ಕಂಪ್ಲಿ: ಪುರಸಭೆಯಲ್ಲಿ ಆಡಳಿತಾಧಿಕಾರಿ ನೇಮಕಾತಿಗೆ ರಾಜ್ಯ ಸರ್ಕಾರ ಕೈಗೊಂಡಿದ್ದ ಕ್ರಮಕ್ಕೆ ಧಾರವಾಡ ಉಚ್ಚ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ಪುರಸಭೆಯ ಚುನಾಯಿತ ಅಧ್ಯಕ್ಷರು ಹಾಗೂ ಸದಸ್ಯರ ಹೋರಾಟಕ್ಕೆ ತಾತ್ಕಾಲಿಕ ಜಯ ದೊರಕಿದೆ. ಈ ತೀರ್ಪಿನಿಂದ ಪುರಸಭೆ ಜನಪ್ರತಿನಿಧಿಗಳಿಗೆ ಎರಡನೇ ಅವಧಿಯ ಉಳಿದ 30 ತಿಂಗಳ ಆಡಳಿತ ಅವಧಿ ಪೂರ್ಣಗೊಳಿಸಲು ಗ್ರೀನ್ ಸಿಗ್ನಲ್ ಸಿಕ್ಕಂತಾಗಿದೆ.
ಪುರಸಭೆ ಅಧ್ಯಕ್ಷ, ಸದಸ್ಯರು 60 ತಿಂಗಳ (5 ವರ್ಷ) ಅಧಿಕಾರಾವಧಿ ಪೂರ್ಣಗೊಳಿಸಲು ಅವಕಾಶ ಕಲ್ಪಿಸಬೇಕೆಂದು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ಕಾನೂನಿನ ಪ್ರಕಾರ ಪುರಸಭೆ ಅವಧಿ ಎರಡು ಹಂತಗಳಲ್ಲಿ ತಲಾ 30 ತಿಂಗಳುಗಳಲ್ಲಿ ವಿಂಗಡಿಸಲ್ಪಟ್ಟಿದೆ. ಮೊದಲ ಅವಧಿ ಪೂರ್ಣಗೊಂಡಿದ್ದರೂ ಎರಡನೇ ಅವಧಿಯ ಆಡಳಿತಾವಕಾಶ ಸಿಕ್ಕಿಲ್ಲ ಎಂಬ ಕಾರಣದಿಂದ ಜನಪ್ರತಿನಿಧಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು.ಆಡಳಿತಾಧಿಕಾರಿ ನೇಮಕಕ್ಕೆ ಸರ್ಕಾರದ ತಯಾರಿ: 2025ರ ನವೆಂಬರ್ 6ರಂದು ಕಂಪ್ಲಿ ಪುರಸಭೆಯ ಸದಸ್ಯರ ಅಧಿಕಾರಾವಧಿ ಪೂರ್ಣಗೊಳ್ಳಲಿದ್ದು, ಸರ್ಕಾರ ಆ ದಿನಾಂಕಕ್ಕೂ ಮೊದಲು ಆಡಳಿತಾಧಿಕಾರಿಯನ್ನು ನೇಮಿಸಲು ಮುಂದಾಗಿತ್ತು. ಈ ಹಿನ್ನೆಲೆ ಅಧ್ಯಕ್ಷರು ಹಾಗೂ ಸದಸ್ಯರು ನ್ಯಾಯಾಲಯದ ಮಧ್ಯಸ್ಥಿಕೆ ಕೋರಿ ಅರ್ಜಿ ಸಲ್ಲಿಸಿದ್ದರು.
ಕಂಪ್ಲಿ ಪುರಸಭೆಯ ಚುನಾವಣೆಯು 2019ರ ನವೆಂಬರ್ 12ರಂದು ನಡೆದಿದ್ದು, ಫಲಿತಾಂಶವನ್ನು ನವೆಂಬರ್ 14ರಂದು ಪ್ರಕಟಿಸಲಾಯಿತು. ನಂತರ 2020ರ ನವೆಂಬರ್ 6ರಂದು ಮೊದಲ ಆಡಳಿತ ಅವಧಿ ಆರಂಭಗೊಂಡಿತು. ಈ ಅವಧಿಯು 2023ರ ಮಾರ್ಚ್ 10ರಂದು ಕೊನೆಯ ಸಭೆಯೊಂದಿಗೆ ಮುಕ್ತಾಯಗೊಂಡಿತು.ಆದರೆ 2023ರ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಗೆ ಬಂದ ಕಾರಣ, ನಂತರದ ಸಭೆಗಳನ್ನು ನಡೆಸಲು ಸಾಧ್ಯವಾಗಲಿಲ್ಲ. ಬಳಿಕ 2023ರ ಮೇ 17ರಂದು ಸಹಾಯಕ ಆಯುಕ್ತರು ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು. ಮೀಸಲು ಪ್ರಕ್ರಿಯೆಯಲ್ಲಿನ ಗೊಂದಲಗಳಿಂದಾಗಿ ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ಸದಸ್ಯರಿಗೆ ಆಡಳಿತ ನಡೆಸಲು ಅವಕಾಶ ದೊರಕಲಿಲ್ಲ.
