರಡು ಹಂತಗಳಲ್ಲಿ ತರಬೇತಿಗೆ ಒಳಪಡಿಸಲಾಗುತ್ತದೆ. ಪ್ರಾಯೋಜಕರ ನೆರವಿನಿಂದ ಆಯ್ಕೆಯಾದ ಶಿಬಿರಾರ್ಥಿಗಳಿಗೆ ಉಚಿತ ತರಬೇತಿಯ ಜತೆಗೆ ಊಟ, ಉಪಹಾರ ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇವರ್ತೂರು ಆನಂದ, ಜಯಕರ್ ಮಡಿವಾಳ, ಈಡು ಅಶೋಕ್ ಕುಮಾರ್ ಸೇರಿದಂತೆ 25 ವರ್ಷಗಳಿಗೂ ಅಧಿಕ ಅನುಭವವಿರುವ 12 ಜನ ಹಿರಿಯ ಕಂಬಳ ಓಟಗಾರರು ಯುವಕರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಪ್ರತಿಯೊಬ್ಬ ಐದು ಶಿಬಿರಾರ್ಥಿಗಳಿಗೆ ಒಬ್ಬ ಹಿರಿಯ ಓಟಗಾರರನ್ನು ಮಾರ್ಗದರ್ಶಕರಾಗಿ ನೇಮಿಸಲಾಗಿದೆ.ಶಿಬಿರದಲ್ಲಿ ಒಟ್ಟು 20 ಕಂಬಳ ಕೋಣಗಳನ್ನು ತರಬೇತಿಗಾಗಿ ಬಳಸಿಕೊಳ್ಳಲಾಗುತ್ತಿದ್ದು, ಕೋಣಗಳನ್ನು ಸಾಕುವುದು, ತೊಳೆಯುವುದು, ಎಣ್ಣೆ ಹಚ್ಚುವುದು ಹಾಗೂ ದಿನನಿತ್ಯದ ಆರೈಕೆಯ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಇದರೊಂದಿಗೆ ಯೋಗ ಶಿಕ್ಷಣ, ಅಥ್ಲೆಟಿಕ್ಸ್ ಅಭ್ಯಾಸ, ಓಟದ ತಂತ್ರಗಳು ಹಾಗೂ ಕೋಣದ ವೇಗಕ್ಕೆ ತಕ್ಕಂತೆ ಓದುವ ಬಗ್ಗೆ ಪ್ರತ್ಯೇಕ ಅಧಿವೇಶನಗಳನ್ನು ನಡೆಸಲಾಗುತ್ತದೆ. ಶಿಬಿರದಲ್ಲಿ ಪ್ರತಿಯೊಬ್ಬರಿಗೂ ಶಿಸ್ತು ಮತ್ತು ಸಂಯಮ ಕಡ್ಡಾಯವಾಗಿದ್ದು, ನಿಯಮ ಉಲ್ಲಂಘಿಸಿದವರನ್ನು ತಕ್ಷಣವೇ ಅಮಾನತು ಮಾಡಲಾಗುತ್ತದೆ.

ಶಿಬಿರ ಪೂರ್ಣಗೊಳಿಸಿದ ಎಲ್ಲ 120 ಯುವಕರಿಗೆ ರಾಜ್ಯ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಕಂಬಳ ಅಸೋಸಿಯೇಷನ್ ವತಿಯಿಂದ ಅಧಿಕೃತ ಪ್ರಮಾಣಪತ್ರ ನೀಡಲಾಗುತ್ತದೆ. ತರಬೇತಿಯ ಆರಂಭದ ದಿನವಾದ ಸೆ. 16ರಂದು ಉಚಿತ ವೈದ್ಯಕೀಯ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಸಮಾರೋಪ ಸಮಾರಂಭದಲ್ಲಿ ಎಸ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರಕುಮಾರ್ ಅವರ ವತಿಯಿಂದ 70, 80 ಮತ್ತು 90ರ ದಶಕದ 10 ಜನ ಹಿರಿಯ ಕಂಬಳ ಓಟಗಾರರನ್ನು ಸನ್ಮಾನಿಸಲಾಗುವುದು ಎಂದು ರಾಜ್ಯ ಕಂಬಳ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಕಂಗಿನಮನೆ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೀಡಾ ಝೋನ್ ನಿರ್ಮಾಣ: ಶಾಸಕ ಅಶೋಕ್ ರೈ
ಹಬ್ಬಕ್ಕೆ ರೈಲು ಕೊಡದೆ ಮಂಗಳೂರಿಗೆ ಅನ್ಯಾಯ!