ಜನವರಿ 5ಕ್ಕೆ ದಾವಣಗೆರೆಯಲ್ಲಿ ಸಿಎಂರಿಂದ ಕನಕ ಪುತ್ಥಳಿ ಲೋಕಾರ್ಪಣೆ

KannadaprabhaNewsNetwork |  
Published : Jan 05, 2025, 01:31 AM IST
4ಕೆಡಿವಿಜಿ8, 9, 10-ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ಜ.5ರಂದು ಶ್ರೀ ಕನಕ ದಾಸರ ಜಯಂತಿ ಸಮಾರಂಭದಲ್ಲಿ ಉದ್ಘಾಟನೆಗೆ ಸಿದ್ಧ‍ವಾಗಿರುವ ಶ್ರೀ ಕನಕರ ಪುತ್ಥಳಿ. ..............4ಕೆಡಿವಿಜಿ11-ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ಜ.5ರಂದು ಶ್ರೀ ಕನಕ ದಾಸರ ಜಯಂತಿ ಸಮಾರಂಭಕ್ಕೆ ಸಿದ್ಧವಾಗಿರುವ ಬೃಹತ್ ಪೆಂಡಾಲ್. | Kannada Prabha

ಸಾರಾಂಶ

ದಾವಣಗೆರೆಯಲ್ಲಿ ಇದೀಗ ಕುರುಬ ಸಮಾಜದ ನೇತೃತ್ವದಲ್ಲಿ ಹಿಂದುಳಿದ ವರ್ಗಗಳು, ಸಿದ್ದರಾಮಯ್ಯ ಅಭಿಮಾನಿಗಳ ಬಳಗದಿಂದ ಜ.5ರಂದು ಇದೇ ಮೊದಲ ಬಾರಿಗೆ ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ದಾಸ ಶ್ರೇಷ್ಠ ಕನಕ ದಾಸರ 537ನೇ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ.

ಸಿದ್ದರಾಮಯ್ಯಗೆ ಶಕ್ತಿ ತುಂಬಲು ವೇದಿಕೆ ಸಜ್ಜು । ಕನಕರ 53ನೇ ಜಯಂತ್ಯುತ್ಸವ । ಮುನ್ನಾ ದಿನ ಕುರುಬ ಸಮಾಜದಿಂದ ಬೈಕ್‌ ರ್‍ಯಾಲಿ

ಕನ್ನಡಪ್ರಭ ವಾರ್ತೆ ದಾವಣಗರೆ

ರಾಜ್ಯ ಸರ್ಕಾರದ ವಿರುದ್ದ ವಿಪಕ್ಷ ಬಿಜೆಪಿ ಮುಗಿ ಬಿದ್ದ ಬೆನ್ನಲ್ಲೇ ಸಿದ್ದರಾಮಯ್ಯಗೆ ಪ್ರತಿ ಸಲವೂ ಶಕ್ತಿ ತುಂಬಿ ಹೊಸ ಚೈತನ್ಯ ಮೂಡಲು ಕಾರಣವಾದ ದಾವಣಗೆರೆಯಲ್ಲಿ ಇದೀಗ ಕುರುಬ ಸಮಾಜದ ನೇತೃತ್ವದಲ್ಲಿ ಹಿಂದುಳಿದ ವರ್ಗಗಳು, ಸಿದ್ದರಾಮಯ್ಯ ಅಭಿಮಾನಿಗಳ ಬಳಗದಿಂದ ಜ.5ರಂದು ಇದೇ ಮೊದಲ ಬಾರಿಗೆ ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ದಾಸ ಶ್ರೇಷ್ಠ ಕನಕ ದಾಸರ 537ನೇ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ.

ಜೆಡಿಎಸ್ ಪಕ್ಷವನ್ನು ತೊರೆದು ಬಂದಿದ್ದ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಮುನ್ನ ಇದೇ ದಾವಣಗೆರೆಯಲ್ಲೇ ಅಹಿಂದ ಸಮಾವೇಶ ಆಯೋಜಿಸುವ ಮೂಲಕ ಇಡೀ ರಾಜ್ಯ, ರಾಷ್ಟ್ರಕ್ಕೆ ತಮ್ಮ ಶಕ್ತಿ ಪ್ರದರ್ಶಿಸುವ ಮೂಲಕ ಕಾಂಗ್ರೆಸ್ ನ್ನು ಅಧಿಕಾರಕ್ಕೆ ತಂದಿದ್ದಲ್ಲದೇ ಮುಖ್ಯಮಂತ್ರಿಯಾಗಿದ್ದರು.

