ಕನ್ನಡಪ್ರಭ ವಾರ್ತೆ ವಿಜಯಪುರ
ಯುಗಾದಿ ಹಬ್ಬಕ್ಕೂ ಮುನ್ನ ಇಲ್ಲಿಂದ ಮಲ್ಲಯ್ಯನ ಕಂಬಿಗಳ ಸಮೇತ ಶ್ರೀಶೈಲಕ್ಕೆ ತೆರಳಲಾಗಿತ್ತು. ಪಾತಾಳಗಂಗೆಯಲ್ಲಿ ಕಂಬಿಗಳಿಗೆ ಪೂಜೆ ಮಾಡಿಕೊಂಡು ಮರಳಿ ಬಂದ ಹಿನ್ನೆಲೆಯಲ್ಲಿ ಇಬ್ರಾಹಿಂಪುರ ನಿವಾಸಿಗಳು ಹಾಗೂ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಸೇವಾ ಸಮಿತಿಯವರು ಮಲ್ಲಯ್ಯನ ಕಂಬಿಗಳನ್ನು ಗ್ರಾಮದಲ್ಲಿ ಅದ್ಧೂರಿಯಿಂದ ಬರಮಾಡಿಕೊಂಡರು.
ಪುರಪ್ರವೇಶ ಮಾಡಿದ ಮಲ್ಲಯ್ಯನ ಕಂಬಿಗಳನ್ನು ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಇರಿಸಲಾಯಿತು. ನಂತರ ದೇವಸ್ಥಾನದ ಅರ್ಚಕ ಓಂಕಾರ ಮಠಪತಿ ಅವರು ಕಂಬಿ ಮಲ್ಲಯ್ಯನಿಗೆ ಪೂಜೆ ನೆರವೇರಿಸಿದರು. ಸುಮಂಗಲೆಯರು ಭಕ್ತಿಭಾವದಿಂದ ಆರತಿ ಬೆಳಗಿದರು. ಕಂಬಿಮಲ್ಲಯ್ಯ ಪುರಪ್ರವೇಶ ಮಾಡಿದ ಹಿನ್ನೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮಹಾನಗರ ಪಾಲಿಕೆ ಸದಸ್ಯ ಕುಮಾರ ಗಡಗಿ, ಗ್ರಾಮದ ಹಿರಿಯರಾದ ಗಿರಮಲ್ಲಪ್ಪ ನುಚ್ಚಿ, ಸೂರ್ಯಕಾಂತ ಗಡಗಿ, ಶಿವಸಂಗಪ್ಪ ಹಳ್ಳಿ, ಅಪ್ಪುಗೌಡ ಪಾಟೀಲ ಸೇರಿದಂತೆ ಸಹಸ್ರಾರು ಜನ ಭಕ್ತರು ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಆಗಮಿಸಿ ಕಂಬಿ ಮಲ್ಲಯ್ಯನ ದರ್ಶನ ಪಡೆದರು.ಕಂಬಿ ಮಲ್ಲಯ್ಯನ ದರ್ಶನಕ್ಕೆ ಬರುವ ಭಕ್ತರಿಗೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಭಕ್ತರು ಮಲ್ಲಯ್ಯನ ದರ್ಶನ ಪಡೆದು, ರುಚಿ-ರುಚಿಯಾದ ಶಿರಾ, ಮಸಾಲೆ ಅನ್ನ, ಅಂಬಲಿಯ ಸವಿ ಸವಿದರು. ಸಂಜೆ ಮಲ್ಲಯ್ಯನ ಕಂಬಿಗಳ ಭವ್ಯ ಮೆರವಣಿಗೆ ನಡೆಯಿತು. ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ವಾದ್ಯ ಮೇಳದೊಂದಿಗೆ ಹೊರಟ ಮೆರವಣಿಗೆ ಪ್ರಮುಖ ಬೀದಿಯಲ್ಲಿ ಸಂಚರಿಸಿ ಶ್ರೀ ನಂದಬಸವೇಶ್ವರ ದೇವಸ್ಥಾನಕ್ಕೆ ತೆರಳಿತು. ಅಲ್ಲಿ ಪೂಜೆ , ಬಿರುದಾವಳಿ ಮುಗಿಸಿಕೊಂಡು ಮೆರವಣಿಗೆ ಮರಳಿ ಮಲ್ಲಿಕಾರ್ಜುನ ದೇವಸ್ಥಾನ ತಲುಪಿ ಸಂಪನ್ನಗೊಂಡಿತು. ಮೆರವಣಿಗೆ ಮರಳಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಆಗಮಿಸುತ್ತಿದ್ದಂತೆ ದೇವಸ್ಥಾನದ ಮುಂದಿನ ಮುಖ್ಯ ರಸ್ತೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.