ಎರಡನೇ ಅವಧಿ ಪ್ರಾರಂಭ: 2025ರ ಜನವರಿ 23ರಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆಯುವ ಮೂಲಕ ಎರಡನೇ ಅವಧಿಯು ಪ್ರಾರಂಭವಾಯಿತು. ನಿಯಮ ಪ್ರಕಾರ ಈ ಅವಧಿಯು 30 ತಿಂಗಳು ಮುಂದುವರಿಯಬೇಕಾಗಿದ್ದು, 2027ರ ಜುಲೈ 22ರಂದು ಮುಕ್ತಾಯಗೊಳ್ಳಬೇಕಾಗಿದೆ.ಕಾನೂನು ಹೋರಾಟದ ಅಂಶ: ಪುರಸಭೆಯ ಅಧ್ಯಕ್ಷರು ಮತ್ತು 23 ಮಂದಿ ಸದಸ್ಯರು ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿಯಲ್ಲಿ, “ನಾವು ಮೊದಲ ಅವಧಿಯಲ್ಲಿ 30 ತಿಂಗಳು ಆಡಳಿತ ನಡೆಸಿದ್ದೇವೆ. ಕಾಯ್ದೆಯ ಪ್ರಕಾರ ಎರಡನೇ ಅವಧಿಯೂ 30 ತಿಂಗಳ ಅವಧಿಗೆ ನಮ್ಮ ಅಧಿಕಾರ ಮುಂದುವರಿಯಬೇಕು. ಸರ್ಕಾರವು ಮಧ್ಯದಲ್ಲೇ ಆಡಳಿತಾಧಿಕಾರಿಯನ್ನು ನೇಮಿಸಲು ಮುಂದಾಗಿರುವುದು ಕಾನೂನುಬಾಹಿರ ಎಂದು ವಾದಿಸಿದ್ದರು.
ನ್ಯಾಯಾಲಯ ಈ ಮನವಿಯನ್ನು ಪ್ರಾಥಮಿಕವಾಗಿ ಪರಿಗಣಿಸಿ, ಸರ್ಕಾರಕ್ಕೆ ಆಡಳಿತಾಧಿಕಾರಿ ನೇಮಕಾತಿ ಕ್ರಮ ಕೈಗೊಳ್ಳದಂತೆ ನವೆಂಬರ್ 4ರವರೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಮುಂದಿನ ವಿಚಾರಣೆ ನವೆಂಬರ್ 6ರಂದು ನಡೆಯಲಿದೆ.ಈ ತೀರ್ಪಿನ ಹಿನ್ನೆಲೆಯಲ್ಲಿ ಪುರಸಭೆ ಅಧ್ಯಕ್ಷರು ಹಾಗೂ ಸದಸ್ಯರು ತಾತ್ಕಾಲಿಕವಾಗಿ ನಿಟ್ಟುಸಿರು ಬಿಟ್ಟಿದ್ದು, ನ್ಯಾಯಾಲಯದ ತೀರ್ಪಿನಿಂದ ಪ್ರಜಾಪ್ರಭುತ್ವದ ಗೌರವ ಕಾಪಾಡಲಾಗಿದೆ. ಜನರಿಂದ ಆಯ್ಕೆಯಾದ ಪ್ರತಿನಿಧಿಗಳಿಗೆ ಅವರ ಅಧಿಕಾರಾವಧಿ ಪೂರ್ಣಗೊಳಿಸಲು ನ್ಯಾಯಾಲಯ ಅವಕಾಶ ನೀಡಿದೆ ಎಂದು ಹೇಳಿದರು.
ಮೀಸಲು ಗೊಂದಲದಿಂದಾಗಿ ಎರಡನೇ ಅವಧಿಯಲ್ಲಿ 30 ತಿಂಗಳ ಆಡಳಿತ ನಡೆಸಲಿಕ್ಕೆ ನಮಗೆ ಅನುವು ದೊರೆತಿರಲಿಲ್ಲ ಹೀಗಾಗಿ ನಮ್ಮ ಹಕ್ಕನ್ನು ಪಡೆದುಕೊಳ್ಳಲು ಕೋರ್ಟ್ ಮೆಟ್ಟಿಲೇರಿದ್ದೆವು. ಇದೀಗ ನ್ಯಾಯಾಲಯದಿಂದ ಮಹತ್ವದ ತೀರ್ಪು ಹೊರ ಬಂದಿದ್ದು ನಮ್ಮ ಹೋರಾಟಕ್ಕೆ ಜಯ ದೊರೆತಂತಾಗಿದೆ ಎನ್ನುತ್ತಾರೆ ಕಂಪ್ಲಿ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್.