ಶ್ರೀ ಕನಕ ದಾಸರ ಜಯಂತ್ಯುತ್ಸವಕ್ಕೆ ಜ.5ರಂದು ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕನಕ ದಾಸರ ಪುತ್ಥಳಿ ಅನಾವರಣಗೊಳಿಸುವರು. ಸಮಾರಂಭದ ಹಿನ್ನೆಲೆಯಲ್ಲಿ ನಗರಾದ್ಯಂತ ಫ್ಲೆಕ್ಸ್, ಬಂಟಿಂಗ್ಸ್‌ಗಳು ರಾರಾಜಿಸುತ್ತಿವೆ. ಸಮಾರಂಭದ ಹಿನ್ನೆಲೆಯಲ್ಲಿ ಜ.5ರ ಬೆಳಿಗ್ಗೆ 9.30ಕ್ಕೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಿಂದ ಹೈಸ್ಕೂಲ್ ಮೈದಾನದವರೆಗೆ ಹಮ್ಮಿಕೊಂಡಿರುವ ಮೆರವಣಿಗೆಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಚಾಲನೆ ನೀಡುವರು. ಮಾಜಿ ಶಾಸಕ ಎಸ್.ರಾಮಪ್ಪ ಸೇರಿದಂತೆ ಕುರುಬ ಸಮಾಜ ಸೇರಿದಂತೆ ಹಿಂದುಳಿದ ವರ್ಗದವರು ಭಾಗವಹಿಸುವರು. ನಾಸಿಕ್ ಡೋಲು, ಡೊಳ್ಳು, ಸಮಾಳ ಸೇರಿ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ.

ಸಮಾರಂಭ ಸ್ಥಳವಾದ ಹೈಸ್ಕೂಲ್ ಮೈದಾನದ ಕಾರ್ಯಕ್ರಮ ಮಧ್ಯಾಹ್ನ 12ಕ್ಕೆ ಆರಂಭವಾಗಲಿದ್ದು, ವಿವಿಧ ಮಠಾಧೀಶರು, ಮುಸ್ಲಿಂ-ಕ್ರೈಸ್ತ ಧರ್ಮಗುರುಗಳ ಸಾನಿಧ್ಯದಲ್ಲಿ ಸಮಾರಂಭವು ಉದ್ಘಾಟನೆಗೊಳ್ಳಲಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ, ಸಚಿವರಾದ ಎಸ್ಸೆಸ್ ಮಲ್ಲಿಕಾರ್ಜುನ, ಜಮೀರ್ ಅಹಮ್ಮದ್, ಸಂತೋಷ ಲಾಡ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸೇರಿದಂತೆ ಜನ ಪ್ರತಿನಿಧಿಗಳು ಭಾಗವಹಿಸುವರು. ಸಮಾರಂಭದಲ್ಲಿ ಪಾಲ್ಗೊಳ್ಳುವ ಜನರಿಗಾಗಿ ಗೋಧಿ ಹುಗ್ಗಿ, ಕೋಸಂಬರಿ, ಅನ್ನ, ಸಾರು, ಉಪ್ಪಿನಕಾಯಿ ಊಟದ ವ್ಯವಸ್ಥೆ ಮಾಡಿರುವುದಾಗಿ ಸಂಘಟಕರು ತಿಳಿಸಿದ್ದಾರೆ.

ಬೈಕ್ ರ್‍ಯಾಲಿ:

ಶ್ರೀ ಕನಕ ಜಯಂತಿ ಅಂಗವಾಗಿ ನಗರದಲ್ಲಿ ಶನಿವಾರ ಕುರುಬ ಸಮಾಜದ ಮುಖಂಡರಾದ ಪಾಲಿಕೆ ಸದಸ್ಯ ಜೆ.ಎನ್.ಶ್ರೀನಿವಾಸ, ಮಂಜುನಾಥ ಇಟ್ಟಿಗುಡಿ, ಅರವಿಂದ ಹಾಲೇಕಲ್ಲು, ಎಸ್.ಎಸ್.ಗಿರೀಶ ಸೇರಿದಂತೆ ಹಲವಾರು ಮುಖಂಡರ ನೇತೃತ್ವದಲ್ಲಿ ಬೃಹತ್ ಬೈಕ್ ರ್‍ಯಾಲಿ ನಡೆಯಿತು.

ನಗರದ ಎಸ್ಸೆಸ್ ಹೈಟೆಕ್ ಆಸ್ಪತ್ರೆ ರಸ್ತೆಯ ಶ್ರೀ ಕಾಳಿದಾಸ ವೃತ್ತದಿಂದ ಆರಂಭವಾದ ಬೈಕ್ ರ್‍ಯಾಲಿಯು ನಗರದ ವಿವಿಧ ರಸ್ತೆಗಳಲ್ಲಿ ಸಾಗಿ, ನಂತರ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮುಕ್ತಾಯಗೊಂಡಿತು.

PREV

Recommended Stories

ಮದ್ದೂರು ಗಣೇಶ ಗಲಾಟೆಗೆ ಪೂರ್ಣ ಮುಸ್ಲಿಮರೇ ಕಾರಣ: ಸಚಿವ ಚಲುವ
ಬುರುಡೆ ಕೇಸ್‌ : ಸಾಕ್ಷಿದಾರರ ಬಂಧನ..? ಮಟ್ಟಣ್ಣವರ್‌, ಜಯಂತ್‌, ಅಭಿಷೇಕ್, ಮನಾಫಾ ವಿಠಲಗೆ ಗ್ರಿಲ್