ಮಸ್ಕಿ: ದಾಸಶ್ರೇಷ್ಠ ಕನಕದಾಸರ ಜಯಂತಿ ನಿಮಿತ್ತ ಪಟ್ಟಣದ ಕನಕವೃತ್ತದಲ್ಲಿ ಕನಕದಾಸರ ಪ್ರತಿಮೆಗೆ ತಾಲ್ಲೂಕು ಆಡಳಿತದಿಂದ ಶಾಸಕ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್.ಬಸನಗೌಡ ತುರ್ವಿಹಾಳ ಮಾಲಾರ್ಪಣೆ ಮಾಡಿದರು.
ಹಾಲುಮತ ಸಮಾಜದ ಪದಾಧಿಕಾರಿಗಳು, ಮುಖಂಡರು ಆಗಮಿಸಿ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಬಿಜೆಪಿ ಮುಖಂಡರ ಅಸಮಾದಾನ: ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಸ್ಥಳದ ವೇದಿಕೆಯಲ್ಲಿ ಶಾಸಕರು ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು. ಆದರೆ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಅವರಿಗೆ ಆಸನದ ವ್ಯವಸ್ಥೆ ಕಲ್ಪಿಸದಿದ್ದಕ್ಕೆ ಪುರಸಭೆಯ ಬಿಜೆಪಿ ಸದಸ್ಯರು, ಮುಖಂಡರು ಪುರಸಭೆ ಮುಖ್ಯಾಧಿಕಾರಿ ಮುಂದೆ ಅಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.ವಿವಿಧೆಡೆ ಜಯಂತಿ ಆಚರಣೆ: ತಹಶೀಲ್ದಾರ್ ಕಚೇರಿ, ಪುರಸಭೆ, ತಾಲ್ಲೂಕು ಪಂಚಾಯಿತಿ, ಕಾಂಗ್ರೆಸ್, ಬಿಜೆಪಿ ಕಚೇರಿ, ಶಾಸಕರ ಸರ್ಕಾರಿ ಕಚೇರಿ ಸೇರಿದಂತೆ ವಿವಿಧೆಡೆ ಕನಕದಾಸರ ಜಯಂತಿ ಆಚರಿಸಲಾಯಿತು. ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಶಾಲಾ ಕಾಲೇಜುಗಳಲ್ಲಿಯೂ ಕನಕ ಜಯಂತಿ ನಿಮಿತ್ತ ಕನಕರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.